ಸಾರಾಂಶ
ಬಳ್ಳಾರಿ: ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ರಾಜ್ಯಕ್ಕೆ ಯಾವುದೇ ನೂತನ ಯೋಜನೆಗಳನ್ನು ನೀಡದೇ ಸಂಪೂರ್ಣ ನಿರ್ಲಕ್ಷ್ಯಿಸಿದೆ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ನಗರದ ಗಡಗಿಚನ್ನಪ್ಪ ವೃತ್ತದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.ಈ ಬಾರಿಯ ಬಜೆಟ್‌ನಲ್ಲಿ ರಾಜ್ಯಕ್ಕೆ ಹೊಸ ಯೋಜನೆಗಳು ಸಿಗಲಿವೆ. ಇದರಿಂದ ರಾಜ್ಯದ ಪ್ರಗತಿಗೆ ಪೂರಕವಾಗಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಕೇಂದ್ರದ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಕರ್ನಾಟಕಕ್ಕೆ ಯಾವುದೇ ಹೊಸ ಯೋಜನೆ ನೀಡದೇ ಮಲತಾಯಿ ಧೋರಣೆ ತೋರಿಸಿದೆ. ಆಂಧ್ರಪ್ರದೇಶ, ಬಿಹಾರ ಮತ್ತಿತರ ರಾಜ್ಯಗಳಿಗೆ ಮಾತ್ರ ಹೆಚ್ಚಿನ ಅನುದಾನ ನೀಡಲಾಗಿದೆ. ಇದು ಕೇಂದ್ರದ ಸರ್ವಾಧಿಕಾರಿ ಧೋರಣೆಯಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.ಇದೇ ವೇಳೆ ಮತನಾಡಿದ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಲ್ಲಂ ಪ್ರಶಾಂತ್, ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ಕರ್ನಾಟಕವನ್ನು ನಿರ್ಲಕ್ಷ್ಯಿಸಲಾಗಿದೆ. ಬಜೆಟ್‌ನಲ್ಲಿ ಯಾವುದೇ ಜನಪರ ಯೋಚನೆಗಳು ಇಲ್ಲ ಎಂಬುದು ಸ್ಪಷ್ಟವಾಗಿದೆ. ನಿರುದ್ಯೋಗ ನಿವಾರಣೆಯ ಕ್ರಮಗಳ ಕುರಿತು ಯಾವುದೇ ನಿಲುವುಗಳಿಲ್ಲ. ನೀರಾವರಿ ಯೋಜನೆಗಳನ್ನು ಕಡೆಗಣಿಸಲಾಗಿದೆ. ಕೇಂದ್ರದ ಬಜೆಟ್ ಮೇಲೆ ಇಡೀ ದೇಶದ ಜನರು ಸಾಕಷ್ಟು ನಿರೀಕ್ಷೆಗಳನ್ನಿಟ್ಟುಕೊಂಡಿದ್ದರು. ಆದರೆ, ಯಾವುದೇ ಪ್ರಮುಖ ಯೋಜನೆಗಳನ್ನು ಘೋಷಣೆ ಮಾಡದೆ ಜನರ ಕೈಗೆ ಖಾಲಿ ಚೊಂಬು ನೀಡಿದ್ದಾರೆ ಎಂದು ಆಪಾದಿಸಿದರು.ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಎ.ಮಾನಯ್ಯ ಮಾತನಾಡಿ, ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಕರ್ನಾಟಕವನ್ನು ಕಡೆಗಣಿಸಿರುವುದು ತೀವ್ರ ಖಂಡನೀಯ. ಕೇಂದ್ರದ ಧೋರಣೆಯಿಂದಾಗಿ ಅತ್ಯಂತ ಹಿಂದುಳಿದಿರುವ ಕಲ್ಯಾಣ ಕರ್ನಾಟಕ ಭಾಗಕ್ಕೆ ಮತ್ತಷ್ಟೂ ಪ್ರಗತಿಯ ಹಿನ್ನಡೆ ಅನುಭವಿಸುವಂತಾಗಿದೆ ಎಂದರು.
ಬಿಜೆಪಿ ಕರ್ನಾಟಕದ ಅಭಿವೃದ್ಧಿ ಬೇಕಾಗಿಲ್ಲ. ರಾಜ್ಯದ ಬಿಜೆಪಿ ಸಂಸದರು ಸಹ ಈ ಬಗ್ಗೆ ಧ್ವನಿ ಎತ್ತುತ್ತಿಲ್ಲ. ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಗೊಂಡಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕರ್ನಾಟಕದ ಪ್ರಗತಿಯ ಬಗ್ಗೆ ಎಳ್ಳಷ್ಟೂ ಯೋಚನೆ ಮಾಡಿಲ್ಲ ಎಂಬುದೇ ದುರಾದೃಷ್ಟಕರ ಎಂದು ಲಿಡ್ಕರ್ ನಿಗಮದ ಅಧ್ಯಕ್ಷ ಮುಂಡ್ರಗಿ ನಾಗರಾಜ್ ಆಕ್ರೋಶ ವ್ಯಕ್ತಪಡಿಸಿದರು.ಮೇಯರ್ ಮುಲ್ಲಂಗಿ ನಂದೀಶ್, ಕಲ್ಲುಕಂಬ ಪಂಪಾಪತಿ, ಮಾಜಿ ಮೇಯರ್ ರಾಜೇಶ್ವರಿ, ಸಂಗನಕಲ್ಲು ವಿಜಯಕುಮಾರ್, ಎರಕುಲಸ್ವಾಮಿ, ವೆಂಕಟೇಶ್ ಹೆಗಡೆ, ಕೆ.ಇ.ಚಿದಾನಂದಪ್ಪ, ಗುಡ್ಲೂ ರವಿಕುಮಾರ್, ಎನ್.ಸತ್ಯಪ್ಪ, ವಿ.ಕೆ.ಬಸಪ್ಪ ಸೇರಿದಂತೆ ಪಕ್ಷದ ನೂರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.