ಹೆಬ್ಬಾಳ್ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ-48ರ ಟೋಲ್ ಬಳಿ ಗೂಡಂಗಡಿ ಮಾಡಿಕೊಂಡು ವ್ಯಾಪಾರ ಮಾಡುತ್ತಿದ್ದವರ ಸಣ್ಣಪುಟ್ಟ ಅಂಗಡಿಗಳನ್ನು ತೆರವುಗೊಳಿಸಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಕ್ರಮವನ್ನು ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕದ ನೇತೃತ್ವದಲ್ಲಿ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.
- ಎನ್ಎಚ್ಎಐ, ಟೋಲ್ ಫ್ಲಾಜಾ ಅಧಿಕಾರಿಗಳ ಕ್ರಮಕ್ಕೆ ಸಂತ್ರಸ್ಥ ಕುಟುಂಬಗಳ ಆಕ್ರೋಶ - - -
ಕನ್ನಡಪ್ರಭ ವಾರ್ತೆ ದಾವಣಗೆರೆಹೆಬ್ಬಾಳ್ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ-48ರ ಟೋಲ್ ಬಳಿ ಗೂಡಂಗಡಿ ಮಾಡಿಕೊಂಡು ವ್ಯಾಪಾರ ಮಾಡುತ್ತಿದ್ದವರ ಸಣ್ಣಪುಟ್ಟ ಅಂಗಡಿಗಳನ್ನು ತೆರವುಗೊಳಿಸಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಕ್ರಮವನ್ನು ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕದ ನೇತೃತ್ವದಲ್ಲಿ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ನಗರದಲ್ಲಿ ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಕುಂದುವಾಡ ಮಂಜುನಾಥ ಇತರರ ನೇತೃತ್ವದಲ್ಲಿ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಅವರಿಗೆ ಸಮಿತಿ ಮುಖಂಡರು, ಸಂತ್ರಸ್ಥ ಗೂಡಂಗಡಿ ವ್ಯಾಪಾರಸ್ಥರು ಅಳಲು ತೋಡಿಕೊಂಡು ಮನವಿ ಅರ್ಪಿಸಿದರು.ಇದೇ ವೇಳೆ ಮಾತನಾಡಿದ ಕುಂದುವಾಡ ಮಂಜುನಾಥ, ಹೆಬ್ಬಾಳು ಟೋಲ್ ಪ್ಲಾಜಾದ ಎರಡೂ ಬದಿ ಕಾಫಿ, ಟೀ, ನೀರಿನ ಬಾಟಲಿ ಹಾಗೂ ತಿಂಡಿ ವ್ಯಾಪಾರದ ಸಣ್ಣಪುಟ್ಟ ಪೆಟ್ಟಿಗೆ ಅಂಗಡಿಗಳನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್ ಎಐ), ಟೋಲ್ ಪ್ಲಾಜಾದ ಅಧಿಕಾರಿಗಳು ಏಕಾಏಕಿ ತೆರವುಗೊಳಿಸಿದ್ದಾರೆ. ಇದರಿಂದ 40ಕ್ಕೂ ಹೆಚ್ಚು ಬಡ ಕುಟುಂಬಗಳು ಬೀದಿಗೆ ಬಿದ್ದಿವೆ. ಟೋಲ್ ಬಳಿ ಸಣ್ಣಪುಟ್ಟ ಅಂಗಡಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಬಡ ವ್ಯಾಪಾರಿಗಳ ಗೂಡಂಗಡಿಗಳನ್ನು ಏಕಾಏಕಿ ತೆರವು ಮಾಡಿಸಿ, ಆ ಜನರ ಜೀವನದ ಮೇಲೆ ಚಪ್ಪಡಿ ಕಲ್ಲು ಎಳೆದಿದ್ದಾರೆ ಎಂದು ಆರೋಪಿಸಿದರು.
