ಕೊಡಗು ವಿವಿ ಮುಚ್ಚುವ ನಿರ್ಧಾರ ವಿರೋಧಿಸಿ ಪ್ರತಿಭಟನೆ

| Published : Feb 19 2025, 12:46 AM IST

ಕೊಡಗು ವಿವಿ ಮುಚ್ಚುವ ನಿರ್ಧಾರ ವಿರೋಧಿಸಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಕೊಡಗು ವಿವಿ ಮುಚ್ಚುವ ರಾಜ್ಯ ಸರ್ಕಾರದ ಕ್ರಮವನ್ನು ವಿರೋಧಿಸಿ ಎಬಿವಿಪಿ ವಿದ್ಯಾರ್ಥಿ ಸಂಘಟನೆಯಿಂದ ನಗರದಲ್ಲಿ ಪ್ರತಿಭಟನೆ ನಡೆಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕೊಡಗು ವಿಶ್ವ ವಿದ್ಯಾನಿಲಯ ಮುಚ್ಚುವ ರಾಜ್ಯ ಸರ್ಕಾರದ ಕ್ರಮವನ್ನು ವಿರೋಧಿಸಿ ಎಬಿವಿಪಿ ವಿದ್ಯಾರ್ಥಿ ಸಂಘಟನೆಯಿಂದ ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.

ಜಿಲ್ಲೆಯ ಗ್ರಾಮೀಣ ವಿದ್ಯಾರ್ಥಿಗಳಿಗೆ ಉಪಯುಕ್ತವಾಗುವ ವಿವಿಯನ್ನು ಯಾವುದೇ ಕಾರಣಕ್ಕೂ ಮುಚ್ಚುವ ಪ್ರಯತ್ನಕ್ಕೆ ಮುಂದಾಗಬಾರದು ಎಂದು ವಿದ್ಯಾರ್ಥಿಗಳು ಆಗ್ರಹಿಸಿದರು. ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌ನ ನೇತೃತ್ವದಲ್ಲಿ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸರ್ಕಾರಿ ಮಹಿಳಾ ಕಾಲೇಜಿನ ನೂರಾರು ವಿದ್ಯಾರ್ಥಿಗಳು ಮಂಗಳವಾರ ಬೆಳಗ್ಗೆ ಜನರಲ್ ಕೆಎಸ್.ತಿಮ್ಮಯ್ಯ ವೃತ್ತದಲ್ಲಿ ಸಮಾವೇಶಗೊಂಡು ಪ್ರತಿಭಟನೆ ನಡೆಸಿದರು.

ವಿದ್ಯಾರ್ಥಿಗಳ ಸ್ಥಿತಿ ಅಯೋಮಯ, ಮೈ ಮರೆತರೆ ವಿವಿಗಳೇ ಮಾಯ, ನಿಲ್ಲಿಸಿ ಶಿಕ್ಷಣದ ವ್ಯಾಪಾರೀಕರಣ, ವಿಧಾನ ಸೌಧದ ಖುರ್ಚಿಗಳೇ ಕೇಳಿರಿ ವಿದ್ಯಾರ್ಥಿಗಳ ಅಳಲನ್ನ ಮೊದಲಾದ ಭಿತ್ತಿ ಫಲಕಗಳನ್ನು ಪ್ರದರ್ಶಿಸಿದ ವಿದ್ಯಾರ್ಥಿಗಳು, ‘ವಿ ವಾಂಟ್ ಜಸ್ಟಿಸ್’ ಘೋಷಣೆಯೊಂದಿಗೆ ವೃತ್ತದಲ್ಲಿ ಕೆಲ ಕಾಲ ಪ್ರತಿಭಟನೆ ನಡೆಸಿ ಮೆರವಣಿಗೆಯ ಮೂಲಕ ಜಿಲ್ಲಾಡಳಿತ ಭವನಕ್ಕೆ ತೆರಳಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಎಬಿವಿಪಿ ವಿಭಾಗೀಯ ಸಂಘಟನಾ ಕಾರ್ಯದರ್ಶಿ ಚಂದ್ರಶೇಖರ್ ಮಾತನಾಡಿ, ಕೊಡಗು ವಿಶ್ವ ವಿದ್ಯಾನಿಲಯ ನಮ್ಮ ಸ್ವಾಭಿಮಾನದ ಪ್ರಶ್ನೆಯಾಗಿದೆ. ಒಂದೊಮ್ಮೆ ರಾಜ್ಯ ಸರ್ಕಾರ ಕೊಡಗು ವಿವಿಯನ್ನು ಮುಚ್ಚುವ ತನ್ನ ನಿರ್ಧಾರದಿಂದ ಹಿಂದಕ್ಕೆ ಸರಿಯದಿದ್ದಲ್ಲಿ ವಿಧಾನ ಸೌಧ ಹಾಗೂ ಬೆಂಗಳೂರಿನ ಶಿಕ್ಷಣ ಇಲಾಖಾ ಕಚೇರಿಯ ಮುಂಭಾಗ ವಿದ್ಯಾರ್ಥಿ ಸಂಘನೆಯಿಂದ ಬೃಹತ್ ಪ್ರತಿಭಟನೆ ರೂಪಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.

