ಕೊಪ್ಪಳ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜನವಿರೋಧಿ, ಕಾರ್ಮಿಕ–ರೈತ ವಿರೋಧಿ ನೀತಿ ಅನುಸರಿಸುತ್ತಿರುವುದನ್ನು ವಿರೋಧಿಸಿ ದೇಶವ್ಯಾಪಿ ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ಕರೆ ನೀಡಿರುವ ಹಿನ್ನೆಲೆಯಲ್ಲಿ ಕೊಪ್ಪಳದಲ್ಲಿ ವಿವಿಧ ಸಂಘಟನೆ ಜಂಟಿಯಾಗಿ ಪ್ರತಿಭಟನೆ ನಡೆಸಿದರು.

ಕಾರ್ಮಿಕರು, ರೈತರು, ಯುವಜನರು, ಮಹಿಳೆಯರು ಸೇರಿದಂತೆ ವಿವಿಧ ದುಡಿಯುವ ವರ್ಗಗಳ ಸಾವಿರಾರು ಜನರು ಭಾಗವಹಿಸಿದ್ದರು.

ಅಖಿಲ ಭಾರತ ಮುಷ್ಕರದ ಅಂಗವಾಗಿ ಕೊಪ್ಪಳ ಕೇಂದ್ರೀಯ ಬಸ್ ನಿಲ್ದಾಣದಿಂದ ಅಶೋಕ ವೃತ್ತದವರೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜನವಿರೋಧಿ ನೀತಿಗಳ ವಿರುದ್ಧ ಘೋಷಣೆ ಕೂಗುತ್ತ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

ನಂತರ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿ ಹಾಗೂ ಪ್ರಧಾನಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮುಖಂಡರು ಮಾತನಾಡಿ, ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಹಾಗೂ ಜಾರಿಗೊಳಿಸಲು ಮುಂದಾಗಿರುವ ನಾಲ್ಕು ಕರಾಳ ಕಾರ್ಮಿಕ ಸಂಹಿತೆಗಳು(ಲೇಬರ್ ಕೋಡ್‌ಗಳು) ದುಡಿಯುವ ವರ್ಗ ದಶಕಗಳ ಹೋರಾಟದ ಮೂಲಕ ಗಳಿಸಿಕೊಂಡ ಹಕ್ಕು ಸಂಪೂರ್ಣವಾಗಿ ಕಿತ್ತುಕೊಳ್ಳುವಂತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.


ಮುಷ್ಕರದ ಹಕ್ಕು,ಸಾಮೂಹಿಕ ಚೌಕಾಸಿ, ಉದ್ಯೋಗ ಭದ್ರತೆ, ಆರೋಗ್ಯ ಮತ್ತು ಸುರಕ್ಷತೆ ಹಕ್ಕುಗಳಿಗೆ ಧಕ್ಕೆ ಉಂಟಾಗಿದ್ದು, ದಿನಕ್ಕೆ 12 ಗಂಟೆಗಳ ದುಡಿಮೆ, ಗುತ್ತಿಗೆ ಹಾಗೂ ನಿಗದಿತ ಅವಧಿಯ ಉದ್ಯೋಗಗಳ ವಿಸ್ತರಣೆ, ಮಹಿಳೆಯರನ್ನು ರಾತ್ರಿ ಪಾಳಿಯಲ್ಲೂ ದುಡಿಸಿಕೊಳ್ಳುವ ನೀತಿಗಳು ಕಾರ್ಮಿಕರ ಬದುಕನ್ನು ಭಾರೀ ಅನಿಶ್ಚಿತತೆಗೆ ತಳ್ಳಿವೆ ಎಂದು ಹೇಳಿದರು.

ಸಾರ್ವಜನಿಕ ವಲಯದ ಉದ್ಯಮ ಹಾಗೂ ಸೇವೆಗಳಾದ ರೈಲ್ವೆ,ಬಂದರು, ಬ್ಯಾಂಕ್, ವಿಮೆ, ವಿದ್ಯುತ್, ಸಾರಿಗೆ,ದೂರಸಂಪರ್ಕ,ರಕ್ಷಣಾ ಉತ್ಪಾದನೆ, ವಿಮಾನ ನಿಲ್ದಾಣಗಳು ಸೇರಿದಂತೆ ಪ್ರಮುಖ ಕ್ಷೇತ್ರ ಖಾಸಗೀಕರಣಗೊಳಿಸಿ ದೇಶದ ಸಂಪತ್ತನ್ನು ದೊಡ್ಡ ಕಾರ್ಪೊರೇಟ್ ಮನೆತನಗಳಿಗೆ ಹಸ್ತಾಂತರಿಸಲಾಗುತ್ತಿದೆ.ಇದರ ಪರಿಣಾಮ ನಿರುದ್ಯೋಗ, ಬೆಲೆ ಏರಿಕೆ, ಆರ್ಥಿಕ ಅಸಮಾನತೆ ದಿನೇ ದಿನೇ ಹೆಚ್ಚುತ್ತಿದೆ ಎಂದು ಆರೋಪಿಸಿದರು.

