ಗ್ರಾಮ ಪಂಚಾಯಿತಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಮಂತೂರು ಮಾತನಾಡಿ, ದೇಶದ ಸೇವಾ ವಲಯಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಕನಿಷ್ಠ ವೇತನ ಖಾತರಿ ಪಡಿಸುವ ಕಾಯ್ದೆ ಜಾರಿಗೆ ಬರಬೇಕಿದೆ ಎಂದರು.
ರೋಣ: ಕೇಂದ್ರ ಸರ್ಕಾರದ ನವ ಉದಾರೀಕರಣ ನೀತಿ ವಿರೋಧಿಸಿ ಫೆ. 12ರಂದು ಜಿಸಿಟಿಯು ನೇತೃತ್ವದಲ್ಲಿ ರೋಣದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಸಿಐಟಿಯು ಜಿಲ್ಲಾ ಮುಖಂಡ ಬಾಲು ರಾಠೋಡ ತಿಳಿಸಿದರು.ಪಟ್ಟಣದಲ್ಲಿ ಜಿಸಿಟಿಯು ನೇತೃತ್ವದಲ್ಲಿ ಸಂಯುಕ್ತ ಹೋರಾಟ ಕರ್ನಾಟಕ ಸಮಿತಿ ಕರೆಯ ಮೇರೆಗೆ ಫೆ. 12ರ ಪ್ರತಿಭಟನೆ ಪ್ರಚಾರ ಕರಪತ್ರ ಬಿಡುಗಡೆ ಮಾಡಿ ಮಾತನಾಡಿದರು.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭಾನುವಾರ ಮಂಡಿಸಿದ ಬಜೆಟ್ ಶ್ರೀಮಂತ ಬಂಡವಾಳಗಾರರ ಬಜೆಟ್ ಆಗಿದೆ. ದೇಶದ ರೈತರು, ಕಾರ್ಮಿಕರು, ಸೇರಿದಂತೆ ಶಿಕ್ಷಣ ಕ್ಷೇತ್ರಕ್ಕೆ ಇದೊಂದು ನಿರಾಶಾದಾಯಕ ಬಜೆಟ್ ಆಗಿದೆ. ಇದನ್ನು ವಿರೋಧಿಸಿ ಫೆ. 12ಕ್ಕೆ ಉತ್ಪಾದನೆ ಸೇವೆ ಸ್ಥಗಿತಗೊಳಿಸಿ ರೈತರು, ಕೃಷಿ ಕಾರ್ಮಿಕರು, ಗ್ರಾಮ ಪಂಚಾಯಿತಿ, ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಬೇಕು. ಫೆ. 12ರಂದು ಸ್ವಯಂ ಪ್ರೇರಿತವಾಗಿ ಅಂಗಡಿ, ಮುಂಗಟ್ಟುಗಳನ್ನು ಬಂದ್ ಮಾಡಿ ಮುಷ್ಕರವನ್ನು ಯಶಸ್ವಿಗೊಳಿಸಲು ಸಾರ್ವಜನಿಕರು ಸಹಕರಿಸಬೇಕು ಎಂದರು. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಸಂಪತ್ತನ್ನು ಸೃಷ್ಟಿಸುವ ಕಾರ್ಮಿಕರನ್ನು ಸಂಪೂರ್ಣವಾಗಿ ಗುಲಾಮರನ್ನಾಗಿಸಲು ಕಾರ್ಮಿಕ ಕಾನೂನುಗಳನ್ನು ರದ್ದುಗೊಳಿಸಿ ಹೊಸದಾದ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಜಾರಿಗೆ ತರಲು ಈಗಾಗಲೇ ಅಂತಿಮ ಪ್ರಕಟಣೆ ಹೊರಡಿಸಿದ್ದು, ಇದು ಕಾರ್ಮಿಕರಿಗೆ ಮರಣಶಾಸನವಾಗಿದೆ. ಕಾರ್ಪೊರೇಟ್ ಕಂಪನಿಗಳು ಮತ್ತು ಬಂಡವಾಳಗಾರರ ಪರವಾಗಿ ಕೇಂದ್ರ ಸರ್ಕಾರ ವರ್ತಿಸುತ್ತಿರುವುದು ನಾಚಿಕೆಗೇಡಿನ ಸಂಗತಿ. ಈಗಾಗಲೇ ಸಾರ್ವಜನಿಕ ಸ್ವತ್ತುಗಳಾದ ವಿದ್ಯುತ್, ದೂರಸಂಪರ್ಕ, ಕಲ್ಲಿದ್ದಲು, ಗಣಿಗಾರಿಕೆ, ರೈಲ್ವೆ, ಹೆದ್ದಾರಿಗಳು, ಬಂದರುಗಳು, ಹಡಗುಕಟ್ಟೆಗಳು, ನಗರಾಭಿವೃದ್ಧಿ, ತೈಲ ಮುಂತಾದವುಗಳನ್ನು ಖಾಸಗಿ ಕಂಪನಿಗಳಿಗೆ ವರ್ಗಾಯಿಸಲಾಗಿದೆ. ಇದು ಸಾಲದು ಎಂಬಂತೆ 2026ರಿಂದ 30ರ ತನಕ ₹10 ಲಕ್ಷ ಕೋಟಿ ಹಣಗಳಿಕೆಗಾಗಿ ಖಾಸಗಿ ಕಂಪನಿಗಳಿಗೆ ಎಂಎಂಪಿಯನ್ನು ನವೀಕರಿಸಲಾಗಿದೆ ಎಂದು ಕಿಡಿಕಾರಿದರು.ಗ್ರಾಮ ಪಂಚಾಯಿತಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಮಂತೂರು ಮಾತನಾಡಿ, ದೇಶದ ಸೇವಾ ವಲಯಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಕನಿಷ್ಠ ವೇತನ ಖಾತರಿ ಪಡಿಸುವ ಕಾಯ್ದೆ ಜಾರಿಗೆ ಬರಬೇಕಿದೆ. ಭೂಸ್ವಾಧೀನ ಕಾಯ್ದೆಗೆ ತಿದ್ದುಪಡಿ ತರುವ ಮುಖಾಂತರ ರೈತರಿಗೆ ಅನ್ಯಾಯ ಎಸಗಲಾಗುತ್ತಿದ್ದು, ಮೇಕ್ ಇನ್ ಇಂಡಿಯಾ ಹೆಸರಿನಲ್ಲಿ ಕಾರ್ಮಿಕರನ್ನು ಸಂಘಟಿತಗೊಳ್ಳದಂತೆ ಹುನ್ನಾರ ಮಾಡುತ್ತಿರುವ ಕೇಂದ್ರ ಸರ್ಕಾರ ಸರ್ವಾಧಿಕಾರಿ ಧೋರಣೆ ತಾಳುತ್ತಿದೆ ಎಂದು ಆಕ್ರೋಶ ಹೊರಹಾಕಿದರು.ಈ ವೇಳೆ ಶ್ರೀದೇವಿ ಜಕ್ಕಣ್ಣವರ, ಚಂದ್ರಕಲಾ ಸೊಬರಟ್ಟಿ, ಎಸ್‌ಎಫ್‌ಐ ಸಂಘಟನೆಯ ಜಿಲ್ಲಾ ಅಧ್ಯಕ್ಷ ಚಂದ್ರು ರಾಠೋಡ, ಅಂಗನವಾಡಿ ಸಿಬ್ಬಂದಿಗಳಾದ ಶಾರದಾ ಸುಂಕದ, ರಂಗಮ್ಮ ರಾಯಣಗೌಡ್ರ, ಶೃತಿ ಭಜಂತ್ರಿ, ಶೋಭಾ ಭಜಂತ್ರಿ, ಭಾರತ ಗಂಟಿ, ಮಂಜುನಾಥ, ಸಂಗಮೇಶ ಹಡಪದ ಸೇರಿದಂತೆ ಇತರರು ಇದ್ದರು.