ಸಾರಾಂಶ
ಗಜೇಂದ್ರಗಡ: ಇತ್ತೀಚೆಗೆ ಸಿಇಟಿ ವೇಳೆ ಶಿವಮೊಗ್ಗ, ಬೀದರ್, ಧಾರವಾಡ ಕೇಂದ್ರಗಳಲ್ಲಿ ಕೆಲ ವಿದ್ಯಾರ್ಥಿಗಳು ಧರಿಸಿದ್ದ ಜನಿವಾರ ತೆಗೆಸಿದ್ದನ್ನು ಖಂಡಿಸಿ ಗಜೇಂದ್ರಗಡ ಬ್ರಾಹ್ಮಣ ಸಮಾಜ ಹಾಗೂ ಸಮಸ್ತ ಯಜ್ಞೋಪವೀತ ಸಮಾಜ ನೇತೃತ್ವದಲ್ಲಿ ಪಟ್ಟಣದ ಕಾಲಕಾಲೇಶ್ವರ ವೃತ್ತದಲ್ಲಿ ಬುಧವಾರ ಪ್ರತಿಭಟನೆ ನಡೆಸುವ ಮೂಲಕ ತಹಸೀಲ್ದಾರಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಬ್ರಾಹ್ಮಣ ಸಮಾಜದ ಅಧ್ಯಕ್ಷ ರಾಮಚಂದ್ರ ಗಾಡಗೋಳಿ ಮಾತನಾಡಿ, ದೇಶದಲ್ಲಿ ಪ್ರತಿಯೊಬ್ಬರಿಗೂ ಅವರವರ ಧರ್ಮ ಪಾಲಿಸುವ ಹಕ್ಕಿದೆ. ಹೀಗಿರುವಾಗ ಸಿಇಟಿ ಪರೀಕ್ಷೆಯಲ್ಲಿ ಅಧಿಕಾರಿಗಳು ನಮ್ಮ ಬ್ರಾಹ್ಮಣ ಸಮಾಜದ ವಿದ್ಯಾರ್ಥಿಗಳಿಗೆ ಜನಿವಾರ ತೆಗೆಸಿರುವುದು ಅಮಾನವೀಯ ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ನಡೆಯದಂತೆ ರಾಜ್ಯ ಸರ್ಕಾರ ಕ್ರಮಗೊಳ್ಳಬೇಕು ಎಂದರು.ಎಸ್.ಎಸ್.ಕೆ ಸಮಾಜದ ಮುಖಂಡ ಭಾಸ್ಕರಸಾ ಶೀಂಗ್ರಿ ಮಾತನಾಡಿ, ಬ್ರಾಹ್ಮಣರು ಶಾಂತಿಪ್ರಿಯರು ಸರ್ಕಾರ ಇದನ್ನು ಗಂಭಿರವಾಗಿ ಪರಿಗಣಿಸಿ ತಪ್ಪಿತಸ್ಥ ಅಧಿಕಾರಿಗಳನ್ನು ಕೂಡಲೇ ಕ್ರಮಕೈಗೊಳ್ಳಲು ಮುಂದಾಗಬೇಕು ಎಂದರು.
ನ್ಯಾಯವಾದಿ ಶ್ರೀಕಾಂತ ಅವದೂತ ಮಾತನಾಡಿ, ಜನಿವಾರ ತೆಗೆಸುವುದು ಯಾರಿಗೂ ಹಕ್ಕು ಇಲ್ಲ, ಹೀಗಿರುವಾಗ ಜನಿವಾರ ತೆಗೆಸಿರುವುದು ಖಂಡನೀಯ, ಇಂಥ ಘಟನೆಗಳು ಮರುಕಳಿಸಬಾರದು. ಸಮಾಜದ ಮೇಲೆ ಒಂದು ರೀತಿ ಅನ್ಯಾಯವಾಗಿದ್ದು, ತಪ್ಪಿಸ್ಥರ ಮೇಲೆ ಸೂಕ್ತ ಕಾನೂನು ಕ್ರಮಕೈಗೊಳ್ಳಲು ಸರ್ಕಾರ ಮುಂದಾಗಬೇಕು ಎಂದರು.ವಿಶ್ವ ಹಿಂದು ಪರಿಷತ್ ಜಿಲ್ಲಾ ಕಾರ್ಯದರ್ಶಿ ಸಂಜೀವ ಜೋಶಿ ಮಾತನಾಡಿ, ಸನಾತನ ಧರ್ಮದ ಕಡೆಗೆ ಆಕರ್ಷಿತವಾಗುತ್ತಿರುವ ಸಂದರ್ಭದಲ್ಲಿ ನಮ್ಮ ಧರ್ಮದ ಬಗ್ಗೆ ಆಸ್ತಕ್ತಿ ಕಡಿಮೆಯಾಗಿದೆ. ಈ ಹಿನ್ನೆಲೆಯಲ್ಲಿ ನಾವು ಯೋಚನೆ ಮಾಡಬೇಕಿದೆ. ವಿದ್ಯಾರ್ಥಿಗಳು ಧರಿಸಿದ್ದ ಜನಿವಾರ ತೆಗೆಸಿರುವುದು ಸಮಸ್ತ ಹಿಂದೂ ಧರ್ಮದ ಮೇಲಿನ ದೌರ್ಜನ್ಯ ಎಂದು ಆಕ್ರೋಶ ವ್ಯಕ್ತಡಿಸಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ ಕಿರಣಕುಮಾರ ಕುಲಕರ್ಣಿ ಪ್ರತಿಭಟನಾನಿರತರ ಮನವಿ ಸ್ವೀಕರಿಸಿದರು.ವಿಶ್ವನಾಥಸಾ ಬಾಂಡಗೆ, ಲಕ್ಷ್ಮಣಸಾ ಬಾಕಳೆ, ತುಕಾರಾಮಸಾ ಶೀಂಗ್ರಿ, ಲಕ್ಷ್ಮಣ ರಂಗ್ರೇಜಿ, ನಾಗೇಶ ಶೀಂಗ್ರಿ ಹಾಗೂ ಕಲ್ಲಿನಾಥಭಟ್ಟ ಜೀರೆ, ಸತೀಶ ಕುಲಕರ್ಣಿ, ಎಸ್.ಜಿ. ಕುಲಕರ್ಣಿ, ಗಿರೀಶ ಕುಲಕರ್ಣಿ, ರಘುನಾಥ ತಾಸಿನ, ಶ್ರೀನಿವಾಸ ತೈಲಂಗ್, ರವಿ ಕುಲಕರ್ಣಿ, ಎಸ್.ಬಿ. ಕೋಟ್ನಿಸ್, ಆರ್.ಎಂ. ಕುಲಕರ್ಣಿ, ಎಚ್.ಆರ್. ಕೆರಿಕಟ್ಟಿ, ವಾಸು ಕುಲಕರ್ಣಿ, ಗೋಪಾಲ ಕುಲಕರ್ಣಿ, ವಿನಾಯಕ, ರಾಜಪುರೋಹಿತ, ಪ್ರಾಣೇಶ ಗುಡಿ, ವಿನಾಯಕ ಜೀರೆ ಸೇರಿದಂತೆ ಇತರರು ಇದ್ದರು.