ಎಲ್.ಬಿ.ಕಾಲೇಜು ಕೊಠಡಿ ಅವ್ಯವಸ್ಥೆ ಖಂಡಿಸಿ ಪ್ರತಿಭಟನೆ

| Published : Nov 23 2024, 12:30 AM IST

ಸಾರಾಂಶ

ಎಲ್.ಬಿ.ಕಾಲೇಜಿನ ತರಗತಿ ಕೊಠಡಿಯಲ್ಲಿನ ಅವ್ಯವಸ್ಥೆ ಖಂಡಿಸಿ ಬಿ.ಎ.ವಿಭಾಗದ ವಿದ್ಯಾರ್ಥಿಗಳು ಕಾಲೇಜು ಎದುರು ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಸಾಗರ

ತರಗತಿ ಕೊಠಡಿಯಲ್ಲಿನ ಅವ್ಯವಸ್ಥೆಯನ್ನು ಖಂಡಿಸಿ ಶುಕ್ರವಾರ ಎಲ್.ಬಿ.ಕಾಲೇಜಿನ ಬಿ.ಎ.ವಿಭಾಗದ ವಿದ್ಯಾರ್ಥಿಗಳು ಕಾಲೇಜು ಎದುರು ಪ್ರತಿಭಟನೆ ನಡೆಸಿದರು.

ಕಾಲೇಜು ಆಡಳಿತ ಮಂಡಳಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ವಿದ್ಯಾರ್ಥಿಗಳನ್ನು ಆಡಳಿತ ಮಂಡಳಿಯ ಪ್ರಮುಖರು ತರಗತಿ ಕೊಠಡಿಗಳಿಗೆ ಕರೆದುಕೊಂಡು ಹೋಗಿ ಪರಿಶೀಲಿಸಿದಾಗ ತರಗತಿ ಕೊಠಡಿಯಲ್ಲಿ ಹಲವು ಲೋಪಗಳು ಕಂಡು ಬಂದಿವೆ.

ಅನೇಕ ಬಾರಿ ತರಗತಿ ಕೊಠಡಿ ಅವ್ಯವಸ್ಥೆ ಕುರಿತು ಆಡಳಿತ ಮಂಡಳಿ, ಪ್ರಾಚಾರ್ಯರು ಹಾಗೂ ಪ್ರಾಧ್ಯಾಪಕರ ಗಮನಕ್ಕೆ ತಂದಿದ್ದೇವೆ. ಇತರೆ ವಿಭಾಗಗಳಿಗೆ ಉತ್ತಮ ಸೌಲಭ್ಯ ನೀಡಿದ್ದು, ಬಿಎ ವಿಭಾಗವನ್ನು ಮಾತ್ರ ತೀರ ಕಡೆಗಣಿಸಲಾಗಿದೆ. ತರಗತಿಯಲ್ಲಿ ಫ್ಯಾನ್ ಹಾಕಲು ಹೋದರೆ ಶಾಕ್ ಹೊಡೆಯುತ್ತಿದೆ. ತರಗತಿ ಛಾವಣಿ ಹೆಂಚುಗಳೆಲ್ಲಾ ಒಡೆದು ಹೋಗಿದ್ದು ಕುಳಿತುಕೊಳ್ಳಲು ಭಯವಾಗುತ್ತದೆ ಎಂದು ವಿದ್ಯಾರ್ಥಿಗಳು ದೂರಿದರು.

ತರಗತಿ ಕೊಠಡಿ ಧೂಳುಮಯವಾಗಿದ್ದು ಕುಳಿತುಕೊಳ್ಳಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಆಡಳಿತ ಮಂಡಳಿ ಕೇಳಿದಷ್ಟು ಹಣವನ್ನು ನಾವು ಕಟ್ಟಿದ್ದೇವೆ. ಆದರೂ ಸೌಲಭ್ಯ ಕೊಡುತ್ತಿಲ್ಲ. ತಕ್ಷಣ ಬಿಎ ವಿಭಾಗದ ತರಗತಿಗಳಿಗೆ ಮೂಲಭೂತ ಸೌಲಭ್ಯ ಒದಗಿಸಬೇಕು. ಇಲ್ಲವಾದಲ್ಲಿ ಪ್ರತಿಭಟನೆ ಮುಂದುವರಿಸುವುದಾಗಿ ವಿದ್ಯಾರ್ಥಿಗಳು ಎಚ್ಚರಿಕೆ ನೀಡಿದರು.

ಆಡಳಿತ ಮಂಡಳಿ ಪರವಾಗಿ ಪ್ರಧಾನ ಕಾರ್ಯದರ್ಶಿ ಡಾ.ಎಚ್.ಎಂ.ಶಿವಕುಮಾರ್ ವಿದ್ಯಾರ್ಥಿಗಳ ಅಹವಾಲು ಸ್ವೀಕರಿಸಿ, ಸೋಮವಾರದೊಳಗೆ ಮೂಲಭೂತ ಸೌಲಭ್ಯ ಒದಗಿಸುವ ಭರವಸೆ ನೀಡಿದ ನಂತರ ಪ್ರತಿಭಟನೆ ನಿಲ್ಲಿಸಲಾಯಿತು.