ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ಹಿಂದು ಧರ್ಮ ನಿಂದಿಸಿದ ಆರೋಪದಲ್ಲಿ ಮಂಗಳೂರಿನ ಜೆರೋಸಾ ಶಾಲೆ ಮುಂಭಾಗ ನಡೆದ ಪ್ರತಿಭಟನೆಯಲ್ಲಿ ದಾಖಲಾದ ಕೇಸಿಗೆ ಸಂಬಂಧಿಸಿ ಇಬ್ಬರು ಶಾಸಕರು, ಪಾಲಿಕೆ ಸದಸ್ಯರು ಹಾಗೂ ಹಿಂದು ಸಂಘಟನೆ ಮುಖಂಡ ಸೇರಿದಂತೆ ಐವರಿಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಬುಧವಾರ ಷರತ್ತುಬದ್ಧ ನಿರೀಕ್ಷಣಾ ಜಾಮೀನು ನೀಡಿದೆ.ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್, ಉತ್ತರ ಶಾಸಕ ಡಾ.ಭರತ್ ಶೆಟ್ಟಿ ಇವರಲ್ಲದೆ, ವಿಶ್ವ ಹಿಂದು ಪರಿಷತ್ ಮುಖಂಡ ಶರಣ್ ಪಂಪ್‌ವೆಲ್, ಮಹಾನಗರ ಪಾಲಿಕೆ ಸದಸ್ಯರಾದ ಸಂದೀಪ್ ಗರೋಡಿ ಹಾಗೂ ಭರತ್ ಕುಮಾರ್ ಇವರಿಗೆ ಷರತ್ತುಬದ್ಧ ನಿರೀಕ್ಷಣಾ ಜಾಮೀನು ಮಂಜೂರು ಮಾಡಲಾಗಿದೆ. ಇವರೆಲ್ಲರಿಗೆ ತಲಾ 1 ಲಕ್ಷ ರು. ಬಾಂಡ್, ವಿಚಾರಣೆಗೆ ಹಾಜರಾಗುವುದು, ಯಾವುದೇ ಒತ್ತಡ ಹೇರಬಾರದು ಸೇರಿದಂತೆ ಷರತ್ತು ವಿಧಿಸಿ ಜಾಮೀನು ಮಂಜೂರುಗೊಳಿಸಲಾಗಿದೆ.
ಇವರೆಲ್ಲರ ವಿರುದ್ಧ ದಾಖಲಾದ ದೂರಿಗೆ ಸಂಬಂಧಿಸಿ ಶುಕ್ರವಾರ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರಾಗಿತ್ತು. ಮಂಗಳವಾರ ಈ ಕುರಿತು ವಿಚಾರಣೆ ನಡೆದಿದ್ದು, ಅಂತಿಮ ಆದೇಶವನ್ನು ಬುಧವಾರಕ್ಕೆ ಕಾಯ್ದಿರಿಸಲಾಗಿತ್ತು.ಜೆರೋಸಾ ಶಾಲೆಯಲ್ಲಿ ಪ್ರತಿಭಟನೆ ನಡೆದಾಗ ಇವರ ವಿರುದ್ಧ ಪೊಲೀಸರು ಸ್ವಯಂ ಆಗಿ ಕೇಸು ದಾಖಲಿಸಿಲ್ಲ, ಅಲ್ಲದೆ ಶಾಲಾ ಆಡಳಿತ ಮಂಡಳಿಯೂ ದೂರು ನೀಡಿಲ್ಲ. ಶಾಲೆಯ ಸಮೀಪದ ವ್ಯಕ್ತಿಯೊಬ್ಬರು ಪ್ರತಿಭಟನೆ ನಡೆದ ಎರಡು ದಿನ ಬಳಿಕ ದೂರು ನೀಡಿದ್ದಾರೆ. ಹಾಗಾಗಿ ಈ ದೂರಿನಲ್ಲಿ ಯಾವುದೇ ಹುರುಳಿಲ್ಲ, ಇದು ಪೂರ್ವಾಗ್ರಹಪೀಡಿತವಾಗಿ ನೀಡಿದ ದೂರಾಗಿದೆ. ಅಲ್ಲದೆ ಆ ದಿನ ನಡೆದ ಘಟನೆ ಕುರಿತಂತೆ ವಿಡಿಯೋ ದಾಖಲೆಗಳು ಲಭ್ಯವಿದ್ದು, ಆರೋಪಿತರು ವಿಚಾರಣೆಯಿಂದ ತಪ್ಪಿಸಿಕೊಳ್ಳುವ ಸಾಧ್ಯತೆಯೇ ಇಲ್ಲ. ಹಾಗಾಗಿ ಜಾಮೀನು ಮಂಜೂರು ಮಾಡುವಂತೆ ಶಾಸಕರ ಪರವಾಗಿ ಹಿರಿಯ ನ್ಯಾಯವಾದಿ ಅರುಣ್ ಶ್ಯಾಮ್ ವಾದ ಮಂಡಿಸಿದ್ದರು.
