ಕೃಷಿ ಪಂಪ್‌ಸೆಟ್‌ಗೆ ಆಧಾರ್ ಜೋಡಣೆ ಖಂಡಿಸಿ ಪ್ರತಿಭಟನೆ

| Published : Sep 07 2024, 01:33 AM IST

ಕೃಷಿ ಪಂಪ್‌ಸೆಟ್‌ಗೆ ಆಧಾರ್ ಜೋಡಣೆ ಖಂಡಿಸಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯ ಸರ್ಕಾರ ಬೆಳೆ ವಿಮೆಯೂ ಸೇರಿದಂತೆ ಹಲವಾರು ವಿಚಾರಗಳಲ್ಲಿ ರೈತರ ವಿರೋಧಿ ನಿಲುವು ತಾಳಿದೆ. ಕೈಗಾರಿಕಾ ವಲಯ ಸೇರಿ ಎಲ್ಲಾ ವಲಯಕ್ಕೂ ಕೃಷಿ ಪೂರಕವಾಗಿದೆ. ಕೃಷಿಯನ್ನು ಉತ್ತೇಜಿಸುವ ಯಾವುದೇ ಯೋಜನೆ ಸರ್ಕಾರದಲ್ಲಿ ಇಲ್ಲದಿದ್ದರೂ ಕೃಷಿಯನ್ನು ಸಂಪೂರ್ಣವಾಗಿ ನಾಶಮಾಡುವ ಹಲವಾರು ಯೋಜನೆಗಳ ಜಾರಿಗೆ ಸರ್ಕಾರ ಮುಂದಾಗಿರುವುದು ನೋವಿನ ಸಂಗತಿ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ(ಪ್ರೊ.ಬಣ) ರಾಜ್ಯ ಉಪಾಧ್ಯಕ್ಷ ರೆಡ್ಡಿಹಳ್ಳಿವೀರಣ್ಣ ಬೆಸ್ಕಾಂ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಪ್ರಭವಾರ್ತೆ ಚಳ್ಳಕೆರೆ

ಅವರು, ಶುಕ್ರವಾರ ಬೆಸ್ಕಾಂ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ, ಬೆಸ್ಕಾಂ ಇಲಾಖೆ ಇತ್ತೀಚೆಗೆ ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಆಧಾರ್ ಜೋಡಣೆ ಮಾಡುವ ಸೂಚನೆ ನೀಡಿದ್ದು, ಯಾವುದೇ ಲಿಖಿತ ಆದೇಶ ನೀಡದೆ, ಕೇವಲ ಇಲಾಖೆಯ ಲೈನ್‌ಮ್ಯಾನ್‌ಗಳ ಮೂಲಕ ರೈತರಿಗೆ ಸಂದೇಶ ರವಾನಿಸುತ್ತಿದೆ. ಇದರಿಂದ ರೈತರಿಗೆ ಗಾಯದಮೇಲೆ ಬರೆಎಳೆದಂತಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯಾವುದೇ ಕಾರಣಕ್ಕೂ ಕೃಷಿ ಪಂಪ್‌ಸೆಟ್‌ಗಳಿಗೆ ಆಧಾರ್ ಜೋಡಣೆ ಮಾಡಬಾರದು ಎಂದು ಸರ್ಕಾರದ ಮೇಲೆ ಒತ್ತಡ ತರುವ ನಿಟ್ಟಿನಲ್ಲಿ ಪ್ರತಿಭಟನೆ ಮಾಡಲಾಗುತ್ತಿದೆ. ಸರ್ಕಾರ ತನ್ನ ಮೊಂಡು ಧೋರಣೆ ಮುಂದುವರೆಸಿದರೆ ಬೀದಿಗಿಳಿದು ಉಗ್ರ ಹೋರಾಟ ನಡೆಸಲು ರೈತ ಸಂಘ ಹಿಂಜರಿಯದು ಎಂದು ಎಚ್ಚರಿಸಿದರು.

