ಸಂಡೂರು: ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳ ಹೆಸರಿನಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚುವುದನ್ನು ವಿರೋಧಿಸಿ ಎಐಡಿಎಸ್‌ಒ ಸಂಘಟನೆಯಿಂದ ಪಟ್ಟಣದಲ್ಲಿ ಭಾನುವಾರ ಪ್ರತಿಭಟನಾ ಮೆರವಣಿಗೆಯನ್ನು ನಡೆಸಲಾಯಿತು.ಮೆರವಣಿಗೆ ನಂತರ ಪಟ್ಟಣದ ವಿರಕ್ತಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜನ ಸಂಗ್ರಾಮ ಪರಿಷತ್ ರಾಜ್ಯ ಘಟಕದ ಅಧ್ಯಕ್ಷ ಟಿ.ಎಂ. ಶಿವಕುಮಾರ್ ಮಾತನಾಡಿ, ರಾಜ್ಯ ಸರ್ಕಾರ ಗಣಿ ಬಾಧಿತರಿಗಾಗಿ ಬಳಕೆಯಾಗಬೇಕಿದ್ದ ಕೆಎಂಇಆರ್‌ಸಿ (ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮ) ಹಣವನ್ನು ಸರ್ಕಾರಿ ಶಾಲೆಗಳನ್ನು ಮುಚ್ಚಲು ಬಳಸುತ್ತಿರುವುದು ಖಂಡನೀಯ. ರಾಜ್ಯ ಸರ್ಕಾರ ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳನ್ನು ತೆರೆಯುವ ಮೂಲಕ ಸರ್ಕಾರಿ ಶಾಲೆಗಳನ್ನು ಮುಚ್ಚಿ, ವಿದ್ಯಾರ್ಥಿಗಳ ಭವಿಷ್ಯದ ಜೊತೆಗೆ ಚೆಲ್ಲಾಟವಾಡುತ್ತಿದೆ ಎಂದು ಟೀಕಿಸಿದರು.

ಸಂಡೂರಿನ ಜನತೆಯ ಕಷ್ಟ ಕಾರ್ಪಣ್ಯಗಳನ್ನು ದೂರ ಮಾಡಲು, ಇಲ್ಲಿಯ ಜನರಿಗೆ ಆಸ್ಪತ್ರೆಗಳು, ಉದ್ಯೋಗ ಸೃಷ್ಟಿಸುವುದು, ಗಣಿಬಾಧಿತ ಹಳ್ಳಿಗಳನ್ನು ಅಭಿವೃದ್ಧಿ ಪಡಿಸಲು ಹಾಗೂ ಇಲ್ಲಿಯ ಜನರ ಜೀವನ ಮಟ್ಟವನ್ನು ಮೇಲೆತ್ತಲು ಬಳಸಬೇಕಾದ ಕೆಎಂಇಆರ್‌ಸಿ ಹಣವನ್ನು ಶಾಲೆಗಳ ಸ್ಥಾಪನೆಗಾಗಿ ಬಳಸಲಾಗುತ್ತಿದೆ. ಸರ್ಕಾರ ಅತಿಹೆಚ್ಚು ಮುತುವರ್ಜಿ ವಹಿಸಿ ಈ ಭಾಗದಲ್ಲಿ ಶಾಲೆಗಳನ್ನು ಸ್ಥಾಪಿಸಿ, ಅವುಗಳಿಗೆ ಮೂಲಸೌಕರ್ಯಗಳನ್ನು ಕಲ್ಪಿಸುವ ಬದಲು ಇರುವ ಶಾಲೆಗಳನ್ನು ಮುಚ್ಚಲು ಯತ್ನಿಸುತ್ತಿದೆ. ಆ ಮೂಲಕ ಬಡಮಕ್ಕಳ ಶಿಕ್ಷಣದ ಕನಸಿಗೆ ಕೊಡಲಿ ಪೆಟ್ಟು ನೀಡುತ್ತಿದೆ. ಸರ್ಕಾರಿ ಶಾಲೆಗಳನ್ನು ಮುಚ್ಚುವ ಕ್ರಮವನ್ನು ತಡೆಯಲು ಎಲ್ಲರೂ ಒಟ್ಟಾಗಿ ಶ್ರಮಿಸಬೇಕಿದೆ ಎಂದರು.