ಶಾಸಕರ ವಿರುದ್ಧ ಶಾಲಾ ಪೋಷಕ ಜೆರಾಲ್ಡ್ ಲೋಬೋ ಎಂಬವರು ಪಾಂಡೇಶ್ವರ ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಶಾಸಕರ ಹಾಗೂ ಇತರರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಾಗಿತ್ತು.ನಂತರದ ಬೆಳವಣಿಗೆಯಲ್ಲಿ ಶಾಸಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕ್ರೈಸ್ತ ಸಂಘಟನೆಗಳು, ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜಾ ಮತ್ತಿತರರು ಸರ್ಕಾರಕ್ಕೆ ದೂರು ನೀಡಿ ಕ್ರಮಕ್ಕೆ ಆಗ್ರಹಿಸಿದ್ದರು.
ಪೋಷಕಿಗೆ ಬೆದರಿಕೆ: ಕೊನೆಗೂ ಪೊಲೀಸ್ ಕೇಸ್ ದಾಖಲು ಮಂಗಳೂರು: ಧರ್ಮ ನಿಂದಿಸಿದ ಶಿಕ್ಷಕಿ ವಿರುದ್ಧ ಆರೋಪ ಮಾಡಿ ವಿದೇಶದಿಂದ ಬೆದರಿಕೆ ಕರೆಗೆ ಒಳಗಾಗಿರುವ ಪೋಷಕಿ ನೀಡಿದ ದೂರಿಗೆ ಈಗ ಪೊಲೀಸರು ಕೇಸು ದಾಖಲಿಸಿದ್ದಾರೆ.ಜೆರೋಸಾ ಶಾಲಾ ಶಿಕ್ಷಕಿ ಧರ್ಮ ಅವಹೇಳನ ಮಾಡಿದರೆಂದು ಶಿಕ್ಷಕಿ ವಿರುದ್ಧ ಪೋಷಕಿ ಕವಿತಾ ಎಂಬವರು ಆರೋಪ ಮಾಡಿದ್ದರು. ಆ ಬಳಿಕ ಪೋಷಕಿಗೆ ವಿದೇಶದಿಂದ ನಿರಂತರ ಬೆದರಿಕೆ ಕರೆ ಬರಲಾರಂಭಿಸಿತ್ತು. ಈ ಬಗ್ಗೆ ಪೋಷಕಿ ಪೊಲೀಸರಿಗೆ ದೂರು ನೀಡಿದರೂ ಕೇಸು ದಾಖಲಾಗಿರಲಿಲ್ಲ. ಈ ವಿಚಾರ ಮಂಗಳವಾರ ವಿಧಾನಸಭಾ ಅಧಿವೇಶನದಲ್ಲೂ ಪ್ರಸ್ತಾಪಗೊಂಡಿತ್ತು. ಇದೀಗ ಪೋಷಕಿ ಕವಿತಾ ನೀಡಿದ ದೂರಿನ ಬಗ್ಗೆ ಕೊನೆಗೂ ಪೊಲೀಸರು ಕೇಸು ದಾಖಲಿಸಿದ್ದಾರೆ.
ತನಗೆ ಜೀವಬೆದರಿಕೆ ಬಂದ ಬಗ್ಗೆ ಆಡಿಯೋ ಸಮೇತ ಪೋಷಕಿ ದೂರು ನೀಡಿದ್ದರೂ ಆಡಿಯೋ ಕುರಿತು ಕಾನೂನು ತಜ್ಞರ ಅಭಿಪ್ರಾಯಕ್ಕೆ ಪೊಲೀಸರು ಕಾದಿದ್ದರು. ಪೋಷಕಿಯ ದೂರಿನ ಬಗ್ಗೆ ಕಾನೂನು ತಜ್ಞರ ಅಭಿಪ್ರಾಯ ಪಡೆದು ಕಂಕನಾಡಿ ಪೊಲೀಸರು ಕೇಸು ದಾಖಲಿಸಿದ್ದಾರೆ.ಸದ್ಯ ಅಭಿಪ್ರಾಯ ಪಡೆದು ಕಠಿಣ ಸೆಕ್ಷನ್ ಗಳಡಿ ಪ್ರಕರಣ ದಾಖಲು ಮಾಡಲಾಗಿದೆ. ಕಂಕನಾಡಿ ಇನ್‌ಸ್ಪೆಕ್ಟರ್ ಟಿ.ಡಿ.ನಾಗರಾಜ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ.
