ಚಾಲಕನ ಮೇಲೆ ಎಂಇಎಸ್ ಪುಂಡರ ಹಲ್ಲೆ ಖಂಡಿಸಿ ಪ್ರತಿಭಟನೆ

| Published : Feb 26 2025, 01:01 AM IST

ಸಾರಾಂಶ

ಬೆಳಗಾವಿಯಲ್ಲಿ ಸಾರಿಗೆ ಇಲಾಖೆಯ ನೌಕರರ ಮೇಲಿನ ಹಲ್ಲೆ, ಪೋಸ್ಕೋ ಪ್ರಕರಣ ಖಂಡಿಸಿ ಬಾಗಲಕೋಟೆಯ ಜಿಲ್ಲಾಡಳಿತ ಭವನದ ಮುಂದೆ ಹೋರಾಟ ನಡೆಸಿದ ಎಚ್.ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆ ಬಾಗಲಕೋಟೆ ಜಿಲ್ಲಾಘಟಕದ ಕಾರ್ಯಕರ್ತರು ಎಂಇಎಸ್ ಭಾವಚಿತ್ರಕ್ಕೆ ಚಪ್ಪಲಿ ಸೇವೆ ಮಾಡಿ, ಬೆಂಕಿ ಹಂಚಿ ಆಕ್ರೋಶ ವ್ಯಕ್ತಪಡಿಸಿದರು ನಂತರ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಕರ್ನಾಟಕ ಸರ್ಕಾರಕ್ಕೆ ಮನವಿಪತ್ರ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಬೆಳಗಾವಿಯಲ್ಲಿ ಸಾರಿಗೆ ಇಲಾಖೆಯ ನೌಕರರ ಮೇಲಿನ ಹಲ್ಲೆ, ಪೋಸ್ಕೋ ಪ್ರಕರಣ ಖಂಡಿಸಿ ಬಾಗಲಕೋಟೆಯ ಜಿಲ್ಲಾಡಳಿತ ಭವನದ ಮುಂದೆ ಹೋರಾಟ ನಡೆಸಿದ ಎಚ್.ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆ ಬಾಗಲಕೋಟೆ ಜಿಲ್ಲಾಘಟಕದ ಕಾರ್ಯಕರ್ತರು ಎಂಇಎಸ್ ಭಾವಚಿತ್ರಕ್ಕೆ ಚಪ್ಪಲಿ ಸೇವೆ ಮಾಡಿ, ಬೆಂಕಿ ಹಂಚಿ ಆಕ್ರೋಶ ವ್ಯಕ್ತಪಡಿಸಿದರು ನಂತರ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಕರ್ನಾಟಕ ಸರ್ಕಾರಕ್ಕೆ ಮನವಿಪತ್ರ ಸಲ್ಲಿಸಿದರು.

ಪ್ರತಿಭಟನೆ ಉದ್ದೇಶಿಸಿ ಕರವೇ ರಾಜ್ಯ ವಕ್ತಾರ ಬಿ.ಎಂ.ಪಾಟೀಲ ಮಾತನಾಡಿ, ಎಂಇಎಸ್ ಪುಂಡರಿಗೆ ಮರಾಠಿ ಬರಲ್ಲ ಕನ್ನಡದಲ್ಲಿ ವ್ಯವಹರಿಸಿ ಎಂದು ಹೇಳಿದ ಬೆಳಗಾವಿ ಸಾರಿಗೆ ಇಲಾಖೆಯ ನಿರ್ವಾಹಕ ಮಹಾದೇವಪ್ಪ ಹುಕ್ಕೇರಿಯವರ ಮೇಲೆ ಬೆಳಗಾವಿ ತಾಲೂಕಿನ ಬಾಳೇಕುಂದ್ರಿ ಗ್ರಾಮದಲ್ಲಿ ಎಂಇಎಸ್ ಪುಂಡರು ಮಾಡಿದ ಹಲ್ಲೆಯನ್ನು ಬಾಗಲಕೋಟೆಯ ಎಚ್.ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಘಟಕ ತೀವ್ರವಾಗಿ ಖಂಡಿಸುತ್ತದೆ ಎಂದರು.

