ಸಾರಾಂಶ
ಕನ್ನಡಪ್ರಭ ವಾರ್ತೆ ತಿಪಟೂರು
ಕೇಂದ್ರ ಸರ್ಕಾರ ತಿದ್ದುಪಡಿ ಮಾಡುತ್ತಿರುವ ಕಾರ್ಮಿಕ ಕಾನೂನುಗಳು ಕಾರ್ಮಿಕರ ವಿರೋಧಿಯಾಗಿದ್ದು, ಕಾರ್ಮಿಕರ ಮರಣ ಶಾಸನವಾಗಿರುವ ತಿದ್ದುಪಡಿಯನ್ನು ವಾಪಸ್ ಪಡೆಯಬೇಕೆಂದು ಒತ್ತಾಯಿಸಿ, ನಗರದ ಉಪವಿಭಾಗಾಧಿಕಾರಿಗಳ ಕಚೇರಿ ಮುಂಭಾಗ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.ಸಿಐಟಿಯು ಮುಖಂಡ ಸುಬ್ರಹ್ಮಣ್ಯ ಮಾತನಾಡಿ, ಕೇಂದ್ರ ಸರ್ಕಾರ ತಿದ್ದುಪಡಿ ಮಾಡುತ್ತಿರುವ ಕಾರ್ಮಿಕ ಕಾಯ್ದೆಗಳು ಕಾರ್ಮಿಕರ ಪಾಲಿನ ಮರಣ ಶಾಸನಗಳಾಗಿವೆ. ಸರ್ಕಾರ ಕಾರ್ಮಿಕ ವಿರೋಧಿ ಕಾಯ್ದೆ ಜಾರಿಗೊಳಿಸಬಾರದು. ಎಂಟು ಗಂಟೆ ಕೆಲಸದ ಅವಧಿ, ಕಾಯಂ ಕೆಲಸ, ಕೆಲಸಕ್ಕೆ ತಕ್ಕ ವೇತನ, ಸುರಕ್ಷತೆ, ಮುಷ್ಕರದ ಹಕ್ಕು, ಸಂಘ ಕಟ್ಟುವ ಹಕ್ಕು ಇನ್ನಿತರ ಹಕ್ಕುಗಳನ್ನು ಇಲ್ಲದಾಗಿಸಿ ಕಾರ್ಮಿಕರನ್ನು ಗುಲಾಮರನ್ನಾಗಿಸಲು ಕೇಂದ್ರ ಸರ್ಕಾರ ಕಾರ್ಪೊರೇಟ್ ಪರ ರೂಪಿಸಿರುವ ಕಾರ್ಮಿಕ ವಿರೋಧಿ ನಾಲ್ಕು ಸಂಹಿತೆಗಳನ್ನು ರದ್ದುಪಡಿಸಬೇಕು. ಪ್ರಸ್ತುತ ಬೆಲೆಗಳಿಗೆ ಅನುಗುಣವಾಗಿ ಎಲ್ಲಾ ಸಂಘಟಿತ, ಅಸಂಘಟಿತ, ಗುತ್ತಿಗೆ ಕಾರ್ಮಿಕರು ಮತ್ತು ಸ್ಕೀಂ ನೌಕರರಿಗೂ ಕನಿಷ್ಠ ವೇತನ ನಿಗದಿಪಡಿಸಬೇಕು. ಕಟ್ಟಡ ಕಾರ್ಮಿಕರು, ಆಟೋ- ಟ್ಯಾಕ್ಸಿ ಚಾಲಕರು, ಮನೆ ಕೆಲಸಗಾರರು, ಬೀದಿ ವ್ಯಾಪಾರಿಗಳು, ಟೈಲರ್‌ಗಳು, ಬೀಡಿ- ಅಗರಬತ್ತಿ, ಹೆಂಚು ಕಾರ್ಮಿಕರು ಇನ್ನಿತರ ಎಲ್ಲಾ ಅಸಂಘಟಿತ ಕಾರ್ಮಿಕರು ಮತ್ತು ಕೃಷಿ- ತೋಟ ಕಾರ್ಮಿಕರು ಸೇರಿದಂತೆ ಎಲ್ಲಾ ವಿಭಾಗದ ಕಾರ್ಮಿಕರಿಗೆ ಕನಿಷ್ಠ ಮಾಸಿಕ ಪಿಂಚಣಿ ಖಾತ್ರಿಪಡಿಸುವುದು ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.
ಪ್ರಾಂತ ರೈತ ಸಂಘ ಹಾಗೂ ಕಾರ್ಮಿಕ ಸಂಘಟನೆ ಮುಖಂಡ ಚನ್ನಬಸವಣ್ಣ ಮಾತನಾಡಿ, ವಿದ್ಯುತ್ ತಿದ್ದುಪಡಿ ಮಸೂದೆ ವಾಪಸ್ ಪಡೆಯಬೇಕು. ವಿದ್ಯುತ್ ಖಾಸಗೀಕರಣ ಮತ್ತು ಸ್ಮಾರ್ಟ್ ಮೀಟರ್ ಅಳವಡಿಕೆ ನಿಲ್ಲಿಸಬೇಕು. ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರ ಮತ್ತು ವಿದ್ಯುತ್ ಮೇಲಿನ ಸಬ್ಸಿಡಿ ಹೆಚ್ಚಿಸಬೇಕು. ಮನ್ನಾ ಮತ್ತು ಬೆಳೆ ವಿಮೆ ಯೋಜನೆಗಳನ್ನು ಜಾರಿಗೆ ತರಬೇಕು. ಸಂಯುಕ್ತ ಕಿಸಾನ್ ಸಮಗ್ರ ಸಾಲ ಮೋರ್ಚಾ ನೀಡಿದ ಲಿಖಿತ ಭರವಸೆಯನ್ನು ಕೇಂದ್ರ ಸರ್ಕಾರ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.ಸೌಹಾರ್ದ ತಿಪಟೂರು ಅಧ್ಯಕ್ಷ ಹಾಗೂ ಕಾರ್ಮಿಕ ಮುಖಂಡ ಅಲ್ಲಾಭಕ್ಷು ಮಾತನಾಡಿ, ಉದ್ಯೋಗದ ಹಕ್ಕನ್ನು ಮೂಲಭೂತ ಹಕ್ಕಾಗಿಸಬೇಕು. ಖಾಲಿಯಿರುವ ಹುದ್ದೆಗಳ ಭರ್ತಿ ಮಾಡಬೇಕು. ಉದ್ಯೋಗ ಸೃಷ್ಟಿ ಮಾಡಬೇಕು. ಗ್ರಾಮೀಣ ಉದ್ಯೋಗಖಾತ್ರಿ ಯೋಜನೆಯಡಿ ವಾರ್ಷಿಕ 200 ದಿನ ಕೆಲಸದಂತೆ ದಿನಕ್ಕೆ 600 ರು. ಕೂಲಿ ನಿಗದಿಪಡಿಸಬೇಕೆಂದು ಒತ್ತಾಯಿಸಿದರು .
ಪ್ರತಿಭಟನೆಯಲ್ಲಿ ಕಾರ್ಮಿಕ ಕಾಯ್ದೆ ತಿದ್ದುಪಡಿ ಪ್ರತಿಗಳಿಗೆ ಬೆಂಕಿಹಚ್ಚಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಮುಖಂಡರಾದ ರಾಜಮ್ಮ, ಅನಸೂಯಮ್ಮ ಮತ್ತಿತರರಿದ್ದರು.