ಆಪೇ ಆಟೋಗಳ ನಗರ ಸಂಚಾರ ನಿರ್ಬಂಧಿಸುವಂತೆ ಆಟೋ ಚಾಲಕರು, ಮಾಲೀಕರಿಂದ ಪ್ರತಿಭಟನೆ

| Published : Feb 02 2024, 01:00 AM IST

ಆಪೇ ಆಟೋಗಳ ನಗರ ಸಂಚಾರ ನಿರ್ಬಂಧಿಸುವಂತೆ ಆಟೋ ಚಾಲಕರು, ಮಾಲೀಕರಿಂದ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ನಗರ ಪ್ರದೇಶದಲ್ಲಿ ಸಂಚರಿಸಲು ಆಪೇ ಆಟೋಗಳಿಗೆ ಪರವಾನಗಿ ಇಲ್ಲದಿದ್ದರೂ ನಗರದ ಹೊರವಲಯದಿಂದ ಪ್ರಯಾಣಿಕರನ್ನು ಹತ್ತಿಸಿಕೊಂಡು ನಗರ ಪ್ರವೇಶಿಸಿ ಸಂಚಾರ ಮಾಡುತ್ತಿರುವುದರಿಂದ ಆಟೋ ಚಾಲಕರಿಗೆ ನಷ್ಟವಾಗುತ್ತಿದೆ. ಹೊಗೆರಹಿತ ವಾಹನಗಳಾದ ಪೆಟ್ರೋಲ್, ಎಲ್‌ಪಿಜಿ, ಸಿಎನ್‌ಜಿ ಹಾಗೂ ಎಲೆಕ್ಟ್ರಿಕ್ ವಾಹನಗಳ ಸಂಚಾರಕ್ಕೆ ಅವಕಾಶ ಇದ್ದರೂ ಸಹ ಅಧಿಕಾರಿಗಳು ಕಂಡರೂ ಕಾಣದಂತೆ ಬೇಜವಾಬ್ದಾರಿ ಪ್ರದರ್ಶಿಸುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯಆಪೇ ಆಟೋಗಳಿಗೆ ನಗರಕ್ಕೆ ಸಂಚಾರ ನಿರ್ಬಂಧಿಸಿ, ಹೊಸ ಆಟೋಗಳಿಗೆ ಪರವಾನಗಿ ಸ್ಥಗಿತಗೊಳಿಸುವಂತೆ ಒತ್ತಾಯಿಸಿ ಆಟೋ ಚಾಲಕರು ಮತ್ತು ಮಾಲೀಕರು ನಗರದಲ್ಲಿ ಪ್ರತಿಭಟನೆ ನಡೆಸಿದರು.

ಕರ್ನಾಟಕ ರಾಜೀವ್ ಗಾಂಧಿ ಆಟೋ ಟ್ಯಾಕ್ಸಿ ಚಾಲಕರ ವೇದಿಕೆ ಆಶ್ರಯದಲ್ಲಿ ಆಟೋಗಳ ಸಂಚಾರ ಸ್ಥಗಿತ ಮಾಡಿ ಮುಷ್ಕರ ಮಾಡಿದ ಚಾಲಕರು, ನಗರದ ಮೈಷುಗರ್ ವೃತ್ತದಿಂದ ಆಟೋಗಳ ಜೊತೆ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿ ಕಚೇರಿ ಬಳಿ ಅನಿರ್ದಿಷ್ಟಾವಧಿ ಧರಣಿ ನಡೆಸಿದರು.

ನಗರ ಪ್ರದೇಶದಲ್ಲಿ ಸಂಚರಿಸಲು ಆಪೇ ಆಟೋಗಳಿಗೆ ಪರವಾನಗಿ ಇಲ್ಲದಿದ್ದರೂ ನಗರದ ಹೊರವಲಯದಿಂದ ಪ್ರಯಾಣಿಕರನ್ನು ಹತ್ತಿಸಿಕೊಂಡು ನಗರ ಪ್ರವೇಶಿಸಿ ಸಂಚಾರ ಮಾಡುತ್ತಿರುವುದರಿಂದ ಆಟೋ ಚಾಲಕರಿಗೆ ನಷ್ಟವಾಗುತ್ತಿದೆ. ಹೊಗೆರಹಿತ ವಾಹನಗಳಾದ ಪೆಟ್ರೋಲ್, ಎಲ್‌ಪಿಜಿ, ಸಿಎನ್‌ಜಿ ಹಾಗೂ ಎಲೆಕ್ಟ್ರಿಕ್ ವಾಹನಗಳ ಸಂಚಾರಕ್ಕೆ ಅವಕಾಶ ಇದ್ದರೂ ಸಹ ಅಧಿಕಾರಿಗಳು ಕಂಡರೂ ಕಾಣದಂತೆ ಬೇಜವಾಬ್ದಾರಿ ಪ್ರದರ್ಶಿಸುತ್ತಿದ್ದಾರೆ ಎಂದು ಆರೋಪಿಸಿದರು.

