ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಕೊಲ್ಕತ್ತಾದಲ್ಲಿ ವೈದ್ಯೆ ಮೇಲೆ ನಡೆದ ಹತ್ಯಾಚಾರ ಖಂಡಿಸಿ ಐಎಂಎ ದೇಶಾದ್ಯಂತ ಒಪಿಡಿ ಬಂದ್ ಮಾಡಿ ಪ್ರತಿಭಟನೆ ನಡೆಸುವಂತೆ ಕರೆ ನೀಡಿದ್ದ ಬಂದ್‌ಗೆ ಜಿಲ್ಲೆಯಲ್ಲೂ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಜಿಲ್ಲಾ ಕೇಂದ್ರದ ಸಿಮ್ಸ್‌ನ ವೈದ್ಯ ಸಂಘಟನೆಯಡಿಯಲ್ಲಿ ಕಿರಿಯ ವೈದ್ಯರು ನಗರದ ಜಿಲ್ಲಾಸ್ಪತ್ರೆ ಮುಂಭಾಗ ಪ್ರತಿಭಟನೆ ನಡೆಸಿ ಡೀನ್ ಡಾ.ಮುಂಜುನಾಥ್ ಅವರಿಗೆ ಮನವಿ ಸಲ್ಲಿಸಿದರು.ಜಿಲ್ಲಾಸ್ಪತ್ರೆ ಮುಂದೆ ಜಮಾಯಿಸಿದ ವೈದ್ಯರು ಘಟನೆಯನ್ನು ಖಂಡಿಸಿ ಭಿತ್ತಿ ಪತ್ರಗಳನ್ನು ಹಿಡಿದು ಆಕ್ರೋಶ ವ್ಯಕ್ತಪಡಿಸಿ ಸ್ಥಳಾಕ್ಕಾಗಮಿಸಿದ ಡೀನ್ ಡಾ.ಮುಂಜುನಾಥ್ ಅವರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನಾಕಾರರು ಈ ಘೋರ ಅಪರಾಧದಿಂದಾಗಿ ನಾವು ತೀವ್ರವಾಗಿ ಅಘಾತಕ್ಕೊಳಗಾಗಿದ್ದೇವೆ, ನಮಗೆ ರಕ್ಷಣೆ ಬೇಕು ಎಂದು ಆಗ್ರಹಿಸಿದರು.ಈ ಕ್ರೂರ ಹತ್ಯೆಯು ವೈದ್ಯಕೀಯ ಸಮುದಾಯವನ್ನು ಧ್ವಂಸಗೊಳಿಸಿದೆ. ಈ ಪ್ರಕರಣದಲ್ಲಿ ಸೂಕ್ತ ನ್ಯಾಯ ಸಿಗುವವರೆಗೂ ನಮ್ಮ ನಿರಂತರ ಹೋರಾಟ ಇರುತ್ತದೆ. ವೈದ್ಯಕೀಯ ವೃತ್ತಿಪರರರಿಗೆ ಕಾನೂನು ರಕ್ಷಣೆಯನ್ನು ಬಲಪಡಿಸಿ ಹಿಂಸಾಚಾರ ಪ್ರಕರಣಗಳನ್ನು ತ್ವರಿತವಾಗಿ ಪತ್ತೆ ಹಚ್ಚಿ ಆರೋಪಿಗಳಿಗೆ ತಕ್ಕ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿದರು.ಮನವಿ ಸ್ಪೀಕರಿಸಿದ ಸಿಮ್ಸ್ ಡೀನ್ ಡಾ.ಮಂಜುನಾಥ್ ಮಾತನಾಡಿ, ಇದೊಂದು ಅವಮಾನವೀಯ ಕೃತ್ಯ ಕೊರೋನಾ ಸೇರಿದ ಹಲವಾರು ಸಂದರ್ಭಗಳಲ್ಲಿ ಜೀವದ ಹಂಗು ತೊರೆದು ಹೋರಾಡಿದ ವೈದ್ಯರುಗಳಿಗೆ ಸೂಕ್ತ ರಕ್ಷಣೆ ಬೇಕಾಗಿದೆ ಎಂದರು.ಇಂದು ಜಿಲ್ಲೆಯಾದ್ಯಂತ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಕ್ಲಿನಿಕ್‌ಗಳಲ್ಲಿ ಹೊರ ರೋಗಿ ವಿಭಾಗವನ್ನು ಬಂದ್ ಮಾಡಿ ಪ್ರತಿಭಟನೆ ವ್ಯಕ್ತಪಡಿಸಲಾಗುತ್ತಿದ್ದು, ಸರ್ಕಾರಿ ವೈದ್ಯರು ಕಪ್ಪುಪಟ್ಟಿ ಕಟ್ಟಿಕೊಂಡು ತುರ್ತು ಮತ್ತು ಹೆರಿಗೆ ವಿಭಾಗಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದರು. ವೈದ್ಯರ ಮುಷ್ಕರದಿಂದಾಗಿ ಹೊರ ರೋಗಿ ವಿಭಾಗ ಸಂಪೂರ್ಣ ಬಂದ್ ಆಗಿತ್ತು, ಖಾಸಗಿ ಅಸ್ಪತ್ರೆಗಳಲ್ಲೂ ಹೊರ ರೋಗಿ ವಿಭಾಗ ಬಂದ್ ಆಗಿದ್ದರಿಂದ ಜನರು ಪರದಾಡುವಂತಾಯಿತು.
ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷ ಡಾ. ಪವನ್, ಪ್ರಧಾನ ಕಾರ್ಯದರ್ಶಿ ಡಾ.ನಂದಕಿಶೋರ್, ಡಾ.ದೀಪಾ ಮಿಶ್ರಾ, ಡಾ.ಸಂದ್ಯಾ, ಡಾ. ಸೈಯದ್ ಜೀಸನ್ ಹುಸೇನ್, ಡಾ.ವಿನುತ, ಪದಾಧಿಕಾರಿಗಳು ಭಾಗವಹಿಸಿದ್ದರು.