ವಿರೋಧದ ನಡುವೆಯೂ ಸ್ಥಳ ಹುಡುಕಾಟದಲ್ಲಿ ಜಿಲ್ಲಾಡಳಿತ
KannadaprabhaNewsNetwork | Published : Oct 17 2023, 12:30 AM IST
ವಿರೋಧದ ನಡುವೆಯೂ ಸ್ಥಳ ಹುಡುಕಾಟದಲ್ಲಿ ಜಿಲ್ಲಾಡಳಿತ
ಸಾರಾಂಶ
ರಾಮನಗರ: ಬ್ರ್ಯಾಂಡ್ ಬೆಂಗಳೂರಿನ ಕಸದ ಸಮಸ್ಯೆಗೆ ಮುಕ್ತಿ ಕಂಡುಕೊಳ್ಳುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಜಿಲ್ಲೆಯಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಕಸ ವಿಲೇವಾರಿ ಘಟಕಕ್ಕಾಗಿ ತೀವ್ರ ವಿರೋಧದ ನಡುವೆಯೂ ಜಿಲ್ಲಾಡಳಿತ ಭೂಮಿ ಒದಗಿಸಲು ತೀರ್ಮಾನಿಸಿದೆ.
ರಾಮನಗರ: ಬ್ರ್ಯಾಂಡ್ ಬೆಂಗಳೂರಿನ ಕಸದ ಸಮಸ್ಯೆಗೆ ಮುಕ್ತಿ ಕಂಡುಕೊಳ್ಳುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಜಿಲ್ಲೆಯಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಕಸ ವಿಲೇವಾರಿ ಘಟಕಕ್ಕಾಗಿ ತೀವ್ರ ವಿರೋಧದ ನಡುವೆಯೂ ಜಿಲ್ಲಾಡಳಿತ ಭೂಮಿ ಒದಗಿಸಲು ತೀರ್ಮಾನಿಸಿದೆ. ಜಿಲ್ಲೆಯವರೇ ಆದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರು ಕಸ ವಿಲೇವಾರಿಗಾಗಿ ಜನವಸತಿ ಪ್ರದೇಶದಿಂದ ದೂರವಿರುವ ಅರಣ್ಯ ಮತ್ತು ಬೆಟ್ಟಗುಡ್ಡಗಳಿಂದ ಆವೃತವಾಗಿರುವ ಪ್ರದೇಶವನ್ನು ಗುರುತಿಸುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದಾರೆ. ಆದರೆ, ಸ್ಥಳೀಯವಾಗಿ ವ್ಯಕ್ತವಾಗುತ್ತಿರುವ ಪ್ರತಿರೋಧವನ್ನು ಲೆಕ್ಕಿಸದೆ ಜಿಲ್ಲಾಡಳಿತ ಕಸ ವಿಲೇವಾರಿ ಘಟಕಕ್ಕೆ ಸೂಕ್ತವಾದ ಜಾಗ ಗುರುತಿಸಲು ಮುಂದಾಗಿದೆ. ಈ ಮೊದಲು ಕೈಗಾರಿಕಾ ಪ್ರದೇಸವಾದ ಬಿಡದಿ ಬಳಿಯೇ 100 ಎಕರೆ ಪ್ರದೇಶವನ್ನು ಕಸ ವಿಲೇವಾರಿ ಘಟಕ ಸ್ಥಾಪನೆಗೆ ಗುರುತಿಸಲಾಗಿದೆ ಎಂದು ಹೇಳಲಾಗಿತ್ತು. ಅದರ ಜೊತೆಗೆ ಕಲ್ಲುಗೋಪಳ್ಳಿಯಲ್ಲಿರುವ ಕಲ್ಲಿನ ಕ್ವಾರೆಗಳ ಬಳಿ ಘಟಕ ನಿರ್ಮಾಣವಾಗಲಿದೆ ಎಂಬ ವದಂತಿಗಳು ದಟ್ಟವಾಗಿ ಹರಿದಾಡುತ್ತಿದ್ದವು. ಆದರೀಗ ಜಿಲ್ಲಾಡಳಿತ ಜನವಸತಿ ಪ್ರದೇಶದಿಂದ ದೂರವಿದ್ದು, ರಸ್ತೆ ಸಂಪರ್ಕ ಇರಬಹುದಾದ ಅರಣ್ಯ ಪ್ರದೇಶದ ಗಡಿಭಾಗಗಳಲ್ಲಿ 100 