ಮಂಡ್ಯದಲ್ಲಿ ಸಾರ್ವಜನಿಕರ ವ್ಯಾಪ್ತಿಗೆ ಮೀರಿ ಹೆಚ್ಚಿನ ಪ್ರಮಾಣದಲ್ಲಿ ಪರವಾನಗಿ ನೀಡುತ್ತಿರುವುದರಿಂದ ಈಗಾಗಲೇ ಸಂಚರಿಸುತ್ತಿರುವ ಆಟೋ ಚಾಲಕರಿಗೆ ತೊಂದರೆಯಾಗುತ್ತಿದೆ. ಅದೇ ರೀತಿ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಇರುವುದರಿಂದ ಆಟೋ ನಂಬಿ ಬದುಕುತ್ತಿರುವವರಿಗೆ ಜೀವನ ನಿರ್ವಹಣೆ ಮಾಡಲು ಕಷ್ಟವಾಗುತ್ತಿದೆ ಎಂದು ದೂರಿದರು.

ಮನೆ ಬಾಡಿಗೆ ಕಟ್ಟಲು, ಅನಾರೋಗ್ಯಕ್ಕೆ ತುತ್ತಾದರೆ ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತಿಲ್ಲ. ಇಂಧನ ಹಾಗೂ ಆಟೋ ಬಿಡಿ ಭಾಗಗಳ ಬೆಲೆ ಏರಿಕೆ ಆಗಿರುವುದರಿಂದ ಚಾಲಕರ ಸಂಕಷ್ಟ ಹೇಳತೀರದಾಗಿದೆ ಎಂದು ಅಳಲು ತೋಡಿಕೊಂಡರು.

ಸಾರಿಗೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಆಟೋ ಚಾಲಕರು ಮತ್ತಷ್ಟು ಸಂಕಷ್ಟಕ್ಕಿಡಾಗುತ್ತಿದ್ದಾರೆ. ಆಪೇ ಆಟೋಗಳಿಗೆ ಮಂಡ್ಯ ನಗರ ಪ್ರವೇಶ ನಿರ್ಬಂಧಿಸಬೇಕು. ಈಗಾಗಲೇ ಹೆಚ್ಚಿನ ಪ್ರಮಾಣದ ಆಟೋಗಳು ಸಂಚಾರ ಮಾಡುತ್ತಿರುವುದರಿಂದ ಮುಂದಿನ ಐದು ವರ್ಷಗಳ ಕಾಲ ಯಾವುದೇ ಹೊಸ ಆಟೋಗಳಿಗೆ ಪರ್ಮಿಟ್ ನೀಡಬಾರದು ಎಂದು ಒತ್ತಾಯಿಸಿ ಜಿಲ್ಲಾಕಾರಿ ಹಾಗೂ ಸಾರಿಗೆ ಅಧಿಕಾರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಸಂಘದ ಗೌರವಾಧ್ಯಕ್ಷ ಕೆ.ಆರ್.ರವೀಂದ್ರ, ಅಧ್ಯಕ್ಷ ಟಿ.ಕೃಷ್ಣ, ಮುಖಂಡರಾದ ಎಂ.ಎನ್.ಸತ್ಯನಾರಾಯಣ, ರವಿಕುಮಾರ್, ಎಂ. ರಾಜು, ಕೃಷ್ಣ, ನಾರಾಯಣ, ಸೈಯದ್ ನವಾಬ್ ಜಾನ್, ಕುಮಾರ್, ಗುರುಶಂಕರ್, ಬೋರಲಿಂಗ, ಶಿವಕುಮಾರ್, ಎಚ್.ಸಿ. ಮಹೇಶ್ ಸೇರಿದಂತೆ ನೂರಾರು ಚಾಲಕರು ಪಾಲ್ಗೊಂಡಿದ್ದರು.