ಸಾರಾಂಶ
ವೆಲ್ ವರ್ತ್ ಸಿಟಿ ಅಪಾರ್ಟ್ಮೆಂಟ್‌ನ ಆವರಣದಲ್ಲಿ ನಿವೃತ್ತ ಕೆಎಎಸ್ ಅಧಿಕಾರಿ ಕೆ.ಮಥಾಯಿ ವಿರುದ್ಧ ಪ್ರತಿಭಟನೆ ನಡೆಸಲಾಯಿತು.
ಯಲಹಂಕ : ಕ್ಷೇತ್ರದ ಮಾರಸಂದ್ರ ಸಮೀಪವಿರುವ ಪ್ರಾವಿಡೆಂಟ್ ವೆಲ್ ವರ್ತ್ ಸಿಟಿ ಅಪಾರ್ಟ್ಮೆಂಟ್‌ನ ಆವರಣದಲ್ಲಿ ಇರುವ ತುಳಸೀಕಟ್ಟೆ ಮತ್ತು ಅಶ್ವಥ ಕಟ್ಟೆಗೆ ನಿವೃತ್ತ ಕೆಎಎಸ್ ಅಧಿಕಾರಿ ಕೆ.ಮಥಾಯಿ ಅವರು ಕೋಮು ಸಂಘರ್ಷದ ಲೇಪನ ಹಚ್ಚಿ ವಿವಾದ ಸೃಷ್ಟಿಸುತ್ತಿದ್ದಾರೆ ಎಂದು ಆರೋಪಿಸಿ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು, ಅಪಾರ್ಟ್ಮೆಂಟ್ ನಿವಾಸಿಗಳು ಹಾಗೂ ಸ್ಥಳೀಯ ಬಿಜೆಪಿ ಮುಖಂಡರು ಶನಿವಾರ ಪ್ರತಿಭಟನೆ ನಡೆಸಿ, ಮಥಾಯಿ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಒತ್ತಾಯಿಸಿದರು.
ಈ ವೇಳೆ ಮಾತನಾಡಿದ ಬಿಜೆಪಿ ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ ಸತೀಶ್ ಕಡತನಮಲೆ, ಪ್ರಾವಿಡೆಂಟ್ ವೆಲ್ವರ್ತ್ ಸಿಟಿ ಅಪಾರ್ಟ್ಮೆಂಟ್ ಆವರಣದಲ್ಲಿ ಇರುವ ತುಳಸೀ ಕಟ್ಟೆ, ಅಶ್ವಥ ಕಟ್ಟೆ ನೂರಾರು ವರ್ಷಗಳಿಂದ ಇದೆ. ಇಲ್ಲಿನ ಸುತ್ತಮುತ್ತಲಿನ ಗ್ರಾಮಗಳ ಜನ ಜಾತ್ರೆ, ಉತ್ಸವದಂತಹ ವಿಶೇಷ ಸಂದರ್ಭಗಳಲ್ಲಿ ಇಲ್ಲಿನ ತುಳಸೀ ಕಟ್ಟೆ ಮತ್ತು ಅಶ್ವತ್ಥ ಕಟ್ಟೆಗೆ ಪೂಜೆ ಸಲ್ಲಿಸಲಾಗುತ್ತದೆ. ಅಪಾರ್ಟ್ಮೆಂಟ್ ಮಾಲೀಕರಿಗೆ ಜಾಗ ಮಾರಾಟ ಮಾರಾಟ ಮಾಡುವ ವೇಳೆಯಲ್ಲಿ ರೈತರು ಈ ತುಳಸೀ ಕಟ್ಟೆಯ ಜಾಗವನ್ನು ಸರ್ಕಾರಿ ಜಾಗವಾಗಿ ಘೋಷಣೆ ಮಾಡಿ, ಹಾಗೆಯೇ ಉಳಿಸಬೇಕೆಂಬ ಷರತ್ತು ವಿಧಿಸಿದ್ದರು. ಆದರೆ ಇತ್ತೀಚೆಗೆ ಅಪಾರ್ಟ್‌ಮೆಂಟ್ ಸಹ ಮಾಲೀಕ, ನಿವೃತ್ತ ಅಧಿಕಾರಿ ಕೆ.ಮಥಾಯಿ ಈ ಸ್ಥಳ ಇನ್ನೊಂದು ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿಯ ಘಟನೆಗೆ ಸಾಕ್ಷಿಯಾಗಲಿದೆ ಎಂದು ತಪ್ಪು ಮಾಹಿತಿ ಹರಡುತ್ತಿರುವುದು ವಿಷಾದದ ಸಂಗತಿ ಎಂದರು.
ಅಪಾರ್ಟ್ಮೆಂಟ್‌ನಲ್ಲಿ ಕೋಮು ಸಂಘರ್ಷದ ಕಿಡಿ ಹಚ್ಚುತ್ತಿದ್ದಾರೆ. ಮಥಾಯಿ ಅವರನ್ನು ಬಂಧಿಸಿ, ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವುದರ ಜತೆಗೆ ಗಡಿಪಾರು ಮಾಡಬೇಕೆಂದು ಒತ್ತಾಯಿಸಿದರು.
ಅಪಾರ್ಟ್ಮೆಂಟ್ ನಿವಾಸಿ ಎಸ್.ಕೆ.ಬಾಷಾ ಮಾತನಾಡಿ, ಅಪಾರ್ಟ್ಮೆಂಟ್‌ನಲ್ಲಿ ಮಥಾಯಿವರು ಹೇಳುವ ರೀತಿಯಲ್ಲಿ ಯಾವ ಅಂಶವೂ ಇಲ್ಲ. ಇಲ್ಲಿನ ನಿವಾಸಿಗಳೆಲ್ಲರೂ ಅನ್ಯೂನ್ಯವಾಗಿದ್ದಾರೆ. ಭಾವೈಕ್ಯತೆಯ ವಾತಾವರಣವನ್ನು ಕಲುಷಿತ ಗೊಳಿಸುವ ಪ್ರಯತ್ನವನ್ನು ಮಥಾಯಿಯವರು ಬಿಡಬೇಕು ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಅರಕೆರೆ ಗ್ರಾಪಂ ಮಾಜಿ ಅಧ್ಯಕ್ಷ ಕೆ.ಆರ್.ತಿಮ್ಮೇಗೌಡ, ತಾಪಂ ಮಾಜಿ ಅಧ್ಯಕ್ಷ ಮುನಿದಾಸಪ್ಪ, ಬಿಜೆಪಿ ಮುಖಂಡ ಅಶೋಕ್, ಸಿ.ಎಲ್.ಎನ್.ಗೌಡ, ಗ್ರಾಪಂ ಮಾಜಿ ಅಧ್ಯಕ್ಷರಾದ ಮುನಿಲಕ್ಷ್ಮಮ್ಮ ಪರಶುರಾಮ್, ಭಾಗ್ಯಮ್ಮ ಈಶ್ವರಾಚಾರ್, ಮಾಜಿ ಉಪಾಧ್ಯಕ್ಷೆ ಪದ್ಮಾ ಮುನಿಕೃಷ್ಣ, ಸಂಜಯ್, ಸತೀಶ್ ದುಬೆ, ಪವನ್, ಯೂಸುಫ್ ಸೋಗಿ, ಅರುಣ್, ಚೊಕ್ಕನಹಳ್ಳಿ ನಾಗೇಶ್, ರಮೇಶ್, ಸ್ಥಳೀಯ ಗ್ರಾಮಸ್ಥರಿದ್ದರು.