ಎಕರೆ ಜಾಗ ಗುರುತಿಸುವ ತೀರ್ಮಾನಕ್ಕೆ ಬಂದಿದೆ. ಈ ವಿಚಾರವಾಗಿ ಜಿಲ್ಲಾಧಿಕಾರಿಗಳು ಶೀಘ್ರದಲ್ಲಿಯೇ ತಹಸೀಲ್ದಾರ್ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳ ಸಭೆ ನಡೆಸಿ ಸೂಕ್ತ ಮಾರ್ಗದರ್ಶನ ಮಾಡಲಿದ್ದಾರೆ ಎಂದು ಗೊತ್ತಾಗಿದೆ. ಜಿಲ್ಲೆಯ ಐದು ತಾಲೂಕುಗಳು ಅರಣ್ಯ ಪ್ರದೇಶಗಳನ್ನು ಹೊಂದಿದ್ದು, ಹೀಗಾಗಿ ಕಸ ವಿಲೇವಾರಿ ಘಟಕಕ್ಕಾಗಿ ಕಾಡಂಚಿನಲ್ಲಿ ಅಗತ್ಯವಾಗಿರುವ ಭೂಮಿಗಾಗಿ ಹುಡುಕಾಟ ನಡೆಯಲಿದೆ. ಪ್ರತಿ ತಾಲೂಕಿನಲ್ಲಿ 100 ಎಕರೆ ಜಾಗ ಗುರುತಿಸಿದ ನಂತರ ಘಟಕ ಸ್ಥಾಪನೆಗೆ ಸೂಕ್ತವಾದ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಲು ಉದ್ದೇಶಿಸಲಾಗಿದೆ ಎಂದು ತಿಳಿದು ಬಂದಿದೆ. ಆದರೀಗ ಜಿಲ್ಲೆಯಲ್ಲಿ ಎಲ್ಲಿಯೂ ಬೆಂಗಳೂರಿನ ಕಸ ವಿಲೇವಾರಿಗಾಗಿ ಘಟಕ ಸ್ಥಾಪನೆ ಮಾಡಬಾರದೆಂದು ಜೆಡಿಎಸ್ ಪ್ರತಿರೋಧವೊಡ್ಡಿದರೆ, ಮಾಜಿ ಸಿಎಂ ಕುಮಾರಸ್ವಾಮಿರವರು ಜನರ ಸಮಾಧಿ ಮೇಲೆ ಬ್ರ್ಯಾಂಡ್ ಬೆಂಗಳೂರು ಕಟ್ಟಿದರೆ ಅದಕ್ಕೆ ನಮ್ಮ ತೀವ್ರ ವಿರೋಧವಿದೆ. ಸರ್ಕಾರ ಈ ನಿರ್ಧಾರವನ್ನು ಕೈಬಿಡದಿದ್ದರೆ ಜನರು ಬೀದಿಗೆ ಇಳಿದಾರು ಎಂದು ಹೋರಾಟದ ಎಚ್ಚರಿಕೆ ನೀಡಿದ್ದಾರೆ. ಇದೆಲ್ಲವನ್ನು ಮೀರಿ ರಾಜ್ಯ ಸರ್ಕಾರ ಹಾಗೊಂದು ವೇಳೆ ಕಾಡಂಚಿನಲ್ಲಿ ಕಸ ವಿಲೇವಾರಿ ಘಟಕ ಸ್ಥಾಪನೆ ಮಾಡಿದಲ್ಲಿ ಅದರಿಂದ ಅರಣ್ಯ ಪ್ರದೇಶ ಮತ್ತು ವನ್ಯಜೀವಿಗಳ ಮೇಲೂ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆಗಳಿವೆ. ಇದಕ್ಕೆ ಪರಿಸರವಾದಿ ಹಾಗೂ ವನ್ಯಜೀವಿ ಪ್ರೇಮಿಗಳಿಂದಲೂ ವಿರೋಧ ವ್ಯಕ್ತವಾಗುವ ಸಾಧ್ಯತೆಗಳಿವೆ. ಬಾಕ್ಸ್ ................. ಹರೀಸಂದ್ರಕ್ಕೆ ರಾಮನಗರ - ಬಿಡದಿ ಕಸ: ರಾಮನಗರ ತಾಲೂಕು ಕಸಬಾ ಹೋಬಳಿ ಹರೀಸಂದ್ರ ಗ್ರಾಮದ ಸರ್ವೆ ನಂಬರ್ 166ರಲ್ಲಿರುವ 23 ಎಕರೆ ಭೂಮಿಯನ್ನು ಕಸ ವಿಲೇವಾರಿ ಘಟಕ ನಿರ್ಮಾಣಕ್ಕಾಗಿ ಗುರುತು ಮಾಡಲಾಗಿದೆ. ರಾಮನಗರ ನಗರಸಭೆ ಹಾಗೂ ಬಿಡದಿ ಪುರಸಭೆ ವ್ಯಾಪ್ತಿಯ ವಾರ್ಡುಗಳಲ್ಲಿ ಉತ್ಪತ್ತಿಯಾಗುವ ಕಸವನ್ನು ಹರೀಸಂದ್ರ ಗ್ರಾಮದ ಕಸ ವಿಲೇವಾರಿ ಘಟಕಕ್ಕೆ ವಿಲೇವಾರಿ ಮಾಡಲು ಉದ್ದೇಶಿಸಲಾಗಿದೆ. ಹರೀಸಂದ್ರ ಗ್ರಾಮದಲ್ಲಿ ಗುರುತಿಸಿರುವ 23 ಎಕರೆ ಜಮೀನು ಕಂದಾಯ ಇಲಾಖೆಗೆ ಸೇರಿದ್ದಾಗಿದೆ. ಆದರೀಗ ಕಸ ವಿಲೇವಾರಿ ಘಟಕ ಸ್ಥಾಪನೆಯಿಂದ ಸುತ್ತಮುತ್ತಲ ಗ್ರಾಮಗಳ ಜನ ಜಾನುವಾರುಗಳ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂಬ ಕಾರಣಕ್ಕೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಕೋಟ್ ........ ಕಸ ವಿಲೇವಾರಿ ವಿಚಾರದಲ್ಲಿ ರಾಜ್ಯ ಸರ್ಕಾರದ ತೀರ್ಮಾನವೇ ಅವೈಜ್ಞಾನಿಕವಾಗಿದೆ. ಡಿ.ಕೆ.ಶಿವಕುಮಾರ್ ಮೊದಲು ರಾಮನಗರ ಜಿಲ್ಲೆಯ ಪ್ರತಿನಿಧಿ. ಆ ಮೇಲೆ ನಾಡಿನ ಪ್ರತಿನಿಧಿ ಎಂಬುದನ್ನು ಮರೆಯಬಾರದು. ರಾಮನಗರದಲ್ಲಿ ರೈತರು ಒಳ್ಳೆಯ ಬೆಳೆ ಬೆಳೆಯುತ್ತಾರೆ. ಬೆಂಗಳೂರಿನ ಕಸವನ್ನು ವೈಜ್ಞಾನಿಕವಾಗಿ ಸಂಸ್ಕರಣೆ ಮಾಡುವುದರ ಬಗ್ಗೆ ಗಮನ ಕೊಡಬೇಕು. ಅದರ ಬದಲು ರಾಮನಗರ ಜಿಲ್ಲಾಧಿಕಾರಿಗಳಿಗೆ 100 ಎಕರೆ ಜಮೀನು ಗುರುತಿಸಲು ಹೇಳಿದ್ದಾರೆ. ಹಿಂದೆ ಸರ್ಕಾರಗಳು ಮಂಡೂರಿನಲ್ಲಿ ಮಾಡಿದ್ದು ಏನಾಯಿತು. ಯಶವಂತಪುರದಲ್ಲಿನ ಯುನಿಟ್ ಸರಿಯಾಗಿ ಇದ್ದಿದ್ದರೆ ಈಗ ಏನು ಆಗುತ್ತಿರಲಿಲ್ಲ. - ಎಚ್ .ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿಗಳು. ಕೋಟ್ .............. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ಕಸದ ವಿಲೇವಾರಿಗಾಗಿ ದೊಡ್ಡದಾದ ಕಸ ವಿಲೇವಾರಿ ಘಟಕ ಸ್ಥಾಪಿಸುವ ಯೋಜನೆ ರೂಪಿಸಲಾಗಿದೆ. ಜನವಸತಿ ಪ್ರದೇಶಗಳಿಂದ ದೂರವಿರುವ ಸುಮಾರು 100 ಎಕರೆ ಪ್ರದೇಶವನ್ನು ಗುರುತಿಸುವಂತೆ ಸರ್ಕಾರದಿಂದ ಆದೇಶ ಬಂದಿದೆ. ಅದರಂತೆ ರಸ್ತೆ ಸಂಪರ್ಕ ಇರುವ ಅಥವಾ ಕಲ್ಪಿಸಬಹುದಾದ ಜಾಗಕ್ಕಾಗಿ ಹುಡುಕಾಟ ನಡೆದಿದ್ದು, ಈವರೆಗೆ ಯಾವ ಜಾಗವನ್ನು ಗುರುತಿಸಿಲ್ಲ. ಐದು ತಾಲೂಕುಗಳಲ್ಲಿಯೂ ಜಾಗ ಗುರುತಿಸುವ ಪ್ರಯತ್ನ ನಡೆದಿದ್ದು, ಈ ವಾರದಲ್ಲಿ ತಹಸೀಲ್ದಾರ್ ಗಳ ಸಭೆ ನಡೆಸಿ ವರದಿ ಪಡೆದುಕೊಳ್ಳುತ್ತೇನೆ. - ಅವಿನಾಶ್ , ಜಿಲ್ಲಾಧಿಕಾರಿಗಳು, ರಾಮನಗರ 16ಕೆಆರ್ ಎಂಎನ್ 6.ಜೆಪಿಜಿ ಕಸ ವಿಲೇವಾರಿ ಚಿತ್ರ.