ಸಮರ್ಪಕವಾಗಿ ಬಸ್‌ ಓಡಿಸುವಂತೆ ರಸ್ತೆ ತಡೆದು ಧರಣಿ

| Published : Sep 11 2025, 01:00 AM IST

ಸಮರ್ಪಕವಾಗಿ ಬಸ್‌ ಓಡಿಸುವಂತೆ ರಸ್ತೆ ತಡೆದು ಧರಣಿ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯ ಸರ್ಕಾರ ಗ್ರಾಮೀಣ ಸಾರಿಗೆ ವ್ಯವಸ್ಥೆ ಸುಧಾರಿಸುವಲ್ಲಿ ವಿಫಲವಾಗಿದೆ. ಪ್ರಯಾಣಿಕರ ಬೇಡಿಕೆಗೆ ತಕ್ಕಂತೆ ಹೆಚ್ಚುವರಿ ಬಸ್ ಓಡಿಸದೆ ಇರುವುದರಿಂದ ಪ್ರತಿನಿತ್ಯ ನೂರಾರು ವಿದ್ಯಾರ್ಥಿಗಳ ಶಿಕ್ಷಣಕ್ಕೆ ಬಹಳಷ್ಟು ತೊಂದರೆಯಾಗುತ್ತಿದೆ. ವಿದ್ಯಾರ್ಥಿಗಳು, ಪೋಷಕರು, ವಿವಿಧ ಕನ್ನಡ ಪರ ಸಂಘಟನೆಗಳು, ಎಬಿವಿಪಿ ಸಂಘಟನೆ ಮೂಲಕ ಹೋರಾಟ ಮಾಡಿ ಮನವಿ ಸಲ್ಲಿಸಿದರೂ ಎಚ್ಚೆತ್ತುಕೊಂಡಿಲ್ಲ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿ, ಬುಧವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಅಥಣಿ

