ಸಾರಾಂಶ
ಅಂಕೋಲಾ: ಬಾಳೆಗುಳಿಯಿಂದ ಯಲ್ಲಾಪುರ ಗಡಿ ಭಾಗದವರೆಗೆ ರಸ್ತೆ ಅವ್ಯವಸ್ಥೆ ಖಂಡಿಸಿ ಹೊನ್ನಳ್ಳಿ ಬಳಿ ಉಕ ಲಾರಿ ಮಾಲೀಕರ ಸಂಘದ ಆಶ್ರಯದಲ್ಲಿ ಹೆದ್ದಾರಿ ತಡೆದು ಪ್ರತಿಭಟಿಸಲಾಯಿತು.
ಉತ್ತರ ಕನ್ನಡ ಜಿಲ್ಲಾ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಮಾಧವ ನಾಯಕ ಮಾತನಾಡಿ, ಬಾಳೆಗುಳಿಯಿಂದ ಯಲ್ಲಾಪುರ ಗಡಿ ಭಾಗದ ವರೆಗೆ ರಸ್ತೆ ಅವ್ಯವಸ್ಥೆಯಿಂದಾಗಿ ವಾಹನ ಮಾಲೀಕರು ಹಾಗೂ ಚಾಲಕರು ಸಂಕಷ್ಟ ಅನುಭವಿಸುವಂತಾಗಿದೆ. ಕಾಂಕ್ರೀಟ್ ರಸ್ತೆ ಮಾಡುವ ಬದಲು ಡಾಂಬರೀಕರಣ ರಸ್ತೆಯಿಂದಾಗಿ ರಸ್ತೆಯ ಗುಣಮಟ್ಟ ಬಹುಕಾಲ ತಾಳಿಕೆ-ಬಾಳಿಕೆ ಬಾರದಂತಾಗಿದೆ. ಅಡಿ ಎತ್ತರದ ಗುಂಡಿಗಳು ರಸ್ತೆಯೆಲ್ಲೆಡೆ ತುಂಬಿಕೊಂಡಿದ್ದು, ಮಣ್ಣು ತುಂಬಿ ತೇಪೆ ಹಚ್ಚುವ ಕಾರ್ಯಕ್ಕೆ ಕಂಪನಿಯವರು ಮುಂದಾಗಿದ್ದಾರೆ. ತುರ್ತು ಅವಗಡಗಳ ಸಂದರ್ಭದಲ್ಲಿ ದಿನದ 24 ತಾಸುಗಳ ವರೆಗೆ ಸೇವೆ ನೀಡುತ್ತಿದ್ದ 108 ವಾಹನದ ಸೇವೆಯನ್ನು 8 ತಾಸು ಕಡಿತಗೊಳಿಸಲಾಗಿದ್ದು, ಅಪಘಾತಕ್ಕೊಳಗಾದವರು ಆಸ್ಪತ್ರೆ ಸೇರುವ ಮುನ್ನವೇ ಪ್ರಾಣ ಕಳೆದುಕೊಳ್ಳುವಂತಾಗಿದೆ. ಹೆದ್ದಾರಿಗೆ ಹೊಂದಿಕೊಂಡಿರುವ ಸೇತುವೆಗಳು ಶಿಥಿಲಗೊಂಡಿದ್ದು, ಕಬ್ಬಿಣದ ಬೋಲ್ಟ್‌ಗಳು ಮೇಲ್ಪದರದಿಂದ ಹೊರಗಡೆ ಕಾಣಿಸಿಕೊಂಡಿದೆ. ಧಾರಣ ಸಾಮರ್ಥ್ಯ ಕಳೆದುಕೊಂಡಿರುವ ಸೇತುವೆಯನ್ನು