ಬಿಪಿಎಲ್ ಕಾರ್ಡ್‌ ರದ್ದು ಕ್ರಮ ಖಂಡಿಸಿ ಪ್ರತಿಭಟನೆ

| Published : Sep 30 2025, 12:00 AM IST

ಸಾರಾಂಶ

ರಾಜ್ಯ ಸರ್ಕಾರ ರಾಜ್ಯಾದಂತ 8 ಲಕ್ಷಕ್ಕೊ ಹೆಚ್ಚು ಬಡವರ ಬಿಪಿಎಲ್ ಪಡಿತರ ಚೀಟಿಗಳನ್ನು ಏಕಾಏಕಿಯಾಗಿ ರದ್ದುಗೊಳಿಸಿದ್ದರಿಂದ ಲಕ್ಷಾಂತರ ಬಡ ಕುಟುಂಬಗಳು ಬೀದಿಗೆ ಬಂದಿದ್ದಾರೆ.

ಗದಗ: ಬಿಪಿಎಲ್ ಪಡಿತರ ಚೀಟಿಗಳನ್ನು ರದ್ದುಗೊಳಿಸಿರುವ ಸರ್ಕಾರದ ಕ್ರಮವನ್ನು ಖಂಡಿಸಿ ಸ್ಲಂ ಜನಾಂದೋಲನ- ಕರ್ನಾಟಕ ಮತ್ತು ಜಿಲ್ಲಾ ಸ್ಲಂ ಸಮಿತಿಯಿಂದ ನಗರದ ಗಾಂಧಿ ಸರ್ಕಲ್‌ನಿಂದ ರ‍್ಯಾಲಿ ನಡೆಸಿ ಆಹಾರ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಯಿತು.

ರಾಜ್ಯ ಸರ್ಕಾರ ರಾಜ್ಯಾದಂತ 8 ಲಕ್ಷಕ್ಕೊ ಹೆಚ್ಚು ಬಡವರ ಬಿಪಿಎಲ್ ಪಡಿತರ ಚೀಟಿಗಳನ್ನು ಏಕಾಏಕಿಯಾಗಿ ರದ್ದುಗೊಳಿಸಿದ್ದರಿಂದ ಲಕ್ಷಾಂತರ ಬಡ ಕುಟುಂಬಗಳು ಬೀದಿಗೆ ಬಂದಿದ್ದಾರೆ. ರಾಜ್ಯ ಸರ್ಕಾರ ಚುನಾವಣೆ ಸಂದರ್ಭದಲ್ಲಿ ತಮ್ಮ ಪ್ರಣಾಳಿಕೆಯಲ್ಲಿ ರಾಜ್ಯದಲ್ಲಿ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಬಡ ಕುಟುಂಬಗಳಿಗೆ, ಮಧ್ಯಮ ವರ್ಗದ ಕುಟುಂಬಗಳಿಗೆ ಸಾಮಾಜಿಕವಾಗಿ, ಆರ್ಥಿಕವಾಗಿ ಹಾಗೂ ಶೈಕ್ಷಣಿಕವಾಗಿ ಅನುಕೂಲ ಮಾಡಲಾಗುವುದೆಂದು ಭರವಸೆಯನ್ನು ನೀಡಲಾಗಿತ್ತು. ಆದರೆ ಈಗ ಬಡವರ, ಕೊಲಿಕಾರ್ಮಿಕರ ಮತ್ತು ಸ್ಲಂ ನಿವಾಸಿಗಳ ಪಡಿತರ ಚೀಟಿಗಳನ್ನು ರದ್ದುಗೊಳಿಸಿ ಸರ್ಕಾರದ ಯೋಜನೆಗಳಿಂದ ವಂಚಿಸಲಾಗುತ್ತಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ ಕೊಡಲೇ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯದಲ್ಲಿ 8 ಲಕ್ಷ ಬಿಪಿಎಲ್ ಕಾರ್ಡ್‌ಗಳನ್ನು ರದ್ದುಗೊಳಿಸಿರುವುದನ್ನು ಕೈಬಿಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಈ ವೇಳೆ ಜಿಲ್ಲಾ ಸ್ಲಂ ಸಮಿತಿ ಅಧ್ಯಕ್ಷ ಇಮ್ತಿಯಾಜ ಆರ್. ಮಾನ್ವಿ, ಮಹಿಳಾ ಸಂಚಾಲಕಿ ಪರವೀನಬಾನು ಹವಾಲ್ದಾರ ಮಾತನಾಡಿದರು. ಅಶೋಕ ಕುಡತಿನ್ನಿ, ಅಶೋಕ ಕುಸಬಿ, ಇಬ್ರಾಹಿಂ ಮುಲ್ಲಾ, ಶರಣಪ್ಪ ಸೂಡಿ, ಮೌಲಾಸಾಬ ಗಚ್ಚಿ, ಖಾಜಾಸಾಬ ಮುಲ್ಲಾನವರ, ಮೆಹರುನಿಸಾ ಡಂಬಳ, ಜಂದಿಸಾಬ ಢಾಲಾಯತ, ಮಕ್ತುಮಸಾಬ ಮುಲ್ಲಾನವರ, ಬಾಷಾಸಾಬ ಡಂಬಳ, ಮೈಮುನ ಬೈರಕದಾರ, ವೆಂಕಟೇಶ ಬಿಂಕದಕಟ್ಟಿ, ಗೌಸಸಾಬ ಅಕ್ಕಿ, ರವಿ ಗೋಸಾವಿ, ಸಕ್ರುಬಾಯಿ ಗೋಸಾವಿ ಸೇರಿದಂತೆ ಇತರರು ಇದ್ದರು.