ಕರ್ನಾಟಕ ರಾಜ್ಯ ಸರ್ಕಾರ ಪ್ರಸ್ತುತ ವಿವಿಧ ಯೋಜನೆಗಳಿಗೆ 50 ಸಾವಿರ ಕೋಟಿ ರು. ಗಳನ್ನು ವಿನಿಯೋಗಿಸುತ್ತಿದೆ. ಅದೇ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡುವ ವಿಶ್ವ ವಿದ್ಯಾನಿಲಯಗಳಿಗೆ ಒದಗಿಸಲು ಅಗತ್ಯ ಹಣವಿಲ್ಲ ಎನ್ನುವುದು ಶೋಚನೀಯ ಮಾತ್ರವಲ್ಲ ಹಾಸ್ಯಾಸ್ಪದ ಎಂದು ಆಕ್ರೋಷ ವ್ಯಕ್ತಪಡಿಸಿದರು.

ಸ್ವಾತಂತ್ರ್ಯ ನಂತರ 75 ವರ್ಷಗಳ ಬಳಿಕ ಮಂಗಳೂರು ವಿ.ವಿ ಅಧೀನದಿಂದ ಹೊರ ಬಂದು ಕೊಡಗು ವಿಶ್ವ ವಿದ್ಯಾಲಯವನ್ನು ಆರಂಭಿಸಲಾಗಿದೆ. ವಿ.ವಿ ಕೇವಲ 3 ವರ್ಷ ಪೂರೈಸುವಷ್ಟರಲ್ಲೆ ಅದನ್ನು ಮುಚ್ಚಲು ಮುಂದಾಗಿರುವುದು ರಾಜ್ಯ ಸರ್ಕಾರದ ವಿದ್ಯಾರ್ಥಿ ವಿರೋಧಿ ನೀತಿಯಾಗಿದೆ. ಕೊಡಗು ವಿಶ್ವ ವಿದ್ಯಾನಿಲಯದಿಂದ ಸ್ಥಳೀಯ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗಿದೆ. ಈ ಹಿಂದೆ ಶೈಕ್ಷಣಿಕವಾದ ಯಾವುದೇ ಸಮಸ್ಯೆಗಳ ಬಗೆಹರಿಕೆಗೆ ವಿದ್ಯಾರ್ಥಿಗಳು ದೂರದ ಮಂಗಳೂರಿನತ್ತ ಮುಖ ಮಾಡಬೇಕಾಗಿತ್ತು. ಪ್ರಸ್ತುತ ಕೊಡಗು ವಿಶ್ವ ವಿದ್ಯಾಲಯ ಇಂತಹ ಸಮಸ್ಯೆಗಳಿಗೆ ಪರಿಹಾರವಾಗಿ ಕಂಡು ಬಂದಿದೆ. ಇಂತಹ ಸಂದರ್ಭ ವಿವಿಯನ್ನು ಮುಚ್ಚುವ ಸರ್ಕಾರದ ನಿಲುವು ಸಮರ್ಥನೀಯವಲ್ಲ ಎಂದು ತಿಳಿಸಿದರು.