ಕಳೆದ 8 ವರ್ಷಗಳಿಂದ ಡ್ರೈನೇಜ್ ಹಾಗೂ ಫುಟ್‌ಪಾತ್ ಮೇಲೆ ತಳ್ಳುವ ಗಾಡಿ/ ಪೆಟ್ಟಿಗೆ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡುತ್ತಾ ಬಡಕುಟುಂಬಗಳು ಜೀವನ ಸಾಗಿಸುತ್ತಿದ್ದವು. ಆರ್ಥಿಕ ಸಂಕಷ್ಟದಲ್ಲೂ ಸಾಲ ಮಾಡಿ ಮಕ್ಕಳ ಶಿಕ್ಷಣ ಮತ್ತು ದಿನನಿತ್ಯದ ಬದುಕನ್ನು ಕಟ್ಟಿಕೊಂಡಿದ್ದ ಬಡ ಕುಟುಂಬಗಳು, ಈಗ ಏಕಾಏಕಿ ಅಂಗಡಿಗಳ ತೆರವಿನಿಂದಾಗಿ ಆದಾಯವಿಲ್ಲದೇ ಬೀದಿಗೆಬಿದ್ದಿವೆ. ಹೆದ್ದಾರಿ ಪ್ರಾಧಿಕಾರ ಹಾಗೂ ಟೋಲ್ ಫ್ಲಾಜಾ ಅಧಿಕಾರಿಗಳ ಇಂತಹ ವರ್ತನೆ ಖಂಡಿಸುತ್ತೇವೆ ಎಂದು ಹೇಳಿದರು.ಟೋಲ್ ಬಳಿ ಸಣ್ಣಪುಟ್ಟ ಅಂಗಡಿ ಇಟ್ಟುಕೊಂಡ ಸಂತ್ರಸ್ತರಲ್ಲಿ ಹೆಚ್ಚಿನವರು ಪರಿಶಿಷ್ಟರು. ಮಳೆ ಇಲ್ಲದೇ ಬರ ಪರಿಸ್ಥಿತಿ ಇರುವಾಗ ಹೀಗೆ ತೆರವು ಕಾರ್ಯ ಕೈಗೊಂಡಿದ್ದು ಆಘಾತ ತಂದಿದೆ. ಜಿಲ್ಲಾಧಿಕಾರಿ ಈ ವಿಚಾರದಲ್ಲಿ ಮಧ್ಯ ಪ್ರವೇಶಿಸಬೇಕು. ಬೀದಿಗೆ ಬಿದ್ದ ಪರಿಶಿಷ್ಟ ಜಾತಿ- ಪಂಗಡಗಳ ಬಡ ಕುಟುಂಬಗಳಿಗೆ ಪುನಃ ಜೀವನೋಪಾಯ ಕಂಡುಕೊಳ್ಳಲು ಅನುಕೂಲ ಹಾಗೂ ಸೂಕ್ತ ವ್ಯವಸ್ಥೆ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ಡಿಎಸ್‌ಎಸ್ ಜಿಲ್ಲಾ ಮಹಿಳಾ ಸಂಚಾಲಕಿ ಕೆ.ವಿಜಯಲಕ್ಷ್ಮೀ, ಹಾಲುವರ್ತಿ ಮಹಾಂತೇಶ, ತುರ್ಚಘಟ್ಟ ಖಾಲೀದ್, ಎಲೆಕ್ಟ್ರಿಕಲ್ ಮಂಜುನಾಥ, ಶಂಕರ, ಶ್ರೀಧರ, ಚಂದ್ರಣ್ಣ, ಮಹಾಂತೇಶ ಕುಂದುವಾಡ, ಸಂತ್ರಸ್ತರಾದ ಹೆಬ್ಬಾಳ್ ಗ್ರಾಮದ ಕರಿಬಸಮ್ಮ, ಸಂದೀಪ, ಪ್ರಕಾಶ, ರೇಣುಕಮ್ಮ, ಶೃತಿ, ಪಂಪಣ್ಣ, ರಂಗಸ್ವಾಮಿ, ಸುನಿಲ್, ಚೇತನಾ, ಪವನ್, ಮೈಲಾರಿ ಸೇರಿದಂತೆ 20ಕ್ಕೂ ಹೆಚ್ಚು ಸಂತ್ರಸ್ಥರು ಪ್ರತಿಭಟನೆಯಲ್ಲಿದ್ದರು.- - -