ನವೀಕರಣಗೊಳಿಸಬೇಕಿದೆ. ಅಲ್ಲದೇ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಗ್ರಾಪಂ ವ್ಯಾಪ್ತಿಯಲ್ಲಿ ಅರೆಕಾಲಿಕ ಪೋಲಿಸ್ ರಕ್ಷಣಾ ದಳವನ್ನು ರಚಿಸುವುದರೊಂದಿಗೆ ಅಪಘಾತದಲ್ಲಿ ನೊಂದವರಿಗೆ ಸಕಾಲದಲ್ಲಿ ನೆರವಾಗುವ ಕಾರ್ಯವಾಗಬೇಕಿದೆ ಎಂದರು.ಲಾರಿ ಚಾಲಕರ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ಎಸ್. ಮಣಿ ಮಾತನಾಡಿ, ಕರಾವಳಿ ಭಾಗವನ್ನು ಸಂಪರ್ಕಿಸುವ ಯಲ್ಲಾಪುರ-ಅಂಕೋಲಾ ರಸ್ತೆಯ ದುಸ್ಥಿತಿಯಿಂದಾಗಿ ಲಾರಿ ಚಾಲಕರು ಹಾಗೂ ಮಾಲೀಕರು ಸಮಸ್ಯೆಯ ಸುಳಿಯಲ್ಲಿ ಸಿಲುಕುವಂತಾಗಿದೆ. ಸೇವೆಗೂ ಮುನ್ನವೇ ತೆರಿಗೆ ಹಣ ಪಾವತಿಸುವ ವಾಹನ ಮಾಲೀಕರ ಸಮಸ್ಯೆಗೆ ಸೂಕ್ತ ಪರಿಹಾರ ನೀಡದಿದ್ದಲ್ಲಿ ಮುಂಬರುವ ದಿನಗಳಲ್ಲಿ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.ಲಾರಿ ಮಾಲೀಕರ ಸಂಘದ ಗೌರವಾಧ್ಯಕ್ಷ ಗಿರೀಶ ಮಲ್ನಾಡ್ ಮಾತನಾಡಿ, ಲಾರಿ ಮಾಲೀಕರನ್ನು ಹಿಂದೆ ಸಾಹುಕಾರರೆಂದು ಗುರುತಿಸುತ್ತಿದ್ದರು. ಆದರೆ ಇತ್ತೀಚಿನ ದಶಕಗಳಲ್ಲಿ ತಲೆದೋರಿರುವ ರಸ್ತೆ ದುರವಸ್ಥೆಯಿಂದಾಗಿ ಲಾರಿ ಮಾಲೀಕರು ಸಾಲಗಾರರಾಗಿ ಬೀದಿ ಪಾಲಾಗುವ ಸ್ಥಿತಿ ತಲೆದೋರಿದೆ. ಕಳೆದ ಏಳು ವರ್ಷಗಳಿಂದ ರಸ್ತೆ ನಿರ್ವಹಣೆ ಮಾಡದ ಅಧಿಕಾರಿಗಳ ಬೇಜವಾಬ್ದಾರಿತನದಿಂದಾಗಿ ಹಲವರು ಪ್ರಾಣ ಕಳೆದುಕೊಳ್ಳುವಂತಾಗಿದ್ದರೆ ಇನ್ನುಳಿದವರು ಗಾಯಾಳುಗಳಾಗಿ ಬದುಕನ್ನು ಕಳೆದುಕೊಂಡಿದ್ದಾರೆ ಎಂದು ಹೇಳಿದರು.
