ಕನ್ನಡ ಸಾಹಿತ್ಯ ಪರಿಷತ್‌ ರಾಜ್ಯಾಧ್ಯಕ್ಷರ ವಿರುದ್ಧ ಪ್ರತಿಭಟನೆ

| Published : Aug 01 2025, 12:00 AM IST

ಸಾರಾಂಶ

ಹಾಲಿ ಅಧ್ಯಕ್ಷರು ಸ್ವಜನ ಪಕ್ಷಪಾತ, ಸರ್ವಾಧಿಕಾರಿ ಧೋರಣೆ ಮತ್ತು ಖಂಡನೀಯ ನಡವಳಿಕೆಗಳಿಂದ ಪರಿಷತ್ತಿನ ಘನತೆಯನ್ನು ಹಾಳು ಮಾಡುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಸರ್ವಾಧಿಕಾರಿ ಧೋರಣೆ ಪ್ರದರ್ಶಿಸುತ್ತಿದ್ದು, ಅವರನ್ನು ಅಮಾನತುಗೊಳಿಸಿ ಕನ್ನಡ ಸಾಹಿತ್ಯ ಪರಿಷತ್ತಿನ ಘನತೆಯನ್ನು ಉಳಿಸಿ ಎಂಬ ಘೋಷ ವಾಕ್ಯದಡಿ ಇಲ್ಲಿನ ಕನ್ನಡ ಪಕ್ಷದ ನೇತೃತ್ವದಲ್ಲಿ ಗುರುವಾರ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ, ಪತ್ರ ಚಳವಳಿಗೆ ಚಾಲನೆ ನೀಡಲಾಯಿತು.

ಈ ವೇಳೆ ಮಾತನಾಡಿದ ಮುಖಂಡರು, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ್‌ ಜೋಶಿ ವಿರುದ್ಧ ಕೇಳಿ ಬಂದಿರುವ ಹಣ ದುರುಪಯೋಗ ಆರೋಪ, ಸರ್ವಾಧಿಕಾರಿ ಧೋರಣೆ ಕುರಿತು ವ್ಯಕ್ತವಾಗಿರುವ ಅಭಿಪ್ರಾಯಗಳು, ನಾಡಿನ ಹಿರಿಯ ಚಿಂತಕರು, ಸಾಹಿತಿಗಳ ಕಡೆಗಣನೆ, ಪ್ರಶ್ನಿಸಿದವರ ವಿರುದ್ಧ ಕ್ಷುಲ್ಲಕ ಕಾನೂನು ಹೋರಾಟ ಸೇರಿದಂತೆ ಅನೇಕ ಘಟನಾವಳಿಗಳು ಖಂಡನೀಯ ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿಗೆ ತನ್ನದೇ ಆದ ಪರಂಪರೆ ಇದ್ದು, ನಾಡಿನ ಸಾಂಸ್ಕೃತಿಕ ಮತ್ತು ಸಾಹಿತ್ಯ ಕ್ಷೇತ್ರವನ್ನು ಪ್ರತಿನಿಧಿಸುವ ಪ್ರಾತಿನಿಧಿಕ ಸಂಸ್ಥೆಯಾಗಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರಿಂದ ಹಿಡಿದು, ನಾಡು ಕಟ್ಟಿದ ಅನೇಕ ಮಹನೀಯರು ಕನ್ನಡ ಸಾಹಿತ್ಯ ಪರಿಷತ್ತು ಕಟ್ಟಿ ಬೆಳೆಸಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಹಾಲಿ ಅಧ್ಯಕ್ಷರು ಸ್ವಜನ ಪಕ್ಷಪಾತ, ಸರ್ವಾಧಿಕಾರಿ ಧೋರಣೆ ಮತ್ತು ಖಂಡನೀಯ ನಡವಳಿಕೆಗಳಿಂದ ಪರಿಷತ್ತಿನ ಘನತೆಯನ್ನು ಹಾಳು ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರದ ಅನುದಾನದಲ್ಲಿ ನಡೆಯುತ್ತಿರುವ ಕನ್ನಡ ಸಾಹಿತ್ಯ ಪರಿಷತ್ತು ನಾಡಿನ ಸಮಗ್ರ ಕನ್ನಡಿಗರನ್ನು ಒಳಗೊಳ್ಳಬೇಕೇ ಹೊರತು ಯಾವುದೇ ವ್ಯಕ್ತಿ ಅಥವಾ ಸ್ವಂತ ಹಿತಾಸಕ್ತಿಗಳನ್ನಲ್ಲ. ಹೀಗಾಗಿ ಕೂಡಲೇ ರಾಜ್ಯ ಸರ್ಕಾರ ಕಸಾಪ ಅಧ್ಯಕ್ಷರನ್ನು ಅಮಾನತುಗೊಳಿಸಿ ಆಡಳಿತಾಧಿಕಾರಿಯನ್ನು ನೇಮಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಕನ್ನಡ ಪಕ್ಷದ ಮುಖಂಡರಾದ ಸಂಜೀವನಾಯಕ್, ಡಿ.ಪಿ.ಆಂಜನೇಯ, ಜಿಲ್ಲಾಧ್ಯಕ್ಷ ಮುನಿಪಾಪಯ್ಯ, ತಾಲೂಕು ಅಧ್ಯಕ್ಷ ಡಿ.ವೆಂಕಟೇಶ್‌, ವಿವಿಧ ಸಂಘಟನೆಗಳ ಮುಖಂಡರಾದ ಕನ್ನಡ ಜಾಗೃತ ಪರಿಷತ್ತಿನ ಕೆ.ವೆಂಕಟೇಶ್, ಛವಾದಿ ಮಹಾ ಸಭಾದ ಗುರುರಾಜಪ್ಪ, ಡಾ.ರಾಜ್‌ಕುಮಾರ್‌ ಅಭಿಮಾನಿಗಳ ಸಂಘದ ವಿ.ಪರಮೇಶ್, ಸುರೇಶ್‌, ತಿಮ್ಮರಾಜು, ತೂಬಗೆರೆ ಷರೀಫ್, ರೈತ ಸಂಘದ ಮುತ್ತೇಗೌಡ, ಶಿವಕುಮಾರ್, ತಾಲೂಕು ಶಿವರಾಜ್‌ಕುಮಾರ್‌ ಕನ್ನಡ ಸೇನಾ ಸಮಿತಿಯ ಜೆ.ಆರ್.ರಮೇಶ್, ನಿವೃತ್ತ ಶಿಕ್ಷಕ ಬಸವರಾಜಯ್ಯ ಮತ್ತಿತರರು ಪಾಲ್ಗೊಂಡರು.

ಫೋಟೋ-31ಕೆಡಿಬಿಪಿ4- ದೊಡ್ಡಬಳ್ಳಾಪುರದಲ್ಲಿ ಕಸಾಪ ರಾಜ್ಯಾಧ್ಯಕ್ಷರ ಅಮಾನತ್ತಿಗೆ ಆಗ್ರಹಿಸಿ ಕನ್ನಡ ಪಕ್ಷದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಪತ್ರ ಚಳವಳಿಗೆ ಚಾಲನೆ ನೀಡಲಾಯಿತು.