ರೈತ ಸಂಘದ ಮುಖಂಡ ಎಂ.ಎನ್. ಚನ್ನಕೇಶವಮೂರ್ತಿ ಮಾತನಾಡಿ, ಬೆಸ್ಕಾಂ ಇಲಾಖೆ ರೈತರನ್ನು ಹಗುರವಾಗಿ ಪರಿಗಣಿಸಿದ್ದಾರೆ. ಬೆಸ್ಕಾಂ ಇಲಾಖೆಯ ಎಲ್ಲಾ ಯೋಜನೆಗಳನ್ನು ಜಾರಿಗೊಳಿಸಲು ಸಾಧ್ಯವಿಲ್ಲ. ರೈತ ಸಂಘ ಗಟ್ಟಿಯಾಗಿ ನೆಲೆಯೂರಿದೆ. ಕೆಲ ತಿಂಗಳ ಹಿಂದೆ ಬೆಸ್ಕಾಂ ಇಲಾಖೆ ವಿರುದ್ಧ ಪ್ರತಿಭಟಿಸಿ ಯಶಸ್ವಿಯಾಗಿದ್ದೇವೆ. ರೈತರನ್ನು ಸಂಕಷ್ಟಕ್ಕೆ ದೂಡುವ ಹುನ್ನಾರದ ವಿರುದ್ಧ ನಮ್ಮ ಹೋರಾಟ ಮುಂದುವರೆಯುವುದು ಎಂದರು.

ಕಿಸಾನ್‌ಸಭಾ ಜಿಲ್ಲಾಧ್ಯಕ್ಷ ದೊಡ್ಡ ಉಳ್ಳಾರ್ತಿ ಕರಿಯಣ್ಣ ಮಾತನಾಡಿ, ಬೆಸ್ಕಾಂ ಇಲಾಖೆಗೆ ರೈತರ ಬಗ್ಗೆ ಯಾವುದೇ ಕಾಳಜಿ ಇಲ್ಲವೆಂಬುವುದನ್ನು ಪದೇ ಪದೇ ತೋರಿಸುತ್ತಿದೆ. ರೈತರು ಬೆಳೆದ ಬೆಳೆಗೆ ಬೆಂಬಲ ಬೆಲೆ ಸಿಗುತ್ತಿಲ್ಲ. ರೈತನ ಬೆಳೆ ಜಮೀನಿನಲ್ಲಿರುವ ಸಂದರ್ಭದಲ್ಲಿ ನಿರಂತರವಾಗಿ ವಿದ್ಯುತ್ ಕೈಕೊಡುತ್ತಿದೆ. ಈ ಬಗ್ಗೆ ಇಲಾಖೆ ಸಿಬ್ಬಂದಿಯನ್ನು ಪ್ರಶ್ನಿಸಿದರೆ ಏನು ಉತ್ತರ ನೀಡುವುದಿಲ್ಲ. ಈ ಬಗ್ಗೆ ಇಲಾಖೆಯ ಹಿರಿಯ ಅಧಿಕಾರಿಗಳು ಮೌನವಾಗಿದ್ದಾರೆ. ರೈತರನ್ನು ರಕ್ಷಿಸುವ ಬದಲು ಶಿಕ್ಷಿಸಲಾಗುತ್ತಿದೆ ಎಂದು ದೂರಿದರು.

ಮನವಿ ಸ್ವೀಕರಿಸಿ ಮಾತನಾಡಿದ ಬೆಸ್ಕಾಂ ಎಇಇ ಜಿ. ಶಿವಪ್ರಸಾದ್, ಕೃಷಿ ಪಂಪ್‌ಸೆಟ್‌ಗಳ ಆಧಾರ್ ಜೋಡಣೆ ವಿರುದ್ಧ ಪ್ರತಿಭಟಿಸಿ ಮನವಿ ನೀಡಿದ್ದೀರಿ, ನಿಮ್ಮ ಮನವಿಯನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರುವ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಪ್ರತಿಭಟನೆಯಲ್ಲಿ ತಾಲೂಕು ಅಧ್ಯಕ್ಷ ಕೆ.ಸಿ. ಶ್ರೀಕಂಠಮೂರ್ತಿ, ಪ್ರಧಾನ ಕಾರ್ಯದರ್ಶಿ ಆರ್. ಬಸವರಾಜ, ಜಿಲ್ಲಾ ಕಾರ್ಯದರ್ಶಿ ಪಾತಪ್ಪರೆಡ್ಡಿ, ಜಿಲ್ಲಾ ಉಪಾಧ್ಯಕ್ಷ ಹಿರೇಹಳ್ಳಿ ಸ್ವಾಮಿ, ಗೌಡ್ರಚಿಕ್ಕಣ್ಣ, ಬೋರಮ್ಮ, ಬುಡ್ನಹಟ್ಟಿ ತಿಪ್ಪೇಸ್ವಾಮಿ, ನರಸಿಂಹಪ್ಪ, ಬಿ. ಜಯಣ್ಣ ಮುಂತಾದವರು ಭಾಗವಹಿಸಿದ್ದರು.