ಧರ್ಮಸ್ಥಳ ವಿರುದ್ಧ ಅಪಪ್ರಚಾರ ಮಾಡುವವರ ವಿರುದ್ಧ ಪ್ರತಿಭಟನೆ

| Published : Aug 26 2025, 01:05 AM IST

ಸಾರಾಂಶ

ಕ್ಷೇತ್ರದ ವಿರುದ್ದ ಅಪಪ್ರಚಾರ ಮಾಡಿದವರ ಸೂಕ್ತ ಕಾನೂನು ರೀತಿ ಕ್ರಮವನ್ನು ಕೈಗೊಳ್ಳಬೇಕು

ದಾಂಡೇಲಿ: ಧರ್ಮಸ್ಥಳದ ಪಾವಿತ್ರ್ಯಕ್ಕೆ ಧಕ್ಕೆ ತರುತ್ತಿರುವ ವ್ಯಕ್ತಿಗಳ ಹಾಗೂ ಅವರಿಗೆ ಸಹಕಾರಿಯಾಗಿ ಕೆಲಸ ಮಾಡುತ್ತಿರುವ ದುಷ್ಟ ಶಕ್ತಿಗಳ ವಿರುದ್ಧ ನಗರದಲ್ಲಿ ಬಿಜೆಪಿಯಿಂದ ಸೋಮಾನಿ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು.ಈ ಸಂದರ್ಭದಲ್ಲಿ ಬಿಜೆಪಿ ಮಂಡಳದ ಅದ್ಯಕ್ಷ ಬುದವಂತಗೌಡ ಪಾಟೀಲ, ಮಾಜಿ ಅದ್ಯಕ್ಷ ರೋಷನ ನೇತ್ರಾವಳಿ, ಸುಧಾಕರ ರೆಡ್ಡಿ, ಹಿಂದುಳಿದ ವರ್ಗಗಳ ಮೋರ್ಚಾದ ಅದ್ಯಕ್ಷ ರವಿ ಗಾಂವಕರ ಮಾತನಾಡಿ, ಈ ರಾಷ್ಟ್ರ ಕೋಟ್ಯಂತರ ಭಕ್ತರ ಪವಿತ್ರ ಆರಾಧ್ಯ ಕ್ಷೇತ್ರವಾದ ಶ್ರೀಕ್ಷೇತ್ರ ಧರ್ಮಸ್ಥಳದ ವಿರುದ್ಧ ಮತ್ತು ಕ್ಷೇತ್ರದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ವಿರುದ್ಧ ಅಪಪ್ರಚಾರ ನಡೆಸುತ್ತಿರುವುದು ತೀವ್ರ ಖಂಡನೀಯ. ಇಡೀ ರಾಜ್ಯಕ್ಕೆ ಧರ್ಮಸ್ಥಳದ ಕೊಡುಗೆ ಅಪಾರವಾಗಿದೆ. ಕಳೆದ ೧೩ ವರ್ಷಗಳಿಂದ ಶ್ರೀಕ್ಷೇತ್ರದ ವಿರುದ್ದ ಅಪಪ್ರಚಾರ ನಡೆಯುತ್ತಿದೆ. ಆದರೆ ಕ್ಷೇತ್ರದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಎಲ್ಲವನ್ನು ಮಂಜುನಾಥ ಸ್ವಾಮಿ ಮತ್ತು ಅಣ್ಣಪ್ಪ ಸ್ವಾಮಿ ನೋಡಿಕೊಳ್ಳುತ್ತಾರೆ ಎಂದು ಸತ್ಯಧರ್ಮದಡಿಯಲ್ಲಿ ಸೇವಾ ಕೈಂಕರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಧರ್ಮಸ್ಥಳ ಮುಜರಾಯಿ ಇಲಾಖೆ ಸುಪರ್ದಿಗೆ ಬರಬೇಕು ಎಂಬ ಉದ್ದೇಶದಿಂದ ಹತ್ತು ಹಲವು ನಾಟಕಗಳನ್ನಾಡಿದರೂ ಅಂತಿಮವಾಗಿ ಧರ್ಮಕ್ಕೆ ಗೆಲುವಾಗಿದೆ. ಧರ್ಮಸ್ಥಳದ ಹೆಸರಿಗೆ ಕಳಂಕ ತರಲು ಪ್ರಯತ್ನಿಸಿದರು ಹಾಗೂ ಕ್ಷೇತ್ರದ ವಿರುದ್ದ ಅಪಪ್ರಚಾರ ಮಾಡಿದವರ ಸೂಕ್ತ ಕಾನೂನು ರೀತಿ ಕ್ರಮವನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಆಹಾರ ನಿರೀಕ್ಷಕ ಗೋಪಿ ಚವ್ಹಾಣಗೆ ಮನವಿ ನೀಡಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಮಿಥುನ ನಾಯ್ಕ, ಗಿರೀಶ ಟೊಸುರ, ಬಿಜೆಪಿ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಗೀತಾ ಶಿಕಾರಿಪುರ ಉಪಸ್ಥಿತರಿದ್ದರು.