ಸಮಾಜಕ್ಕೆ ಜ್ಞಾನ, ಸಂಸ್ಕಾರ ಹಾಗೂ ಭವಿಷ್ಯವನ್ನು ನೀಡುವ ಶಿಕ್ಷಕರು ನ್ಯಾಯಯುತ ಬೇಡಿಕೆಗಾಗಿ ಸರ್ಕಾರದ ಮುಂದೆ ಹೋರಾಟ ಮಾಡುವ ಪರಿಸ್ಥಿತಿ ಎದುರಾಗಿರುವುದು ದುರ್ದೈವದ ಸಂಗತಿ.

ಹಾವೇರಿ: ಸರ್ಕಾರ ಅನುದಾನಿತ ಮತ್ತು ಅನುದಾನಿತರಹಿತ ಶಿಕ್ಷಣ ಸಂಸ್ಥೆಗಳ ಮೇಲೆ ಮಲತಾಯಿ ಧೋರಣೆ ತೋರುತ್ತಿದ್ದು, ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ನ. 17ರಂದು ಬೃಹತ್ ಜಾಥಾವನ್ನು ಧಾರವಾಡದಲ್ಲಿ ಹಾಗೂ ನ. 18ರಿಂದ ಅನಿರ್ದಿಷ್ಟಾವಧಿ ಶಾಲಾ ಕಾಲೇಜುಗಳನ್ನು ಬಂದ್ ಮಾಡಲಾಗುತ್ತಿದ್ದು, ಹೋರಾಟಕ್ಕೆ ಸಮಸ್ತ ಆಡಳಿತ ಮಂಡಳಿ ಮತ್ತು ಶಿಕ್ಷಕರು ಕೈಜೋಡಿಸಿ, ಹೋರಾಟವನ್ನು ಯಶಸ್ವಿಗೊಳಿಸಬೇಕೇಂದು ವಿಧಾನಪರಿಷತ್ ಸದಸ್ಯ ಹಾಗೂ ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ನಗರದ ಗುರುಭವನದಲ್ಲಿ ಜಿಲ್ಲಾ ಮಾಧ್ಯಮಿಕ ಶಾಲಾ ನೌಕರರ ಸಂಘ ವತಿಯಿಂದ ಹಮ್ಮಿಕೊಂಡಿದ್ದ ಹೋರಾಟದ ಪೂರ್ವಭಾವಿ ಸಭೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಸಮಾಜಕ್ಕೆ ಜ್ಞಾನ, ಸಂಸ್ಕಾರ ಹಾಗೂ ಭವಿಷ್ಯವನ್ನು ನೀಡುವ ಶಿಕ್ಷಕರು ನ್ಯಾಯಯುತ ಬೇಡಿಕೆಗಾಗಿ ಸರ್ಕಾರದ ಮುಂದೆ ಹೋರಾಟ ಮಾಡುವ ಪರಿಸ್ಥಿತಿ ಎದುರಾಗಿರುವುದು ದುರ್ದೈವದ ಸಂಗತಿ. ಸರ್ಕಾರ ಮಾಡಲಾಗದ ಶಿಕ್ಷಣ ಕ್ರಾಂತಿಯನ್ನು ಹಲವಾರು ಮಹಾನ್ ವ್ಯಕ್ತಿಗಳು, ಮಠಮಾನ್ಯಗಳು ಸ್ವಂತ ಹಿತಾಸಕ್ತಿ ಮರೆತು ಸಮಾಜಕ್ಕೆ ಶಿಕ್ಷಣ ನೀಡಿವೆ. ಆದರೆ ಇಂದು ಹಲವಾರು ಶಿಕ್ಷಣ ಸಂಸ್ಥೆಗಳು ಮುಚ್ಚಿದ್ದು, ಇನ್ನು ಕೆಲವು ದಯನೀಯ ಸ್ಥಿತಿಯಲ್ಲಿ ಬದುಕಿವೆ. ಇಂತಹ ದುಸ್ಥಿತಿ ಆರೋಗ್ಯಕರ ಸಮಾಜದ ಲಕ್ಷಣವಾಗಿಲ್ಲ ಎಂದು ಹೇಳಿದರು.

ಸರ್ಕಾರಿ ನೌಕರರು ಮಾಡುವ ಎಲ್ಲ ಕೆಲಸವನ್ನು ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರು ಮಾಡುತ್ತಿದ್ದಾರೆ. ಆದರೆ ಯಾವುದೇ ಪಿಂಚಣಿ ಸೌಲಭ್ಯ ಇಲ್ಲದೇ, ನಿವೃತ್ತಿ ನಂತರ ಕೂಲಿ ಕೆಲಸಕ್ಕೆ ಹೋಗುವಂಥ ಪರಿಸ್ಥಿತಿ ಎದುರಾಗಿದೆ. 30 ವರ್ಷಗಳ ಕಾಲ ಶಿಕ್ಷಣ ನೀಡಿ ಕೊನೆಗಾಲದಲ್ಲಿ ಕುಟುಂಬಕ್ಕೆ ಹೊರೆ ಎನಿಸಿದ್ದಾನೆ. ಕಾಲ್ಪನಿಕ ವೇತನಕ್ಕೆ ಸಂಬಂಧಿಸಿದ ಹೈಕೋರ್ಟ್‌ ಆದೇಶವನ್ನು ಪಾಲಿಸುತ್ತಿಲ್ಲ. ಇದೆಲ್ಲಾ ಗೊತ್ತಿದ್ದೂ, ಸರ್ಕಾರ ಜಾಣ ಮೌನವನ್ನು ತೋರುತ್ತೀದೆ. ತನ್ನದೇ ಪ್ರಣಾಳಿಕೆಯಲ್ಲಿ ಹೇಳಿದ ಮಾತನ್ನು ಈಡೇರಿಸಲು ಆಸಕ್ತಿ ತೋರುತ್ತಿಲ್ಲ. ಕುರುಡು ಸರ್ಕಾರಕ್ಕೆ ಹೋರಾಟದ ಮೂಲಕ ಎಚ್ಚರಿಸುವ ಕೆಲಸ ಮಾಡುತ್ತಿದ್ದು, ಶಿಕ್ಷಕರ ಋಣ ತೀರಿಸುವ ಅವಕಾಶವಾಗಿದೆ ಎಂದರು.

