ಮಹಿಳೆಯರ ಮೇಲಿನ ದೌರ್ಜನ್ಯ ಖಂಡಿಸಿ ಧರಣಿ

| Published : Jun 13 2024, 01:45 AM IST

ಸಾರಾಂಶ

ರಾಜ್ಯದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ, ಹತ್ಯೆ ಪ್ರಕರಣ ನಡೆಯುತ್ತಿದ್ದು, ತನಿಖೆಗೆ ಉನ್ನತ ಸಮಿತಿ ರಚಿಸಬೇಕು ಎಂದು ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದವು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕೆಲವು ತಿಂಗಳಿನಿಂದ ರಾಜ್ಯದಲ್ಲಿ ನಡೆದಿರುವ ಮಹಿಳೆಯರ ಮೇಲಿನ ದೌರ್ಜನ್ಯ, ಕಗ್ಗೊಲೆ ಪ್ರಕರಣಗಳ ತನಿಖೆಗೆ ಉನ್ನತ ಮಟ್ಟದ ಸಮಿತಿ ರಚಿಸಬೇಕೆಂದು ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್‌ ಆಗ್ರಹಿಸಿದರು.

ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ಪ್ರಕರಣ ವಿರೋಧಿಸಿ ಸ್ವಾತಂತ್ರ್ಯ ಉದ್ಯಾನವನದಲ್ಲಿ ವಿವಿಧ ಸಂಘಟನೆಗಳು ಆಯೋಜಿಸಿದ್ದ ‘ಹಕ್ಕೊತ್ತಾಯ ಸಭೆ’ಯಲ್ಲಿ ಮಾತನಾಡಿದ ಅವರು, ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನೊಬ್ಬ ನಗರದಲ್ಲಿ ಇತ್ತೀಚೆಗೆ ವಿದ್ಯಾರ್ಥಿನಿ ಪ್ರಬುದ್ಧಳ ಹತ್ಯೆ ಮಾಡಿದ್ದಾನೆ. ಮತ್ತೊಂದೆಡೆ, ಗೆಳತಿಯರು ಸಂಬಂಧ ಮುಂದುವರೆಸಲು ನಿರಾಕರಿಸಿದಾಗ ಯುವಕರೂ ಹತ್ಯೆ ನಡೆಸಿರುವ ಪ್ರಕರಣಗಳು ನಮ್ಮ ಮುಂದಿವೆ. ಆದ್ದರಿಂದ ಮಹಿಳೆಯರ ಮೇಲಿನ ದೌರ್ಜನ್ಯ, ಕಗ್ಗೊಲೆ ಪ್ರಕರಣಗಳ ತನಿಖೆಗೆ ಉನ್ನತ ಮಟ್ಟದ ಸಮಿತಿ ರಚಿಸಬೇಕು. ಸಮಿತಿಯ ಶಿಫಾರಸುಗಳನ್ನು ಸರ್ಕಾರ ಅನುಷ್ಠಾನಗೊಳಿಸಬೇಕು ಎಂದು ಒತ್ತಾಯಿಸಿದರು.

ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ। ನಾಗಲಕ್ಷ್ಮಿ ಚೌಧರಿ ಮಾತನಾಡಿ, ಆಯೋಗವು ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ಸಹಿಸದೆ ಕ್ರಮ ಕೈಗೊಳ್ಳಲಿದೆ. ಮಹಿಳೆಯರಿಗೆ ಸಂಬಂಧಿಸಿದ ಕಾನೂನುಗಳನ್ನು ಕಠಿಣವಾಗಿ ಅನುಷ್ಠಾನಗೊಳಿಸಬೇಕು. ಅಪರಾಧಿಗಳಿಗೆ ತಕ್ಕ ಶಿಕ್ಷೆಯಾಗಬೇಕು ಎಂದರು.

ಸಿಪಿಐಎಂ ಮುಖಂಡ ಸಿದ್ದನಗೌಡ ಪಾಟೀಲ್‌, ವಕೀಲರಾದ ಬಾಲನ್‌, ಬಿ.ಟಿ.ವೆಂಕಟೇಶ್‌ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.