ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಮಂಗಳೂರಿನಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತ ಸುಹಾಸ್ ಶೆಟ್ಟಿಯವರನ್ನು ಹತ್ಯೆ ಮಾಡಿರುವುದನ್ನು ಖಂಡಿಸಿ, ಬಿಜೆಪಿಯಿಂದ ಶುಕ್ರವಾರ ನಗರದ ಹೇಮಾವತಿ ಪ್ರತಿಮೆ ಮುಂದೆ ಪ್ರತಿಭಟಿಸಿದ್ದಲ್ಲದೇ ಹತ್ಯೆ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಂಡು ಗಲ್ಲಿಗೇರಿಸುವಂತೆ ಆಗ್ರಹಿಸಿದರು.ಬಿಜೆಪಿ ನಗರಾಧ್ಯಕ್ಷ ಯೋಗೇಶ್ ಗೌಡ ಮಂಜು ಮಾಧ್ಯಮದೊಂದಿಗೆ ಮಾತನಾಡಿ, ಮಂಗಳೂರಿನಲ್ಲಿ ನಮ್ಮೆಲ್ಲರ ಸಹೋದರ ಹಾಗೂ ಬಿಜೆಪಿಯ ಕಟ್ಟಾಳು ಬಜರಂಗದಳದ ಕಾರ್ಯಕರ್ತ ಸುಹಾಸ್ ಶೆಟ್ಟಿಯವರ ಬರ್ಬರ ಹತ್ಯೆಯಾಗಿದೆ. ಕಾಂಗ್ರೆಸ್ ಸರಕಾರವು ಅಧಿಕಾರಕ್ಕೆ ಬಂದ ದಿನದಿಂದ ಹಿಂದುತ್ವವಾದಿಗಳ ಹತ್ಯೆಗಳು ಹೆಚ್ಚಾಗಿದ್ದು, ಸಿದ್ದರಾಮಯ್ಯ ಅವರ ನೇತೃತ್ವದ ಸರಕಾರದಲ್ಲಿ ಇಂತಹ ದುರ್ಘಟನೆಗಳು ಹೆಚ್ಚಾಗಿರುವುದು ಖಂಡನೀಯ. ಯಾರೋ ಒಬ್ಬ ಹಿಂದುತ್ವವಾದಿಯನ್ನು ಹತ್ಯೆ ಮಾಡುವುದರಿಂದ ಹಿಂದೂ ಧರ್ಮವನ್ನು ನಾಶ ಮಾಡಬಹುದು, ಹಿಂದೂಗಳನ್ನು ಕುಗ್ಗಿಸಬಹುದು ಎನ್ನುವ ಭಾವನೆ ಅವರ ಮನಸ್ಸಿನಲ್ಲಿ ಇರಬಹುದು. ಹಿಂದೂಗಳೆಲ್ಲರೂ ಗಟ್ಟಿಯಾಗಿದ್ದು, ಯಾವುದೇ ಹೋರಾಟಕ್ಕೂ ಸಿದ್ಧರಾಗಿದ್ದಾರೆ. ಹಿಂದೂ ಧರ್ಮದ ರಕ್ಷಣೆಗೆ ಎಲ್ಲರೂ ಕೂಡ ಬದ್ಧರಾಗಿದ್ದಾರೆ. ಆದರೆ, ಹಿಂದೂ ಧರ್ಮದಲ್ಲಿ ಹಿಂಸಾತ್ಮಕ ಹೋರಾಟ ಹಿಂದಿನಿಂದಲೂ ಇಲ್ಲ. ಇದರಿಂದಲೇ ಎಲ್ಲರೂ ಕೂಡ ಶಾಂತಿಯುತವಾಗಿದ್ದಾರೆ ಎಂದು ತಿಳಿಸಿದರು. ಸಾವಿರಾರು ವರ್ಷಗಳಿಂದಲೂ ಕೂಡ ಹಿಂದೂ ಧರ್ಮದ ಮೇಲೆ ಆಕ್ರಮಣ ನಡೆದರೂ ಯಾರೂ ಕೂಡ ಈ ಧರ್ಮವನ್ನು ಇಲ್ಲಿವರೆಗೂ ನಾಶ ಮಾಡಲು ಆಗಿಲ್ಲ. ನೀವು ಇದೇ ರೀತಿ ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ ಮಾಡುವವರನ್ನು ಪೋಷಿಸಿಕೊಂಡು ಬಂದರೆ ಬಿಜೆಪಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ನೇರವಾಗಿ ಕಾಂಗ್ರೆಸ್ ಸರಕಾರ ಹಾಗೂ ಮುಖ್ಯಮಂತ್ರಿಗೆ ಹೇಳುತ್ತಿದ್ದೇವೆ ಎಂದು ತಿಳಿಸಿದರು.
ತುರ್ತಾಗಿ ಸುಹಾಸ್ ಶೆಟ್ಟಿಯ ಬರ್ಬರ ಹತ್ಯೆಗೆ ಕಾರಣರಾದವರನ್ನು ಬಂಧಿಸಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಜೊತೆಗೆ ಅವರನ್ನು ಗಲ್ಲಿಗೇರಿಸಬೇಕು ಎಂದು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ನಗರಸಭೆ ಮಾಜಿ ಅಧ್ಯಕ್ಷ ಆರ್. ಮೋಹನ್ ಕುಮಾರ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಿರೀಶ್, ರಾಜ್ಯ ಒಬಿಸಿ ಮೋರ್ಚಾ ಕಾರ್ಯದರ್ಶಿ ಡಿ. ಪ್ರಸನ್ನಕುಮಾರ್, ವೇದವತಿ, ರಾಜ್ಯ ಯುವ ಮೋರ್ಚಾ ಉಪಾಧ್ಯಕ್ಷ ಹರ್ಷಿತ್, ಅಶೋಕ್ ಇತರರು ಉಪಸ್ಥಿತರಿದ್ದರು.