ಹಾನಗಲ್ಲಿನ ಜನತಾ ಶಿಕ್ಷಣ ಸಂಸ್ಥೆಯ ಪದಾಧಿಕಾರಿ ಎ.ಎಸ್. ಬಳ್ಳಾರಿ ಮಾತನಾಡಿ, ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಪರೋಕ್ಷವಾಗಿ ಮುಚ್ಚುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಖಾಲಿಯಾದ ಹುದ್ದೆಗಳ ಭರ್ತಿ ಹಲವಾರು ಷರತ್ತುಗಳನ್ನು ವಿಧಿಸಿದೆ. ಮನ್ನಣೆ ನವೀಕರಣ ಹೆಸರಿನಲ್ಲಿ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡುತ್ತಿದೆ. ಸರ್ಕಾರಿ ಶಾಲಾ ಮಕ್ಕಳಿಗೆ ನೀಡುವ ಸೌಲಭ್ಯಗಳನ್ನು ಖಾಸಗಿ ಶಾಲಾ ಮಕ್ಕಳಿಗೆ ನೀಡದೇ ಅಲ್ಲೂ ತಾರತಮ್ಯ ನೀತಿ ಅನುಸರಿಸಿದ್ದು, ಅವು ತಾವಾಗಿಯೇ ಮುಚ್ಚಲಿ ಎನ್ನು ಮನೋಭಾವ ಸರ್ಕಾರದ್ದಾಗಿದೆ. ಈ ನೀತಿ ಖಂಡಿಸಿ, ಹೋರಾಟಕ್ಕೆ ಬೆಂಬಲ ನೀಡಲಾಗುವುದು ಎಂದರು.

ಸಮಾರಂಭದ ಸಾನಿಧ್ಯ ವಹಿಸಿದ್ದ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಮಾತನಾಡಿ, ದೇಶದಲ್ಲಿ ರೈತ, ಸೈನಿಕ ಮತ್ತು ಶಿಕ್ಷಕನಿಗೆ ಅಪಾರವಾದ ಗೌರವವಿದೆ. ಆದರೆ ಇತ್ತೀಚಿನ ಘಟನಾವಳಿಗಳು ಅದಕ್ಕೆ ಪೂರಕವಾಗಿಲ್ಲ. ಹೋರಾಟವೇ ಜೀವನದ ಕರ್ತವ್ಯ ಎಂದು ಭಾವಿಸಿರುವ ಹೊರಟ್ಟಿ ಅವರ ಹೋರಾಟಕ್ಕೆ ಬೆಂಬಲ ನೀಡಲಾಗುವುದು ಎಂದರು.

ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ, ಗೌರಿಮಠದ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು. ಮಾಜಿ ಶಾಸಕ ಶಿವರಾಜ ಸಜ್ಜನರ, ಆಡಳಿತ ಮಂಡಳಿಯ ಸಿ.ಬಿ. ಕುರುವತ್ತಿಗೌಡ, ಬಿ.ಎಸ್. ಅಕ್ಕಿವಳ್ಳಿ, ದೀಪಾ ಮರಡಿ, ವಾಸಣ್ಣ ಸಾಹುಕಾರ, ಮನೋಜ ದೇಸಾಯಿ, ಬಿ.ಆರ್. ಪುಟ್ಟಣ್ಣನವರ, ಎಸ್.ಎಸ್. ಮುಷ್ಠಿ, ಡಾ. ಮೂಡದೇವಣ್ಣನವರ, ಯು,ಎಸ್‌. ಪಠಾಣ, ಜೆ.ಸಿ. ಕುರಂದವಾಡ, ಉಮೇಶ ಹೇರೂರು, ಪ್ರಕಾಶ ಬಣಕಾರ, ಎಚ್.ಪಿ. ಬಣಕಾರ, ಎಂ.ಬಿ. ರಮೇಶ, ಡಿ.ಡಿ. ಲಂಗೋಟಿ, ಶೋಭಾ ಜಾಗಟಗೇರಿ ಇತರರು ಇದ್ದರು. ಎನ್.ಎನ್. ಕುಂದೂರ ಸ್ವಾಗತಿಸಿದರು. ಎಸ್.ಎನ್. ಮಳೆಪ್ಪನವರ ನಿರೂಪಿಸಿದರು. ರವಿ ವಿ. ವಂದಿಸಿದರು.