ಸಾರಾಂಶ
- ಪ್ರೋತ್ಸಾಹಧನವನ್ನು 15 ಸಾವಿರಕ್ಕೆ ಹೆಚ್ಚಳ ಮಾಡಬೇಕು, ಚಿಕ್ಕಮಗಳೂರಿನಲ್ಲಿ ಮೆರವಣಿಗೆ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಜಿಲ್ಲೆಯ ಎಲ್ಲಾ ತಾಲೂಕಿನ ಆಶಾ ಕಾರ್ಯಕರ್ತೆಯರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ನಗರದ ಆಜಾದ್ ಪಾರ್ಕ್‌ನಲ್ಲಿ ಸಮಾವೇಶಗೊಂಡ ಕಾರ್ಯಯರ್ತೆಯರು ಕೇಂದ್ರದ ಪ್ರೋತ್ಸಾಹಧನ ಮತ್ತು ರಾಜ್ಯ ಸರ್ಕಾರದ ಗೌರವಧನ ಸೇರಿ ಮಾಸಿಕ 15 ಸಾವಿರ ರು.ಗಳನ್ನು ನೀಡುವಂತೆ ಆಗ್ರಹಿಸಿ ಪ್ರತಿಭಟಿಸಿದರು.ಪ್ರತಿಭಟನಾಕಾರರನ್ನುದ್ದೇಶಿಸಿ ಸಂಘದ ರಾಜ್ಯ ಸಮಿತಿ ಸದಸ್ಯೆ ಉಮಾದೇವಿ ಮಾತನಾಡಿ, ಆರೋಗ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲರಿಗೂ ನಿಗಧಿತ ವೇತನ ಇದೆ. ಆದರೆ, ಆಶಾ ಕಾರ್ಯಕರ್ತೆಯರಿಗೆ ಗೌರವಧನ ಹೊರತುಪಡಿಸಿ ಯಾವುದೇ ಆದಾಯ ಇಲ್ಲ. ಕೂಡಲೇ ಸರ್ಕಾರ ಮಾಸಿಕ 15 ಸಾವಿರ ರು.ವೇತನ ನೀಡಬೇಕು, ಇಲ್ಲವಾದರೆ ಮುಂದಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಬೀದಿಗಿಳಿದು ಹೋರಾಟ ಮಾಡುವುದಾಗಿ ಎಚ್ಚರಿಸಿದರು.
ಜಿಲ್ಲಾಡಳಿತ ಕುಂದುಕೊರತೆ ಸಭೆ ಮಾಡುತ್ತಿಲ್ಲ, ಆರ್‌ಸಿಹೆಚ್ ಪೋರ್ಟಲ್‌ಗೆ ಲಿಂಕ್ ಮಾಡಿರುವುದರಿಂದ ಆಶಾ ಕಾರ್ಯ ಕರ್ತೆಯರಿಗೆ ವೇತನ ಸಂಪೂರ್ಣವಾಗಿ ಸಿಗದೆ ಸಾವಿರಾರು ರುಪಾಯಿ ನಷ್ಟ ಅನುಭವಿಸುತ್ತಿದ್ದಾರೆ. ಇತರ ವೇತನ ಸಂಬಂಧಿತ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಮತ್ತು ಮೊಬೈಲ್ ಆಧಾರಿತ ಕೆಲಸವನ್ನು ಕೈಬಿಡುವಂತೆ ಒತ್ತಾಯಿಸಿ ಜಿಲ್ಲಾಮಟ್ಟದಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ ಎಂದರು.ಆಶಾ ಸಾಫ್ಟ್‌ವೇರ್‌ನಿಂದಾಗಿ ವೇತನ ಸರಿಯಾಗಿ ಪಾವತಿಯಾಗುತ್ತಿಲ್ಲ. ಈ ತೊಂದರೆಯನ್ನು ತಪ್ಪಿಸಬೇಕು. ಮೊಬೈಲ್ ಆಧಾರಿತ ಕೆಲಸಗಳಿಗೆ ತರಬೇತಿ ನೀಡಬೇಕು ಹಾಗೂ ಪದೆ ಪದೆ ಕೆಲಸದಿಂದ ತೆಗೆಯುತ್ತೇವೆಂದು ಅಧಿಕಾರಿಗಳು ಬೆದರಿಸುತ್ತಿರುವುದನ್ನು ನಿಲ್ಲಿಸಬೇಕೆಂದು ಆಗ್ರಹಿಸಿದರು.
ಎಐಟಿಯುಸಿ ಅಧ್ಯಕ್ಷೆ ತಾರಾ ಕೃಷ್ಣಪ್ಪ ಮಾತನಾಡಿ, ಸರ್ಕಾರ ಆಶಾ ಕಾರ್ಯಕರ್ತೆಯರಿಗೆ ಜೀವನ ಹಾಗೂ ಆರೋಗ್ಯ ಭದ್ರತೆ ಒದಗಿಸಬೇಕು. ಆಶಾ ಕಾರ್ಯಕರ್ತೆಯರು ಹಲವಾರು ಆರೋಗ್ಯ ಸಮಸ್ಯೆಗಳಿಂದ ಮೃತಪಟ್ಟ ಕುಟುಂಬಗಳಿಗೆ ಪರಿಹಾರಧನ ಕೂಡಲೇ ಮಂಜೂರು ಮಾಡಬೇಕೆಂದು ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾ ಅಧ್ಯಕ್ಷೆ ತಾರಕೇಶ್ವರಿ, ಕಾರ್ಯದರ್ಶಿ ಎಂ.ಕೆ. ಜ್ಯೋತಿ, ಕೊಪ್ಪ ತಾಲೂಕು ಅಧ್ಯಕ್ಷೆ ಗೀತಾ, ಎನ್.ಆರ್. ಪುರ ಗಾಯಿತ್ರಿ, ಪ್ರಧಾನ ಕಾರ್ಯದರ್ಶಿ ಮಂಜುಳ, ಪ್ರೇಮ, ಪವಿತ್ರ, ನಯನ, ಲತಾ, ಪುಷ್ಪಾ, ಭಾಗ್ಯಲಕ್ಷ್ಮಿ, ರತ್ನಮ್ಮ, ರುಕ್ಮಣಿ ಹಾಗೂ ಆಶಾ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು. 12 ಕೆಸಿಕೆಎಂ 4
ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಚಿಕ್ಕಮಗಳೂರಿನಲ್ಲಿ ಆಶಾ ಕಾರ್ಯಕರ್ತೆಯರು ಶುಕ್ರವಾರ ಪ್ರತಿಭಟನೆ ನಡೆಸಿದರು.