ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ವಿಧಾನ ಪರಿಷತ್ ಸದಸ್ಯ ಹಾಗೂ ಬಿಜೆಪಿಯ ರಾಷ್ಟ್ರೀಯ ಮಾಜಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರ ಬಂಧನವನ್ನು ಖಂಡಿಸಿ ಕೊಡಗು ಜಿಲ್ಲಾ ಬಿಜೆಪಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.ಮಾಜಿ ಶಾಸಕರಾದ ಕೆ.ಜಿ. ಬೋಪಯ್ಯ ಹಾಗೂ ಅಪ್ಪಚ್ಚು ರಂಜನ್ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ಕಾಂಗ್ರೆಸ್ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ತಮ್ಮ ಅಸಮಾಧಾನ ಹೊರ ಹಾಕಿದರು.
ಈ ಸಂದರ್ಭ ಮಾಜಿ ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ ಬೆಳಗಾವಿಯ ಸುವರ್ಣ ಸೌಧದಲ್ಲಿ ಕಾಂಗ್ರೆಸ್ ನವರು ಕಾನೂನನ್ನು ಗಾಳಿಗೆ ತೂರಿ ಗೂಂಡಾ ವರ್ತನೆ ತೋರಿದ್ದಾರೆ. ಸಿ.ಟಿ. ರವಿ ಅವರ ಮೇಲೆ ಹಲ್ಲೆ ಮಾಡಿದ್ದಾರೆ. ದೇಶ ದ್ರೋಹಿಗಳನ್ನು ವಶಕ್ಕೆ ಪಡೆಯುವ ರೀತಿಯಲ್ಲಿ ಪೊಲೀಸರು ಅವರನ್ನು ಬಂಧಿಸಿರುವುದು ಖಂಡನೀಯ ಎಂದರು.ಮಾಜಿ ಶಾಸಕ ಅಪ್ಪಚ್ಚು ರಂಜನ್ ಮಾತನಾಡಿ ಸುವರ್ಣ ಸೌಧದಲ್ಲಿ ಕಾಂಗ್ರೆಸ್ ನವರು ಗೂಂಡಾಗಿರಿ ಮಾಡಿದ್ದಾರೆ. ಸುವರ್ಣ ಸೌಧದಲ್ಲಿ ಶಾಸಕರಿಗೆ ರಕ್ಷಣೆ ಇಲ್ಲ. ಅಂದ ಮೇಲೆ ರಾಜ್ಯದಲ್ಲಿ ಜನರಿಗೆ ರಕ್ಷಣೆ ಇದೆಯಾ? ಅವರನ್ನು ಕೊಂದು ಬಿಡ್ತಿದ್ದರು ಎಂದು ಡಿ. ಕೆ ಶಿವಕುಮಾರ್ ಹೇಳುತ್ತಾರೆ. ಹಾಗಾದರೆ ಸಿ. ಟಿ. ರವಿ ಅವರನ್ನು ಕೊಲೆ ಮಾಡಲು ಪ್ಲಾನ್ ಮಾಡಿದ್ದಾರಾ ಇದನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದರು.
ಅವರನ್ನು ಬಂಧನ ಮಾಡಿ ರಾತ್ರಿ ಇಡೀ ಸುತ್ತಾಡಿಸಲಾಗಿದೆ.ಬಂಧಿಸಿದ ತಕ್ಷಣ ಅವರನ್ನು ಕೋರ್ಟಿಗೆ ಹಾಜರು ಪಡಿಸಬೇಕಾಗಿತ್ತು. ಗೂಂಡಾಗಳ ರೀತಿಯಲ್ಲಿ ಕಾನೂನನ್ನು ಕೈಗೆತ್ತಿಕೊಳ್ಳಲಾಗಿದೆ. ಇದಕ್ಕೆಲ್ಲಾ ಕಾಂಗ್ರೆಸ್ ನ ಕುಮ್ಮಕ್ಕು ಇದೆ. ಅದರಲ್ಲೂ ಲಕ್ಷ್ಮಿ ಹೆಬ್ಬಾಳ್ಕರ್ ಕಡೆ ಬಹಳ ಗೂಂಡಾಗಳಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಮಾತನಾಡಿ ಮೊದಲು ಬಿಹಾರದಲ್ಲಿ ಗೂಂಡಾ ರಾಜ್ಯ ಇದೆ ಎನ್ನುತ್ತಿದ್ದೆವು.ಆದರೆ ಕಳೆದ ಒಂದುವರೆ ವರ್ಷಗಳಿಂದ ರಾಜ್ಯದಲ್ಲಿ ಗೂಂಡಾಗಿರಿ ಸಂಸ್ಕೃತಿ ಶುರುವಾಗಿದೆ. ಬಿಜೆಪಿಯವರನ್ನು ಈ ರೀತಿ ಕೇಸ್ ಹಾಕಿ ಮಟ್ಟ ಹಾಕುವುದಕ್ಕೆ ಸಾಧ್ಯವಿಲ್ಲ.
