ವಕೀಲ ರಾಕೇಶ್ ಕಿಶೋರ್ ವಿರುದ್ಧ ದಸಂಸ ಕಾರ್ಯಕರ್ತರಿಂದ ಪ್ರತಿಭಟನೆ

| Published : Oct 29 2025, 01:15 AM IST

ಸಾರಾಂಶ

ಸರ್ವೊಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ ಬಿ.ಆರ್.ಗವಾಯಿ ಅವರ ಮೇಲೆ ರಾಕೇಶ್ ಕಿಶೋರ್ ಎಂಬ ವಕೀಲ ಶೂ ಎಸೆಯಲು ಯತ್ನಿಸಿರುವುದು ದೇಶದ್ರೋಹಿ ಕೃತ್ಯ ಮತ್ತು ಡಾ.ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನಕ್ಕೆ ಮಾಡಿರುವ ಅಪಮಾನ.

ಕನ್ನಡಪ್ರಭ ವಾರ್ತೆ ನಾಗಮಂಗಲ

ಸರ್ವೊಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ ಬಿ.ಆರ್.ಗವಾಯಿ ಅವರ ಮೇಲೆ ವಕೀಲ ರಾಕೇಶ್ ಕಿಶೋರ್ ಶೂ ಎಸೆಯಲು ಯತ್ನಿಸಿದ ಘಟನೆ ಖಂಡಿಸಿ ತಾಲೂಕಿನ ಬೆಳ್ಳೂರಿನಲ್ಲಿ ದಸಂಸ ಮುಖಂಡರು ಹಾಗೂ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಬೆಳ್ಳೂರು ಪಟ್ಟಣದ ಸಂತೆ ಮೈದಾನದಿಂದ ನಾಡಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ದಸಂಸ ಮುಖಂಡರು ಹಾಗೂ ಕಾರ್ಯಕರ್ತರು ವಕೀಲ ರಾಕೇಶ್ ಕಿಶೋರ್ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಸರ್ವೊಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ ಬಿ.ಆರ್.ಗವಾಯಿ ಅವರ ಮೇಲೆ ರಾಕೇಶ್ ಕಿಶೋರ್ ಎಂಬ ವಕೀಲ ಶೂ ಎಸೆಯಲು ಯತ್ನಿಸಿರುವುದು ದೇಶದ್ರೋಹಿ ಕೃತ್ಯ ಮತ್ತು ಡಾ.ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನಕ್ಕೆ ಮಾಡಿರುವ ಅಪಮಾನ ಎಂದು ಕಿಡಿಕಾರಿದರು.

ಮಾನವ ಕುಲಕ್ಕೆ ಕಳಂಕ ತರುವಂತೆ ನಡೆದುಕೊಂಡು ನ್ಯಾಯಾಧೀಶರ ಮೇಲೆ ಶೂ ಎಸೆಯಲು ಯತ್ನಿಸಿದ ವಕೀಲನಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿ ನಾಡ ಕಚೇರಿ ಮುಂಭಾಗದಲ್ಲಿ ಕೆಲ ಹೊತ್ತು ಧರಣಿ ನಡೆಸಿದ ಬಳಿಕ ಉಪ ತಹಸಿಲ್ದಾರ್ ಟಿ.ಆರ್. ಪದ್ಮ ಅವರಿಗೆ ಮನವಿ ಪತ್ರ ಸಲ್ಲಿಸಿ ಪ್ರತಿಭಟನೆ ಕೈಬಿಟ್ಟರು.

ಪ್ರತಿಭಟನೆಯಲ್ಲಿ ದಸಂಸ ಮುಖಂಡರಾದ ಕಂಚಿನಕೋಟೆ ಮೂರ್ತಿ, ಬೆಳ್ಳೂರು ಆಟೋ ಶಿವಣ್ಣ, ವೆಂಕಟೇಶ್, ಪ್ರಸಾದ್, ಪುಟ್ಟರಾಜು, ಅನ್ನದಾನಿ, ಗೀತಾ, ಮಂಜು, ನಂಜುಂಡಪ್ಪ, ಲಕ್ಷ್ಮಮ್ಮ, ಚಿರಂಜೀವಿ, ತೊಳಲಿ ಕೃಷ್ಣಮೂರ್ತಿ, ಮನು, ಸೇರಿದಂತೆ ನೂರಾರು ಮಂದಿ ಇದ್ದರು.

ಗ್ರಾಪಂ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಎಚ್.ಎನ್.ಸತ್ಯವತಿ ನಂದೀಶ್‌ ಆಯ್ಕೆ

ಮದ್ದೂರು:

ತಾಲೂಕಿನ ಕೊಪ್ಪ ಹೋಬಳಿ ಆಬಲವಾಡಿ ಗ್ರಾಪಂ ನೂತನ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಎಚ್.ಎನ್.ಸತ್ಯವತಿ ನಂದೀಶ್ ಮಂಗಳವಾರ ಚುನಾಯಿತರಾದರು.

ನಿಕಟ ಪೂರ್ವ ಅಧ್ಯಕ್ಷ ಆರ್.ಸುರೇಶ್ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಜೆಡಿಎಸ್ 8 ಹಾಗೂ ಕಾಂಗ್ರೆಸ್ 6 ಸದಸ್ಯರ ಬಲದ ಗ್ರಾಪಂ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಗೆ ಜೆಡಿಎಸ್ ಬೆಂಬಲಿತ ಎಚ್.ಎನ್.ಸತ್ಯವತಿ ನಂದೀಶ್, ಕಾಂಗ್ರೆಸ್ ಬೆಂಬಲಿತ ಪವಿತ್ರ ನಾಮಪತ್ರ ಸಲ್ಲಿಸಿದ್ದರು. ನಂತರ ನಡೆದ ಚುನಾವಣೆಯಲ್ಲಿ ಸತ್ಯವತಿ 8 ಮತ ಪಡೆದು ಚುನಾಯಿತರಾದರು. ಪ್ರತಿಸ್ಪರ್ಧಿ ಪವಿತ್ರ 6 ಮತಗಳಿಸಿ ಪರಾಜಿತರಾದರು.

ತಾಪಂ ರಾಮಲಿಂಗಯ್ಯ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು. ನೂತನ ಅಧ್ಯಕ್ಷ ಸತ್ಯವತಿ ಅವರನ್ನು ಸದಸ್ಯರಾದ ಸುರೇಶ್, ಸೋಮಾಚಾರಿ, ಪವಿತ್ರ, ಚುಂಚಮ್ಮ, ಸತೀಶ್, ದೇವರಾಜು, ಸಾಗರ್, ಮುಖಂಡರಾದ ರವೀಂದ್ರ, ವೀರಣ್ಣ, ಸುರೇಶ್, ತಿಮ್ಮೆಶ್, ಅಶೋಕ, ಅನಿಲ್, ಪ್ರಶಾಂತ್ ಮತ್ತಿತರರು ಅಭಿನಂದಿಸಿದರು.