(ಬಾಕ್ಸ್) * ಆಹಾರ, ಸರಕು, ಸಾಮಗ್ರಿ ರಸ್ತೆ ಪಾಲು ಮಾಡಿದ್ದಾರೆ: ಸಂತ್ರಸ್ತೆ ಗೀತಮ್ಮ ಸಂತ್ರಸ್ಥೆ ಗೀತಮ್ಮ ಹೆಬ್ಬಾಳ್ ಮಾತನಾಡಿ, ನಾವು ಕಡು ಬಡವರಾಗಿದ್ದು, ಟೋಲ್ ಬಳಿ ಸಣ್ಣ ಅಂಗಡಿ ನೆಚ್ಚಿಕೊಂಡು ಬದುಕುತ್ತಿದ್ದೆವು. ಆದರೆ, ದೌರ್ಜನ್ಯದಿಂದ ನಮ್ಮ ಅಂಗಡಿಗಳನ್ನು ಕಸಿಯಲಾಗಿದೆ. ನಮ್ಮ ಆಹಾರ, ಸರಕು-ಸಾಮಗ್ರಿಗಳನ್ನು ಚೆಲ್ಲಾಪಿಲ್ಲಿ ಮಾಡಿ ರಸ್ತೆ ಪಾಲು ಮಾಡಿದ್ದಾರೆ. ಇದರಿಂದ ಲಕ್ಷಾಂತರ ರು. ನಷ್ಟವಾಗಿದೆ. ಊರಲ್ಲಿ ಮಳೆ ಇಲ್ಲ, ಸರಿಯಾದ ಬೆಳೆಯೂ ಇಲ್ಲ. ಕೃಷಿ ಕೆಲಸಗಳಾಗಲಿ ಅಥವಾ ನರೇಗಾ(ಉದ್ಯೋಗ ಖಾತ್ರಿ) ಕೆಲಸಗಳಾಗಲಿ ಸರಿಯಾಗಿ ಸಿಗುತ್ತಿಲ್ಲ ಎಂದು ಅಳಲು ತೋಡಿಕೊಂಡರು. ಮಕ್ಕಳ ಶಿಕ್ಷಣಕ್ಕಾಗಿ ಹಾಗೂ ಮದುವೆಗಳಿಗಾಗಿ ಲಕ್ಷಾಂತರ ರು. ಸಾಲ ಮಾಡಿಕೊಂಡಿದ್ದೇವೆ. ಈ ಸ್ಥಿತಿಯಲ್ಲಿ ಇದ್ದ ಗೂಡಂಗಡಿಗಳನ್ನೂ ತೆರವುಗೊಳಿಸಿದರೆ ನಾವು ಜೀವನ ಮಾಡುವುದು ಹೇಗೆ? ತಮಗೆ ಸೂಕ್ತ ಪರಿಹಾರ ಹಾಗೂ ಅದೇ ಜಾಗದಲ್ಲಿ ಅಂಗಡಿಗಳನ್ನು ಮರು ಸ್ಥಾಪಿಸಲು ಅವಕಾಶ ನೀಡದಿದ್ದರೆ ಟೋಲ್ ಬಂದ್ ಮಾಡಿ ಪ್ರತಿಭಟಿಸುತ್ತೇವೆ. ನಮಗೆ ನ್ಯಾಯ ಸಿಗದಿದ್ದರೆ ಇಲ್ಲಿಯೇ ಪ್ರಾಣ ಬಿಡಬೇಕಾಗುತ್ತದೆ ಎಂದು ಎಚ್ಚರಿಸಿದರು.- - -
-20ಕೆಡಿವಿಜಿ4: ದಾವಣಗೆರೆಯಲ್ಲಿ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಅವರಿಗೆ ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಕುಂದುವಾಡ ಮಂಜುನಾಥ ನೇತೃತ್ವದಲ್ಲಿ ಹೆಬ್ಬಾಳ್ ಟೋಲ್ ಫ್ಲಾಜಾ ಬಳಿಯ ಬಡ ವ್ಯಾಪಾರಸ್ಥರು ಮನವಿ ಅರ್ಪಿಸಿದರು.