ಜಿಪಂ ಮಾಜಿ ಸದಸ್ಯ ಜಿ.ಎಂ. ಶೆಟ್ಟಿ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಮಂಜೂರು ಮಾಡುವ ಹಣವನ್ನು ರಾಜ್ಯ ಸರ್ಕಾರದ ಅಧೀನ ಸಿಬ್ಬಂದಿ ಸಮರ್ಪಕವಾಗಿ ವಿನಿಯೋಗಿಸಬೇಕಾದ ಜವಾಬ್ದಾರಿ ತೋರಬೇಕು. ಈ ನಿಟ್ಟಿನಲ್ಲಿ ಕ್ಷೇತ್ರದ ಸಂಸದರಿಗೆ ರಸ್ತೆಯ ನೈಜ ಚಿತ್ರಣದೊಂದಿಗೆ ಒತ್ತಡ ತರುವ ಕಾರ್ಯವನ್ನು ಎಲ್ಲರೂ ಒಗ್ಗಟ್ಟಾಗಿ ಪ್ರದರ್ಶಿಸಬೇಕಿದೆ ಎಂದರು.ಟಿಪ್ಪರ್ ಮಾಲೀಕರ ಹಾಗೂ ಚಾಲಕರ ಸಂಘದ ಅಧ್ಯಕ್ಷ ಗಣಪತಿ ಮೂಲೆಮನೆ, ಗಜಾನನ ಟ್ಯಾಕ್ಸಿ ಮಾಲೀಕರ ಸಂಘದ ಅಧ್ಯಕ್ಷ ಗಜು ನಾಯ್ಕ, ಗ್ರಾಪಂ ಸದಸ್ಯ ಆನಂದು ಗೌಡ, ಲಾರಿ ಮಾಲೀಕರ ಸಂಘದ ಉಪಾಧ್ಯಕ್ಷ ತುಳಸಿದಾಸ ಕಾಮತ, ನಾಮದೇವ ಬೆಳಗಾವಿ, ಸುಜಯ, ಶಿವರಾಮ ಗಾಂವಕರ ಚಂಡಿಯಾ, ಶಾಂತಾರಾಮ ನಾಯಕ ಅಗಸೂರು, ಬಾಲಚಂದ್ರ ಶೆಟ್ಟಿ, ಬೀರಣ್ಣ ನಾಯಕ, ನಾರಾಯಣ ನಾಯಕ ಡೊಂಗ್ರಿ, ನಿತ್ಯಾನಂದ ನಾಯ್ಕ ಹಟ್ಟಿಕೇರಿ, ಸಂದೇಶ ನಾಯ್ಕ ಕುಂಬಾರಕೇರಿ, ರಾಘು ನಾಯ್ಕ ಕೇಣಿ ಉಪಸ್ಥಿತರಿದ್ದರು. ಮೌನಾಚರಣೆ: ಹೆದ್ದಾರಿ ಅವಗಡದಲ್ಲಿ ಸಾವಿಗೀಡಾದವರನ್ನು ಸ್ಮರಿಸಿ ಒಂದು ನಿಮಿಷ ಮೌನ ಆಚರಿಸಲಾಯಿತು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಾದ ಸತೀಶ ಬಿಲ್ಲೆ, ರಾಜೇಂದ್ರ ಇದ್ದರು. ತಾಲೂಕು ದಂಡಾಧಿಕಾರಿ ಡಾ. ಚಿಕ್ಕಪ್ಪ ನಾಯಕ ಮನವಿಪತ್ರ ಸ್ವಿಕರಿಸಿದರು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಿ. ಕೃಷ್ಣಮೂರ್ತಿ, ಸಿಪಿಐ ಚಂದ್ರಶೇಖರ ಮಠಪತಿ ಬಂದೋಬಸ್ತ್ ಕೈಗೊಂಡಿದ್ದರು.
ಅಣಕು ಪ್ರದರ್ಶನ: ಹೆದ್ದಾರಿ ಅವ್ಯವಸ್ಥೆ ಖಂಡಿಸಿ ನಡೆಸಿ ನಡೆದ ಅಣಕು ಪ್ರದರ್ಶನ ವಿಶೇಷವಾಗಿ ಗಮನ ಸೆಳೆಯಿತು.ಹೆದ್ದಾರಿಯಲ್ಲೆ ಗರ್ಬಿಣಿಯನ್ನು ಹೆರಿಗೆಗಾಗಿ ಆಸ್ಪತ್ರೆಗೆ ಸಾಗಿಸುವಾಗ ಹೆದ್ದಾರಿಯ ರಸ್ತೆಯ ಹೊಂಡಕ್ಕೆ ಬಿದ್ದು ಮೃತಪಟ್ಟ ಅಣಕು ಪ್ರದರ್ಶನ ಹಾಗೂ ಕಲಾವಿದ ಶಿವಾನಂದ ನಾಯ್ಕ ಸಂಗಡಿಗರ ಹೆದ್ದಾರಿಯ ಅವ್ಯಸ್ಥೆಯ ಅಣಕು ಜಾಗೃತಿ ಹಾಡುಗಳು ವಿಶೇಷವಾಗಿ ಗಮನ ಸೆಳೆದವು.