ರಾಜ್ಯ ಕಾರ್ಯದರ್ಶಿ ಎಂ.ಬಿ.ನಾಡಗೌಡ್ ಮಾತನಾಡಿ, ಲೇಬರ್ ಕೋಡ್‌ ಹಾಗೂ ಪಂಚಾಯತಿ ನೌಕರರ ಸಮಸ್ಯೆ ಕುರಿತು ವಿವರಿಸಿದರು.ಎಐಯುಟಿಯುಸಿ ಜಿಲ್ಲಾ ಮುಖಂಡ ಶರಣು ಗಡ್ಡಿ ಮಾತನಾಡಿ, ಕೇಂದ್ರ–ರಾಜ್ಯ ಸರ್ಕಾರಗಳು ಕಾರ್ಪೊರೇಟ್ ಬಂಡವಾಳಗಾರರ ಸೇವೆಯಲ್ಲಿ ತೊಡಗಿಕೊಂಡು ಕಾರ್ಮಿಕರು, ರೈತರು ಹಾಗೂ ದುಡಿಯುವ ಜನರ ವಿರುದ್ಧ ನೀತಿ ಜಾರಿಗೊಳಿಸುತ್ತಿವೆ ಎಂದು ಆರೋಪಿಸಿದರು.

ಐಎಫ್‌ಟಿಯು ಮುಖಂಡ ಬಸವರಾಜ್ ಶಿಲುವಂತರ್ ಮಾತನಾಡಿ,ಮಧ್ಯಾಹ್ನದ ಬಿಸಿಯೂಟ ಯೋಜನೆಯ ಮಹಿಳಾ ಕಾರ್ಮಿಕರನ್ನು ಕನಿಷ್ಠ ವೇತನ ನೀಡದೆ ಶೋಷಿಸಲಾಗುತ್ತಿದೆ ಎಂದು ಹೇಳಿದರು.

ಎಐಯುಕೆಎಸ್ ರಾಜ್ಯ ಅಧ್ಯಕ್ಷ ಡಿ.ಎಚ್.ಪೂಜಾರ್ ರೈತ ವಿರೋಧಿ ಬೀಜ ಕಾಯ್ದೆ, ಭೂಸ್ವಾಧೀನ ಕಾಯ್ದೆಗಳ ವಿರುದ್ಧ ಹೋರಾಟ ಅನಿವಾರ್ಯ ಎಂದು ಹೇಳಿದರು.

ಸಿಐಟಿಯು ಜಿಲ್ಲಾ ಮುಖಂಡ ಹನುಮೇಶ್ ಕಲ್ಮಂಗಿ,ಎಐಡಿವೈಓ ಜಿಲ್ಲಾ ಕಾರ್ಯದರ್ಶಿ ಶರಣು ಪಾಟೀಲ್, ಐಎಡಬ್ಲ್ಯೂಯು ಮುಖಂಡ ಸುಂಕಪ್ಪ ಗದಗ್ ಸೇರಿದಂತೆ ಅನೇಕ ಮುಖಂಡರು ಮಾತನಾಡಿದರು.

ಪ್ರತಿಭಟನೆಯಲ್ಲಿ ಆಶಾ, ಅಂಗನವಾಡಿ, ಬಿಸಿಯೂಟ, ಹಾಸ್ಟೆಲ್ ಅಡುಗೆ ಸಹಾಯಕ ಮಹಿಳಾ ಕಾರ್ಮಿಕರು, ಕಟ್ಟಡ ಕಾರ್ಮಿಕರು, ಹಮಾಲಿ ಕಾರ್ಮಿಕರು, ಬೀದಿ ಬದಿ ವ್ಯಾಪಾರಸ್ಥರು, ದೇವದಾಸಿ ಮಹಿಳೆಯರು, ಪಂಚಾಯತಿ ನೌಕರರು, ಕೈಗಾರಿಕಾ ಕಾರ್ಮಿಕರು ಸೇರಿದಂತೆ ಎಲ್ಲ ದುಡಿಯುವ ವರ್ಗಗಳ ಸಾವಿರಾರು ಮಂದಿ ಭಾಗವಹಿಸಿದ್ದರು.