ಎಐಡಿಎಸ್‌ಒ ರಾಜ್ಯ ಉಪಾಧ್ಯಕ್ಷರಾದ ಚಂದ್ರಕಲಾ ಅವರು ಮಾತನಾಡಿ, ರಾಜ್ಯ ಬಜೆಟ್‌ನಲ್ಲಿ ಉನ್ನತ ಶಿಕ್ಷಣದ ಪರಿವರ್ತನೆ ಮತ್ತು ಗುಣಮಟ್ಟದ ಕಲಿಕೆ ಎಂಬ ಆಕರ್ಷಕ ಪದಗಳ ಮುಸುಕಿನಲ್ಲಿದ್ದರೂ, ವಾಸ್ತವದಲ್ಲಿ ಇದು ಸಾರ್ವಜನಿಕ ಶಿಕ್ಷಣ ಮೂಲ ಸೌಕರ್ಯವನ್ನು ಕೇಂದ್ರೀಕೃತಗೊಳಿಸುವ ಮತ್ತು ನಿರ್ಲಕ್ಷಿಸುವ ಒಂದು ವ್ಯವಸ್ಥಿತ ಸಂಚಾಗಿದೆ. ಈ ಪ್ರಕ್ರಿಯೆಯ ಹಿಂದೆ ವಿವಾದಾತ್ಮಕ ಕೆಪಿಎಸ್ ನೀತಿಯ ಪ್ರಬಲ ಪ್ರಭಾವವಿದೆ. ಈ ಬಾರಿಯ ಬಜೆಟ್‌ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ನೀಡಲಾದ ಪಾಲನ್ನು ಗಮನಿಸಿದರೆ, ಹಿಂದಿನ ವರ್ಷಕ್ಕಿಂತ ಸುಮಾರು ಶೇ ೧೦.೮ ರಷ್ಟು ಇಳಿಕೆಯಾಗಿದೆ. ಇದು ಆತಂಕಕಾರಿಯಾಗಿದೆ ಎಂದು ವಿಷಾದಿಸಿದರು.

ಸಾರ್ವಜನಿಕ ಶಿಕ್ಷಣವನ್ನು ಉಳಿಸಿ ಎಂಬ ಘೋಷಣೆ ಅಡಿಯಲ್ಲಿ ಉತ್ತಮ ಕಲಿಕೆ, ಉಜ್ವಜ ಭವಿಷ್ಯ ಎಂಬ ಧ್ಯೇಯವಾಕ್ಯದೊಂದಿಗೆ ೩೯೦೦ ಕೋಟಿ ಅನುದಾನದಲ್ಲಿ ೮೦೦ ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆಗಳನ್ನಾಗಿ ಮೇಲ್ದರ್ಜೆಗೇರಿಸುವ ಸರ್ಕಾರದ ಈ ಹಠಾತ್ ಧೋರಣೆಯನ್ನು ನಾವು ಖಂಡಿಸಲೇಬೇಕು. ಕೆಪಿಎಸ್ ನೀತಿಯು ಅಭಿವೃದ್ದಿ ನಿಧಿಯ ಸಿಂಹಪಾಲನ್ನು ಕಬಳಿಸುತ್ತಿರುವುದರಿಂದ ಸಾಮಾನ್ಯ ಶಾಲೆಗಳು ಸೊರಗುತ್ತಿವೆ ಎಂದು ದೂರಿದರು.

ಕಾರ್ಮಿಕ ಮುಖಂಡ ಡಾ. ಪ್ರಮೋದ್ ಮಾತನಾಡಿ, ಸರ್ಕಾರವು ಕೆಪಿಎಸ್ ಮ್ಯಾಗ್ನೆಟ್ ಯೋಜನೆಯನ್ನು ಕೈಬಿಡುವವರೆಗೂ ನಮ್ಮ ಹೋರಾಟವು ನಿಲ್ಲುವುದಿಲ್ಲ ಎಂದರು.


ರೈತ ಸಂಘಟನೆಯ ಗೋವಿಂದ, ಯುವಜನ ಸಂಘಟನೆಯ ಜಿಲ್ಲಾ ಮುಖಂಡರಾದ ಜಗದೀಶ್, ಮಹಿಳಾ ಸಂಘಟನೆಯ ಅಭಿಲಾಷಾ, ಜಿಲ್ಲಾ ಉಪಾಧ್ಯಕ್ಷೆ ಎಂ. ಶಾಂತಿ, ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ ನಾಯಕರಾದ ನಾಗರತ್ನ, ಮುಖಂಡರಾದ ಕಾರ್ತಿಕ್ ಬಾಬು, ಹೇಮಾವತಿ, ರುಕ್ಮಿಣಿ, ನಾಗವೇಣಿ, ಪಾರ್ವತಿ, ರಮೂಲಮ್ಮ, ಕಾಳಮ್ಮ, ಜ್ಯೋತಿ, ಅಂಜಿನಪ್ಪ, ಬಸಪ್ಪ, ಶಿವಪ್ಪ ಉಪಸ್ಥಿತರಿದ್ದರು.