ತಾಲೂಕಿನ ಮುರುಗುಂಡಿ ಗ್ರಾಮದಲ್ಲಿ ಸಾರಿಗೆ ಬಸ್‌ ತಡೆದು ವಿದ್ಯಾರ್ಥಿಗಳು ಮತ್ತು ಪ್ರಯಾಣಿಕರು ಕಿಡಿಕಾರಿದರು. ನಂತರ ವಿಷಯ ತಿಳಿದ ಪೊಲೀಸ್ ಅಧಿಕಾರಿಗಳು, ಅಥಣಿ ಸಾರಿಗೆ ಘಟಕದ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ವಿದ್ಯಾರ್ಥಿಗಳು ಮತ್ತು ಪ್ರಯಾಣಿಕರ ಮನವೊಲಿಸಿದರು. ಜೊತೆಗೆ ಹೆಚ್ಚುವರಿ ಬಸ್‌ ಓಡಿಸುವ ಮೂಲಕ ಸಮಸ್ಯೆ ಬಗೆಹರಿಸುವುದಾಗಿ ಹೇಳಿದರು. ಹೀಗಾಗಿ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.ಈ ಸಂದರ್ಭದಲ್ಲಿ ಕಾಲೇಜಿನ ವಿದ್ಯಾರ್ಥಿ ಸುರೇಶ ವಾಘಮೋರೆ ಮಾತನಾಡಿ, ತಾಲೂಕಿನ ಮುರಗುಂಡಿ, ಕವಲಗುಡ್ಡ, ಮೋಳೆ, ಐನಾಪುರ ಮಾರ್ಗದಲ್ಲಿ ಓಡಾಡುವ ಬಸ್‌ಗಳಿಗೆ ನಿತ್ಯ ನೂರಾರು ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಹೋಗಿ ಬರುತ್ತೇವೆ. ಆದರೆ ನಮಗೆ ಸಕಾಲಕ್ಕೆ ಬಸ್‌ಗಳು ಬರುತ್ತಿಲ್ಲ. ಇದರಿಂದ ತರಗತಿ, ಪರೀಕ್ಷೆಗಳಿಗೆ ಹಾಜರಾಗಲು ಸಮಸ್ಯೆಯಾಗುತ್ತಿದೆ ಎಂದು ಅಧಿಕಾರಿಗಳ ಮುಂದೆ ತಮ್ಮ ಅಳಲು ತೋಡಿಕೊಂಡರು.ಸಾಮಾಜಿಕ ಕಾರ್ಯಕರ್ತ ಪ್ರಶಾಂತ ತೋಡ್ಕರ ಮಾತನಾಡಿ, ಇದೊಂದೇ ಮಾರ್ಗದ ಸಮಸ್ಯೆಯಲ್ಲ. ಜನ ನಿತ್ಯ ಐನಾಪುರ ಮಾರ್ಗದಲ್ಲಿ ತಂಗಡಿ, ಶಿನಾಳ, ಹುಲಗಬಾಳಿ ಗ್ರಾಮಗಳಿಗೆ ಮತ್ತು ಖಿಳೇಗಾವಿ ಮಾರ್ಗದಲ್ಲಿನ ಪಾರ್ಥನಹಳ್ಳಿ, ಗುಂಡಿವಾಡಿ, ಬಳ್ಳಿಗೇರಿ ಮತ್ತು ಮಲಬಾದ ಅನಂತಪುರ, ಕೊಟ್ಟಲಗಿ ಮಾರ್ಗದಲ್ಲಿನ ಯಂಕಂಚಿ, ಎಲಡಗಿ, ಅಡಹಳ್ಳಿ, ಕೋಹಳ್ಳಿ, ಐಗಳಿ, ಅರಟಾಳ ಮತ್ತು ಬಾಡಗಿ ಗ್ರಾಮಗಳಿಗೆ, ಶಿರಹಟ್ಟಿ ಮಾರ್ಗದಲ್ಲಿನ ಗ್ರಾಮಗಳಿಗೆ ಸಾರಿಗೆ ಬಸ್‌ ಕೊರತೆ ಇದೆ. ಹೀಗಾಗಿ ವಿದ್ಯಾರ್ಥಿಗಳು ವಿದ್ಯಾರ್ಥಿಗಳು ಸಕಾಲಕ್ಕೆ ಶಾಲಾ-ಕಾಲೇಜಿಗೆ ಹೋಗದೆ ಸಮಸ್ಯೆ ಎದುರಿಸುವಂತಾಗಿದೆ. ಕೂಡಲೇ ಅಧಿಕಾರಿಗಳು ಸಮಸ್ಯೆಗೆ ಸ್ಪಂದಿಸಬೇಕು ಎಂದು ಆಗ್ರಹಿಸಿದರು.ಅಥಣಿ ಸಾರಿಗೆ ಘಟಕದಲ್ಲಿ ಸಾರಿಗೆ ಬಸ್‌ಗಳ ಕೊರತೆ ಇದ್ದು, ಹುಬ್ಬಳ್ಳಿ ಸಾರಿಗೆ ನಿಗಮದ ಅಧ್ಯಕ್ಷರು ಹಾಗೂ ಕಾಗವಾಡ ಮತಕ್ಷೇತ್ರದ ಶಾಸಕರಾಗಿರುವ ರಾಜು ಕಾಗೆಯವರು ಈ ಘಟಕಕ್ಕೆ ಹೆಚ್ಚುವರಿ ಬಸ್‌ಗಳನ್ನು ಒದಗಿಸಬೇಕು. ಘಟಕ ವ್ಯವಸ್ಥಾಪಕರು ಕೂಡ ಮೇಲಧಿಕಾರಿಗಳೊಂದಿಗೆ ಚರ್ಚಿಸಿ ಹೆಚ್ಚುವರಿ ಬಸ್‌ಗಳ ವ್ಯವಸ್ಥೆ ಮಾಡಬೇಕು.

- ಉದಯ ಮಾಕಾಣಿ, ಅಧ್ಯಕ್ಷ, ಕರವೇ ಅಥಣಿ.ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಬಾರದೆಂದು ಗ್ರಾಮಾಂತರ ಪ್ರದೇಶಗಳಿಗೆ ಬೆಳಗ್ಗೆ ಹಾಗೂ ಸಂಜೆ ಹೆಚ್ಚಿನ ಬಸ್ ಸೌಕರ್ಯ ಕಲ್ಪಿಸಲಾಗಿದೆ. ಈಗ ಅಂತಹ ಸಮಸ್ಯೆಗಳೇನೂ ಇಲ್ಲ. ಎಲ್ಲ ಮಾರ್ಗಗಳಲ್ಲಿ ಎರಡೆರಡು ಬಸ್‌ಗಳನ್ನು ಕೇಳುತ್ತಾರೆ. ಸಾಧ್ಯವಾದಷ್ಟು ಅನುಕೂಲ ಕಲ್ಪಿಸಲು ಪ್ರಯತ್ನಿಸಿದ್ದೇವೆ. ಪರೀಕ್ಷೆ ವೇಳೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತದೆ. ಜತೆಗೆ ಈ ವೇಳೆ ಸಮಸ್ಯೆ ಆಗುತ್ತವೆ. ಆದರೂ ಹೆಚ್ಚುವರಿ ಬಸ್‌ಗಳನ್ನು ಓಡಿಸಿ ಸಮಸ್ಯೆಯನ್ನು ತಿಳಿಗೊಳಿಸಿದ್ದೇವೆ.

- ಎನ್.ಎಂ ಕೇರಿ,

ಘಟಕ ವ್ಯವಸ್ಥಾಪಕ, ಅಥಣಿ.