ಘಟನೆ ನಡೆದ ಬೆನ್ನಲ್ಲೇ ರಾಜ್ಯಾದ್ಯಂತ ಕನ್ನಡಪರ ಸಂಘಟನೆಗಳ ಆಕ್ರೋಶ ವ್ಯಕ್ತವಾಗಿದೆ. ಈಗಾಗಲೇ ಪುಂಡಾಟಿಕೆ ನಡೆಸಿದ ಕೆಲವು ಕೀಡಿಗೇಡಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ, ಪುಂಡರು ಪ್ರತೀಕಾರವಾಗಿ ಹೆಣ್ಣು ಮಗಳನ್ನು ಮುಂದಿಟ್ಟುಕೊಂಡು ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಮಾಡಿ ನಿರ್ವಾಹಕನ ವಿರುದ್ಧ ಎಂಇಎಸ್ ಪುಂಡರು ಪೋಸ್ಕೋ ಪ್ರಕರಣ ದಾಖಲಿಸಿದ್ದಾರೆ. ಇದು 6 ಕೋಟಿ ಕನ್ನಡಿಗರು ಮತ್ತು ಕನ್ನಡಪರ ಹೋರಾಟಗಾರರ ಆಕ್ರೋಶಕ್ಕೆ ಗುರಿಯಾಗಿರುವುದಂತು ಸತ್ಯ ಎಂದರು.

ಪುಂಡರನ್ನು ಗಡಿಪಾರು ಮಾಡಿ ನಾಡದ್ರೋಹ ಮತ್ತು ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು ಮತ್ತು ನಿರ್ವಾಹಕನ ಮೇಲೆ ಮಾರಿಹಾಳ ಪೊಲೀಸ ಠಾಣೆಯಲ್ಲಿ ದಾಖಲಾಗಿರುವ ಪೋಸ್ಕೋದ ಪ್ರಥಮ ವರ್ತಮಾನ ವರದಿಯನ್ನು ಹಿಂಪಡಿಯಬೇಕು. ಕರ್ನಾಟಕ ಸರ್ಕಾರ ಕನ್ನಡಪರ ಹೋರಾಟಗಾರರ ಬೆಂಬಲಕ್ಕೆ ನಿಲ್ಲಬೇಕು ಅದನ್ನು ಬಿಟ್ಟು ಎಂಇಎಸ್ ಪುಂಡರ ಬೆಂಬಲಕ್ಕೆ ನಿಂತಿರುವುದು ಎಷ್ಟರ ಮಟ್ಟಿಗೆ ಸರಿ? ಇದೇ ರೀತಿ ಮುಂದುವರಿದರೆ ರಾಜ್ಯದ ಸಮಸ್ತ ಕರವೇ ಕಾರ್ಯಕರ್ತರು ಬೆಳಗಾವಿಗೆ ತೆರಳಿ ಕನ್ನಡಿಗರ ಶಕ್ತಿ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸ ಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕರವೇ ಜಿಲ್ಲಾಧ್ಯಕ್ಷ ಆತ್ಮಾರಾಮ ನೀಲನಾಯಕ ಮಾತನಾಡಿ, ಕರ್ನಾಟಕದ ನೆಲದಲ್ಲಿ ಕನ್ನಡಿಗರಿಗೆ ರಕ್ಷಣೆ ಇಲ್ಲದಿರುವುದು ಕನ್ನಡಿಗರ ದುರಂತ ನಮ್ಮನ್ನಾಳುವ ಆಡಳಿತರೂಢ ಸರ್ಕಾರಕ್ಕೆ ಕನ್ನಡಿಗರ ಸ್ವಾಭಿಮಾನದ ಬದುಕಿನ ಬಗ್ಗೆ ಕಿಂಚಿತ್ತು ಕಾಳಜಿ ಇಲ್ಲದಂತಾಗಿದೆ. ಇದನ್ನು ಕರವೇ ಕಾರ್ಯಕರ್ತರಿಂದ ಸಹಿಸಲು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದೇ ರೀತಿ ಮುಂದುವರಿದರೇ ರಾಜಕೀಯ ನಾಯಕರ ವಿರುದ್ಧ ಹೋರಾಟ ಮಾಡುವ ಅನಿವಾರ್ಯತೆ ಇದೆ ಎಂದು ಆತ್ಮಾರಾಮ ನಿಲನಾಯಕ ಹೇಳಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಉಪಾಧ್ಯಕ್ಷ ಶಂಕರ ಮುತ್ತಲಗೇರಿ, ಕಾರ್ಮಿಕ ಜಿಲ್ಲಾಧ್ಯಕ್ಷ ಪರಶುರಾಮ ಬುಳ್ಳಾಪೂರ, ಜಿಲ್ಲಾ ಸಹ ಕಾರ್ಯದರ್ಶಿ ಸಂತೋಷ ಚಿನಿವಾಲ, ಕಾರ್ಮಿಕ ಮುಖಂಡ ತಿಮ್ಮಣ್ಣ ಕುರುಬರ, ರಾಜು ಮುತ್ತಲಗೇರಿ, ಆನಂದ, ಮಹೇಶ ನಾಯ್ಕರ, ಪ್ರಜ್ವಲ ಚಟ್ಟರಕಿ, ಸುದೀಪ್ ನಿಲನಾಯಕ ಸೇರಿದಂತೆ ಇನ್ನಿತರ ಕಾರ್ಯಕರ್ತರು ಭಾಗವಹಿಸಿದ್ದರು.