ಹಲವು ಮಾರ್ಗಗಳಲ್ಲಿ ಹೊಸ ರೈಲು ಸೇವೆಗಳನ್ನು ಆರಂಭಿಸಿದ್ದು, ಕಳೆದ ಕೆಲವು ವರ್ಷಗಳಲ್ಲಿ ಛಟ್ ಪೂಜಾ, ಯುಗಾದಿ, ಓಣಂ, ದೀಪಾವಳಿ, ಹೋಳಿ ಹಾಗೂ ಬೇಸಿಗೆ ವಿಶೇಷ ಸೇರಿದಂತೆ ಸುಮಾರು 96 ವಿಶೇಷ ರೈಲುಗಳನ್ನು ಓಡಿಸಲಾಗಿದೆ. ಇದರಿಂದ ರೈಲು ಸೇವೆಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ.
ಕನ್ನಡಪ್ರಭ ವಾರ್ತೆ ಮೈಸೂರು
ರೈಲ್ವೆ ಇಲಾಖೆಯಲ್ಲಿ ಪ್ರಮುಖ ಚಟುವಟಿಕೆಗಳನ್ನು ಖಾಸಗೀಕರಣಗೊಳಿಸುವ, ಹೊರಗುತ್ತಿಗೆ ನೀಡುವ ಕೇಂದ್ರ ಸರ್ಕಾರದ ಕ್ರಮ ವಿರೋಧಿಸಿ ಸೌತ್ ವೆಸ್ಟರ್ನ್ ರೈಲ್ವೆ ಮಜ್ದೂರ್ ಯೂನಿಯನ್ ನವರು ನೈಋತ್ಯ ರೈಲ್ವೆ ಮೈಸೂರು ವಿಭಾಗದ ಡಿಆರ್ ಎಂ ಕಚೇರಿ ಮುಂಭಾಗದಲ್ಲಿ ಮಂಗಳವಾರ ಪ್ರತಿಭಟಿಸಿದರು.ಹಲವು ಮಾರ್ಗಗಳಲ್ಲಿ ಹೊಸ ರೈಲು ಸೇವೆಗಳನ್ನು ಆರಂಭಿಸಿದ್ದು, ಕಳೆದ ಕೆಲವು ವರ್ಷಗಳಲ್ಲಿ ಛಟ್ ಪೂಜಾ, ಯುಗಾದಿ, ಓಣಂ, ದೀಪಾವಳಿ, ಹೋಳಿ ಹಾಗೂ ಬೇಸಿಗೆ ವಿಶೇಷ ಸೇರಿದಂತೆ ಸುಮಾರು 96 ವಿಶೇಷ ರೈಲುಗಳನ್ನು ಓಡಿಸಲಾಗಿದೆ. ಇದರಿಂದ ರೈಲು ಸೇವೆಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಆದರೆ, ಲೋಕೋ ಪೈಲಟ್ ಮತ್ತು ಟ್ರೈನ್ ಮ್ಯಾನೇಜರ್ ಹುದ್ದೆಗಳನ್ನು ಹೊರತುಪಡಿಸಿ ಉಳಿದ ವಿಭಾಗಗಳಲ್ಲಿ ಹೊಸ ಹುದ್ದೆಗಳನ್ನು ಸೃಷ್ಟಿಸಿಲ್ಲ. ಹಾಲಿ ಇರುವ ನೌಕರರು ವಾರದ ವಿಶ್ರಾಂತಿ ಮತ್ತು ರಜೆಗಳನ್ನು ತ್ಯಾಗ ಮಾಡಿ ಸೇವೆ ಸಲ್ಲಿಸುತ್ತಿದ್ದರೂ, ಆಡಳಿತ ಮಂಡಳಿ ಹೊರ ಗುತ್ತಿಗೆಗೆ ಮೊರೆ ಹೋಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ವಿದ್ಯುತ್ ವಿಭಾಗದಲ್ಲಿ ಎಸಿ ಬೋಗಿಗಳ ನಿರ್ವಹಣೆ ಮತ್ತು ಎಸ್ಕೋರ್ಟಿಂಗ್ ಕೆಲಸಗಳನ್ನು ಹೊರ ಗುತ್ತಿಗೆ ನೀಡಲಾಗಿದೆ. ಇದರಿಂದ ಕಾಯಂ ನೌಕರರು ಹೆಚ್ಚುವರಿ ಸಿಬ್ಬಂದಿ ಆಗುವ ಅಪಾಯವಿದೆ. ಸಂಪೂರ್ಣ ವಿದ್ಯುತೀಕರಣಗೊಂಡಿದ್ದರೂ ಟಿಆರ್ ಡಿ ವಿಭಾಗದಲ್ಲಿ ಹೊಸ ಹುದ್ದೆಗಳನ್ನು ಸೃಷ್ಟಿಸಿಲ್ಲ. ಯಾಂತ್ರಿಕ ವಿಭಾಗದಲ್ಲಿ ಬೋಗಿಗಳ ಒಳ ಭಾಗದ ನಿರ್ವಹಣೆ ಮತ್ತು ಸ್ವಚ್ಛತಾ ಕಾರ್ಯಗಳನ್ನೂ ಹೊರಗುತ್ತಿಗೆ ನೀಡಲಾಗಿದೆ. ಹೊರಗುತ್ತಿಗೆ ಬದಲಾಗಿ ಕಾಯಂ ನೌಕರರನ್ನು ನೇಮಿಸಿಕೊಂಡರೆ ಕೆಲಸದ ಗುಣಮಟ್ಟ ಸುಧಾರಿಸುತ್ತದೆ. ಜತೆಗೆ ನಿರುದ್ಯೋಗಿ ಯುವಕರಿಗೆ ಉದ್ಯೋಗ ದೊರೆಯುತ್ತದೆ ಎಂದು ಅವರು ಆಗ್ರಹಿಸಿದರು.8ನೇ ವೇತನ ಆಯೋಗದಲ್ಲಿ ಕನಿಷ್ಠ ಮೂಲ ವೇತನವನ್ನು 69000 ರೂ. ನಿಗದಿಪಡಿಸಬೇಕು. ಆಯೋಗದ ಶಿಫಾರಸು ವರದಿಯನ್ನು ಶೀಘ್ರ ಸಲ್ಲಿಸಬೇಕು. ಹೊಸ ಚಟುವಟಿಕೆ ಮತ್ತು ಕೆಲಸದ ಹೊರೆಗೆ ಅನುಗುಣವಾಗಿ ಹೆಚ್ಚುವರಿ ಹುದ್ದೆಗಳನ್ನು ಸೃಷ್ಟಿಸಬೇಕು. ಪಾಯಿಂಟ್ಸ್ ಮೆನ್ ಗಳ ವರ್ಗೀಕೃತ ಕೆಲಸದ ಅವಧಿಯನ್ನು 12 ಗಂಟೆಗಳಿಂದ 8 ಗಂಟೆಗಳಿಗೆ ಇಳಿಸಬೇಕು ಎಂದು ಅವರು ಒತ್ತಾಯಿಸಿದರು.
ರೈಲ್ವೆ ನೌಕರರ ಕ್ವಾಟ್ರಸ್ ಗಳನ್ನು ಆಧುನೀಕರಿಸಿ ಅಭಿವೃದ್ಧಿಪಡಿಸಬೇಕು. ಸುರಕ್ಷತಾ ವಿಭಾಗದ ಎಲ್ಲಾ ಸಿಬ್ಬಂದಿಗೆ ಅಪಾಯ ಮತ್ತು ಕಷ್ಟಕರ ಭತ್ಯೆ ನೀಡಬೇಕು. ಹೊರ ಡಿಪೋಗಳಿಗೆ ತೆರಳುವ ಲೋಕೋ ರನ್ನಿಂಗ್ ಸಿಬ್ಬಂದಿಯ 9 ಗಂಟೆಗಳ ಕೆಲಸದ ಅವಧಿ ನಿರ್ಬಂಧ ಕಡಿತಗೊಳಿಸಬೇಕು. ಪ್ರಸ್ತುತ ಇರುವ ಪಿಎಲ್ ಬಿ ಬೋನಸ್ ಸೀಲಿಂಗ್ ಮಿತಿ ಹೆಚ್ಚಿಸಬೇಕು ಎಂದು ಅವರು ಆಗ್ರಹಿಸಿದರು.ಯೂನಿಯನ್ ಮೈಸೂರು ವಿಭಾಗದ ವಿಭಾಗೀಯ ಅಧ್ಯಕ್ಷ ಎಲ್.ಎಸ್. ವೆಂಕಟೇಶ್, ಕಾರ್ಯದರ್ಶಿ ಪಿ. ಶಿವಪ್ರಕಾಶ್, ವಲಯ ಅಧ್ಯಕ್ಷ ಎಂ. ನಾಗೇಂದ್ರನ್, ಖಜಾಂಚಿ ಕೆ. ಗಿರೀಶ್ ಚಂದಿರ್ ಮೊದಲಾದವರು ಇದ್ದರು.