ಜೆಪ್ಪಿನಮೊಗರು ನಿವಾಸಿ ಕವಿತಾ ಎಂಬವರ ಫ್ಯಾಮಿಲಿ ಫೋಟೋ ವೈರಲ್ ಮಾಡಿ ಬೆದರಿಕೆ ಹಾಕಲಾಗಿತ್ತು. ಈ ಬಗ್ಗೆ ಕವಿತಾ ಅವರು ಕಂಕನಾಡಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.ಕವಿತಾ ಅವರ ಪುತ್ರಿ ಜೆರೋಸಾ ಶಾಲೆಯಲ್ಲಿ ಏಳನೇ ತರಗತಿ ಓದುತ್ತಿದ್ದಾರೆ. ಹಿಂದು ಧರ್ಮ ನಿಂದನೆ ಕಾರಣಕ್ಕೆ ಸಿಸ್ಟರ್ ಪ್ರಭಾ ವಿರುದ್ಧ ನಡೆದ ಪೋಷಕರ ಪ್ರತಿಭಟನೆಯಲ್ಲೂ ಕವಿತಾ ಭಾಗವಹಿಸಿದ್ದರು. ಅದಕ್ಕೂ ಮೊದಲು ಹಿಂದು ಧರ್ಮ ನಿಂದಿಸಿದರು ಎಂದು ಜೆರೋಸಾ ಶಿಕ್ಷಕಿ ವಿರುದ್ಧದ ಆಡಿಯೋ ವೈರಲ್ ಮಾಡಿದ್ದು ಕವಿತಾ ಎಂದು ಆರೋಪಿಸಿ ಬೆದರಿಕೆ ಹಾಕಲಾಗಿತ್ತು. ಜಾಲತಾಣಗಳಲ್ಲಿ ಕವಿತಾರ ಫ್ಯಾಮಿಲಿ ಫೋಟೋ ಜೊತೆಗೆ ಮೊಬೈಲ್ ನಂಬರ್ ವೈರಲ್ ಮಾಡಲಾಗಿತ್ತು.
ಕತಾರ್, ದುಬೈ, ಸೌದಿ ಸೇರಿ ಹಲವೆಡೆಯಿಂದ ಕವಿತಾಗೆ ನಿರಂತರ ಬೆದರಿಕೆ ಕರೆ ಬರಲಾರಂಭಿಸಿತ್ತು. ಅವಾಚ್ಯವಾಗಿ ನಿಂದಿಸಿ ಅಶ್ಲೀಲವಾದ ಆಡಿಯೋ ಸಂದೇಶ ರವಾನೆಯಾಗಿತ್ತು. ಕೆಲವು ವಾಟ್ಸಪ್ ಗ್ರೂಪ್‌ಗೆ ಕವಿತಾರ ನಂಬರ್ ಸೇರಿಸಿ ನಿರಂತರ ಕಿರುಕುಳ ನೀಡಲಾಗುತ್ತಿತ್ತು.ಶಿಕ್ಷಕಿ ವಿರುದ್ಧದ ಆಡಿಯೋ ವೈರಲ್ ಮಾಡ್ತೀಯಾ ಎಂದು ಬೆದರಿಸುತ್ತಿದ್ದರು. ಪ್ರತಿಭಟನೆ ವೇಳೆ ಪುತ್ರಿಯ ಪರವಾಗಿ ಸಿಸ್ಟರ್ ಪ್ರಭಾ ವಿರುದ್ಧ ಕ್ರಮಕ್ಕೆ ಪೋಷಕಿ ನೆಲೆಯಲ್ಲಿ ಕವಿತಾ ಆಗ್ರಹಿಸಿದ್ದರು. ವೈರಲ್ ಆಗಿರುವ ಆಡಿಯೋ ಕವಿತಾರದ್ದಲ್ಲದಿದ್ದರೂ ನಿರಂತರ ಬೆದರಿಕೆ ಕರೆ ಹಿನ್ನೆಲೆಯಲ್ಲಿ ಕಂಕನಾಡಿ ಪೊಲೀಸರಿಗೆ ಸ್ಕ್ರೀನ್ ಶಾಟ್ ಹಾಗೂ ಆಡಿಯೋ ಸಹಿತ ಕಾನೂನು ಕ್ರಮಕ್ಕಾಗಿ ಕವಿತಾ ದೂರು ನೀಡಿದ್ದರು.