ಜಿಲ್ಲಾಡಳಿತಕ್ಕೆ ಸಲ್ಲಿಸಿದ ಮನವಿಯಲ್ಲಿ, ಕೊಡಗು ಸೇರಿದಂತೆ ಇತರೆ ಹಿಂದುಳಿದ ಜಿಲ್ಲೆಗಳಲ್ಲಿ ಆರಂಭಿಸಿರುವ ವಿವಿಗಳನ್ನು ಮುಚ್ಚಲು ಹೊರಟಿರುವ ರಾಜ್ಯ ಸರ್ಕಾರದ ನಡೆಯನ್ನು ಖಂಡಿಸಲಾಗಿದೆ. ರಾಜ್ಯ ಸರ್ಕಾರ ತನ್ನ ಗ್ಯಾರಂಟಿಗಳಿಗೆ ವಾರ್ಷಿಕ ವ್ಯಯಿಸುವ ಕೋಟ್ಯಂತರ ಹಣದಲ್ಲಿ ಶೇ.1ರಷ್ಟು ಅಂದರೆ 500 ಕೋಟಿಯನ್ನು ವಿವಿಗಳಿಗೆ ನೀಡಿದಲ್ಲಿ ವಿಶ್ವ ವಿದ್ಯಾನಿಲಯಗಳ ಸ್ಥಿತಿ ಸುಧಾರಿಸುತ್ತದೆ ಎಂದು ತಿಳಿಸಲಾಗಿದೆ. ಕಳೆದ ಸುಮಾರು ಒಂದೂವರೆ ದಶಕಗಳಿಂದ ರಾಜ್ಯ ಸರ್ಕಾರ ವಿಶ್ವ ವಿದ್ಯಾನಿಲಯಗಳಿಗೆ ಯಾವುದೇ ಅನುದಾನವನ್ನು ನೀಡಿಲ್ಲ. ಎಲ್ಲಾ ವಿಶ್ವ ವಿದ್ಯಾನಿಲಯಗಳು ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕ ಮೊದಲಾದ ಆರ್ಥಿಕ ಮೂಲಗಳಿಂದಷ್ಟೆ ನಡೆಯುತ್ತಿರುವುದು ಅವಮಾನದ ಸಂಗತಿ. ಕೇವಲ ಹಣಕಾಸಿನ ದೃಷ್ಟಿಯಿಂದ ವಿವಿಗಳನ್ನು ಮುಚ್ಚಲು ಹೊರಟಿರುವುದು ಸರ್ಕಾರಕ್ಕೆ ಶೋಭೆ ತರುವ ಕಾರ್ಯವಲ್ಲ ಎಂದು ತಿಳಿಸಲಾಗಿದೆ. ವಿಶ್ವವಿದ್ಯಾಲಯಗಳನ್ನು ಸದೃಢಗೊಳಿಸುವ ಕಾಳಜಿ ಮತ್ತು ಇಚ್ಛಾ ಶಕ್ತಿಯನ್ನು ರಾಜ್ಯ ಸರ್ಕಾರ ತೋರಬೇಕು. ವಿಶ್ವ ವಿದ್ಯಾಲಯಗಳನ್ನು ಮುಚ್ಚುವ ತನ್ನ ನಿರ್ಧಾರವನ್ನು ರಾಜ್ಯ ಸರ್ಕಾರ ಹಿಂಪಡೆಯಬೇಕೆಂದು ಒತ್ತಾಯಿಸಲಾಗಿದೆ.

ಪ್ರತಿಭಟನೆಯಲ್ಲಿ ಎಬಿವಿಪಿ ರಾಜ್ಯ ಕಾರ್ಯಸಮಿತಿ ಸದಸ್ಯ ಅಜಯ್, ಮಡಿಕೇರಿ ನಗರದ ಕಾರ್ಯಕರ್ತ ಪ್ರಮೋದ್ ಪಲ್ಲೇದ ಸೇರಿದಂತೆ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.