ರಸ್ತೆ ವಿಸ್ತರಣೆ ವಿರೋಧಿಸಿ ಪ್ರತಿಭಟನೆ

| Published : Jan 17 2025, 12:46 AM IST

ಸಾರಾಂಶ

ಗ್ರಾಮದ ಮಧ್ಯಭಾಗದಲ್ಲಿ ಹಾದುಹೋಗುವ ರಾಜ್ಯ ಹೆದ್ದಾರಿ ೧೩೨ ರಸ್ತೆ ನಿರ್ಮಾಣಕ್ಕೆ ಸರ್ಕಾರ ಮುಂದಾಗಿರುವುದು ಹರ್ಷದ ವಿಷಯ.

ಕುರುಗೋಡು: ತಾಲೂಕಿನ ಸಮೀಪದ ಬಾದನಹಟ್ಟಿ ಗ್ರಾಮದಲ್ಲಿ ಕೈಗೊಳ್ಳುವ ರಸ್ತೆ ವಿಸ್ತರಣೆ ಕಾಮಗಾರಿ ನಿಲ್ಲಿಸಬೇಕು ಎಂದು ಒತ್ತಾಯಿಸಿ ಸಾರ್ವಜನಿಕರು ಬುಧವಾರ ಪ್ರತಿಭಟನೆ ನಡೆಸಿದರು.ಜನಸಾಮಾನ್ಯರಿಗೆ ತೊಂದರೆ ಉಂಟು ಮಾಡುವ ಕಾಮಗಾರಿ ಮಾಡಲು ಮುಂದಾಗಿರುವ ಗ್ರಾಪಂ ಮತ್ತು ಲೋಕೋಪಯೋಗಿ ಇಲಾಖೆಯ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನಾನಿರತರು ಮಾತನಾಡಿ, ರಸ್ತೆ ವಿಸ್ತರಣೆ ಕಾಮಗಾರಿ ಪ್ರಾರಂಭಿಸುವುದರಿಂದ ಒಂದು ಹೊತ್ತಿನ ಊಟಕ್ಕೆ ಪರಿತಪಿಸುವ ಕೃಷಿ ಕೂಲಿಕಾರರ ಬದುಕಿಗೆ ಕೊಡಲಿ ಪೆಟ್ಟು ನೀಡಿದಂತಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಗ್ರಾಮದ ಮಧ್ಯಭಾಗದಲ್ಲಿ ಹಾದುಹೋಗುವ ರಾಜ್ಯ ಹೆದ್ದಾರಿ ೧೩೨ ರಸ್ತೆ ನಿರ್ಮಾಣಕ್ಕೆ ಸರ್ಕಾರ ಮುಂದಾಗಿರುವುದು ಹರ್ಷದ ವಿಷಯ. ಆದರೆ ಇದರಿಂದ ರಸ್ತೆಯ ಅಕ್ಕಪಟ್ಟದಲ್ಲಿರುವ ನೂರಾರು ಬಡ ಜನರು ಸಂಪೂರ್ಣ ಮನೆಗಳನ್ನು ಕಳೆದುಕೊಳ್ಳುತ್ತಾರೆ. ಅವರಲ್ಲಿ ಬಹುತೇಕರು ಕೂಲಿಮಾಡಿ ಜೀವನ ಸಾಗಿಸುವ ಕುಟುಂಬಗಳಿಗೆ. ಅವರಿಗೆ ತೊಂದರೆಯಾಗುತ್ತದೆ. ಅಭಿವೃದ್ಧಿ ಹೆಸರಿನಲ್ಲಿ ಬಡವರಿಗೆ ತೊಂದರೆಕೊಡುವುದು ಸರಿಯಲ್ಲ. ಗ್ರಾಮದಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ರಸ್ತೆ ನಿರ್ಮಾಣ ಮಾಡಬೇಕು. ಗ್ರಾಮದ ಹೊರಭಾಗದಲ್ಲಿ ಸರ್ಕಾರದ ನಿಯಮದಂತೆ ರಸ್ತೆ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿದರು.

ಬಡಜನರಿಗೆ ತೊಂದರೆಯಾಗುವ ರಾಜ್ಯ ಹೆದ್ದಾರಿ ರಸ್ತೆ ನಿರ್ಮಾಣ ಕೈ ಬಿಡಬೇಕು. ರಾಜ್ಯ ಹೆದ್ದಾರಿ ರಸ್ತೆಯನ್ನು ಗ್ರಾಮದ ಹೊರಭಾಗದಲ್ಲಿ ಬೈಪಾಸ್ ರಸ್ತೆ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿದರು.

ಸಾರ್ವಜನಿಕರ ಮನವಿಗೆ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟಕ್ಕೆ ತೀವ್ರಗೊಳಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಮನವಿ ಸ್ವೀಕರಿಸಿದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧ್ಯಕ್ಷ ಕರಿಬ್ಯಾಡರ ಕರಿಯಪ್ಪ ಸಂಬAಧಿಸಿದ ಅಧಿಕಾರಿಗಳಿಗೆ ತಮ್ಮ ಮನವಿಯನ್ನು ತಲುಪಿಸುವೆ ಎಂದರು.

ಹೋರಾಟ ಸಮಿತಿ ಸಂಚಾಲಕ ಗುರಳ್ಳಿ ರಾಜ, ಕೋಳೂರು ಪಂಪಾಪತಿ, ಗೋವಿಂದ, ಈ.ಹನುಮಂತ, ಕರಿಯಮ್ಮ, ರಾಮಾಂಜಿನಿ, ಜಡಿಯಪ್ಪ, ಗಂಟೆ ಹನುಮಂತ, ಮಣ್ಣೂರು ಕರಿಯಣ್ಣ, ಲಕ್ಷ್ಮೀ ಮತ್ತು ನಾರಾಯಣಮ್ಮ ಇದ್ದರು.

ಕುರುಗೋಡು ತಾಲೂಕಿನ ಸಮೀಪದ ಬಾದನಹಟ್ಟಿ ಗ್ರಾಮದಲ್ಲಿ ರಸ್ತೆ ವಿಸ್ತರಣೆ ವಿರೋಧಿಸಿ ಪ್ರತಿಭಟನೆ ನಡೆಸಿದರು.