ಒಂದು ಎಂಪಿ ಇರುವಾಗಲೂ ಬಿಜೆಪಿ ಹೋರಾಟ ಮಾಡಿ ಬಂದ ಪಕ್ಷ.ಕಾಂಗ್ರೆಸ್ ವಿರುದ್ಧ ಹೋರಾಟ ಮಾಡಿ ಈಗ ರಾಷ್ಟ್ರದಲ್ಲಿ ಮೋದಿಯವರ ಸರ್ಕಾರ ಇದೆ.
ಮುಂದೆ ರಾಜ್ಯದಲ್ಲೂ ನಮ್ಮ ಸರ್ಕಾರ ಆಡಳಿತಕ್ಕೆ ಬರುತ್ತದೆ. ಆಗ ಸಿ. ಟಿ. ರವಿ ಅವರಿಗೆ ಮಾಡಿರುವುದನ್ನು ನಮ್ಮ ಸರ್ಕಾರ ಲೆಕ್ಕ ಚುಪ್ತಾ ಮಾಡುತ್ತದೆ ಎಂದುಕಾಂಗ್ರೆಸ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ಮಾತನಾಡಿ ಕಾಂಗ್ರೆಸ್ ಸರ್ಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ. ಸಂವಿಧಾನದ ದೇಗುಲ ವಿಧಾನಸೌಧದಲ್ಲಿ ಅಧಿವೇಶನ ನಡೆಯುವ ಸಂದರ್ಭ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷದ ನಡುವೆ ಮಾತಿನ ಚಕಮಕಿ ನಡೆದಿದೆ. ಇದನ್ನು ನೆಪ ಮಾಡಿಕೊಂಡು ಪೊಲೀಸ್ ಇಲಾಖೆಯ ಮೇಲೆ ಒತ್ತಡ ಹೇರಿ ಸಿ.ಟಿ.ರವಿ ಅವರನ್ನು ಬಂಧಿಸಿರುವುದು ಒಬ್ಬ ಜನಪ್ರತಿನಿಧಿಗೆ ಹಾಗೂ ಸಂವಿಧಾನಕ್ಕೆ ಮಾಡಿರುವ ಅಪಮಾನವಾಗಿದೆ ಎಂದು ಆರೋಪಿಸಿದರು.ವಿಧಾನ ಪರಿಷತ್ ಮಾಜಿ ಸದಸ್ಯ ಸುನಿಲ್ ಸುಬ್ರಮಣಿ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ, ವಕ್ತಾರ ಬಿ.ಕೆ.ಅರುಣ್ ಕುಮಾರ್, ಕಾಂಗೀರ ಸತೀಶ್, ಮಡಿಕೇರಿ ನಗರಾಧ್ಯಕ್ಷ ಉಮೇಶ್ ಸುಬ್ರಮಣಿ,
ಮಹಿಳಾ ಬಿಜೆಪಿ ಜಿಲ್ಲಾ ಅಧ್ಯಕ್ಷೆ ಅನಿತಾ ಪೂವಯ್ಯ ಮತ್ತಿತರರು ಹಾಜರಿದ್ದರು.