ಹಾಸ್ಟೆಲ್ ಅವ್ಯವಸ್ಥೆ ಖಂಡಿಸಿ ಎಂಜಿನಿಯರಿಂಗ್‌ ವಿದ್ಯಾರ್ಥಿಗಳಿಂದ ಪ್ರತಿಭಟನೆ

| Published : Jan 12 2025, 01:19 AM IST

ಹಾಸ್ಟೆಲ್ ಅವ್ಯವಸ್ಥೆ ಖಂಡಿಸಿ ಎಂಜಿನಿಯರಿಂಗ್‌ ವಿದ್ಯಾರ್ಥಿಗಳಿಂದ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಕಳಪೆ ಗುಣಮಟ್ಟದ ಆಹಾರ ನೀಡುತ್ತಿರುವುದನ್ನು ಖಂಡಿಸಿ ತಾಲೂಕಿನ ದೇವಗಿರಿಯಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಎಂಜಿನಿಯರಿಂಗ್ ಬಾಲಕರ ಹಾಸ್ಟೆಲ್‌ ವಿದ್ಯಾರ್ಥಿಗಳು ಎಸ್‌ಎಫ್‌ಐ ನೇತೃತ್ವದಲ್ಲಿ ಶನಿವಾರ ಉಪವಾಸ ಧರಣಿ ನಡೆಸಿದರು.

ಹಾವೇರಿ: ಕಳಪೆ ಗುಣಮಟ್ಟದ ಆಹಾರ ನೀಡುತ್ತಿರುವುದನ್ನು ಖಂಡಿಸಿ ತಾಲೂಕಿನ ದೇವಗಿರಿಯಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಎಂಜಿನಿಯರಿಂಗ್ ಬಾಲಕರ ಹಾಸ್ಟೆಲ್‌ ವಿದ್ಯಾರ್ಥಿಗಳು ಎಸ್‌ಎಫ್‌ಐ ನೇತೃತ್ವದಲ್ಲಿ ಶನಿವಾರ ಉಪವಾಸ ಧರಣಿ ನಡೆಸಿದರು.ಈ ವೇಳೆ ಹಾಸ್ಟೆಲ್ ಘಟಕ ಅಧ್ಯಕ್ಷ ರೇವಣಸಿದ್ಧಾರಾಧ್ಯ ಎನ್.ಎಸ್. ಮಾತನಾಡಿ, ಎಂಜಿನಿಯರಿಂಗ್ ಬಾಲಕರ ವಸತಿ ನಿಲಯದಲ್ಲಿ ಉತ್ತಮ ಗುಣಮಟ್ಟದ ಆಹಾರ ನೀಡುತ್ತಿಲ್ಲ, ಕೊಳೆತ ತರಕಾರಿಗಳನ್ನು ಬಳಸಲಾಗುತ್ತಿದೆ. ಅನುದಾನ ಕೊರತೆ ನೆಪದಿಂದ ಊಟಕ್ಕೆ ಕಡಿತ ಮಾಡಿದ್ದಾರೆ. ಪುಸ್ತಕಗಳು, ಆಟದ ಸಾಮಗ್ರಿಗಳನ್ನು ಮೂರು ವರ್ಷ ಕಳೆದರು ನೀಡಿಲ್ಲ. ಮೆನು ಚಾರ್ಟ್ ಪ್ರಕಾರ ಊಟ ನೀಡುತ್ತಿಲ್ಲ. ಗ್ರಂಥಾಲಯವನ್ನು ಬಳಕೆಗೆ ನೀಡುತ್ತಿಲ್ಲ. ಇಲಾಖೆಯ ಜಿಲ್ಲಾಧಿಕಾರಿಗಳು ಹಾಗೂ ತಾಲೂಕು ಅಧಿಕಾರಿಗಳ ವಸತಿ ನಿಲಯಕ್ಕೆ ಬರುವುದಿಲ್ಲ ನಮ್ಮ ಸಮಸ್ಯೆಗಳನ್ನು ಆಲಿಸುವುದಿಲ್ಲ ಎಂದು ದೂರಿದರು.ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್. ಮಾತನಾಡಿ, ಉತ್ತಮ ಗುಣಮಟ್ಟದ ಆಹಾರ ನೀಡುವಂತೆ ಹಾಗೂ ಮೂಲಭೂತ ಸೌಕರ್ಯಗಳಿಗಾಗಿ ಪ್ರತಿ ಆರು ತಿಂಗಳಿಗೊಮ್ಮೆ ಹೋರಾಟ ಮಾಡಲಾಗುತ್ತದೆ. ಶಾಶ್ವತ ಪರಿಹಾರಕ್ಕಾಗಿ ಅಧಿಕಾರಿಗಳ ಮುಂದಾಗುತ್ತಿಲ್ಲ. ವಸತಿ ನಿಲಯದಲ್ಲಿ ವಿದ್ಯಾರ್ಥಿಗಳಿಗೆ ಮೂಲಭೂತ ಸೌಕರ್ಯಗಳಿಲ್ಲದೆ ನರಳುವಂತಹ ಸ್ಥಿತಿ ನಿರ್ಮಾಣವಾಗಿದೆ. ನೂರಾರು ವಿದ್ಯಾರ್ಥಿಗಳು ದೂರದ ಊರಿನಿಂದ ಬಂದು ವಸತಿ ನಿಲಯದಲ್ಲಿ ಆಶ್ರಯ ಪಡೆದ ವಿದ್ಯಾಭ್ಯಾಸ ನಡೆಸುತ್ತಿದ್ದಾರೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಆಯುಕ್ತರು ನೀಡಿದ ವಸತಿ ನಿಲಯದ ಊಟದ ಮೆನು ಚಾರ್ಟ್ ಪ್ರಕಾರ ಟೆಂಡರ್ ದರಕ್ಕೂ ಮಾರುಕಟ್ಟೆಯಲ್ಲಿರುವ ಪ್ರಸ್ತುತ ದಿನಬಳಕೆಯ ವಸ್ತುಗಳ ದರಕ್ಕೂ ಸಾಕಷ್ಟು ವ್ಯತ್ಯಾಸ ಕಂಡುಬರುತ್ತದೆ ಎಂದು ಇತ್ತೀಚೆಗೆ ಜಿಲ್ಲಾದ್ಯಂತ ಪ್ರತ್ಯೇಕವಾಗಿ ಹಾವೇರಿ ಬಿಸಿಎಂ ಇಲಾಖೆಯ ಮೆನು ಚಾರ್ಟ್ ತಯಾರಿಸಿ ಬದಲಾವಣೆ ಮಾಡಲು ಹೊರಟಿರುವುದು ವಿದ್ಯಾರ್ಥಿ ವಿರೋಧಿಯಾಗಿದೆ. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಅನುಮತಿಗಾಗಿ ಕಾಯುತ್ತಿರುವ ಬೆನ್ನಲ್ಲೇ ಜಿಲ್ಲಾದ್ಯಂತ ಹಾಸ್ಟೆಲ್‌ಗಳಲ್ಲಿ ಆಹಾರ ಸೇರಿದಂತೆ ಮೂಲಭೂತ ಸೌಕರ್ಯಗಳಿಗೆ ಕತ್ತರಿ ಹಾಕುತ್ತಿರವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು. ಕೂಡಲೇ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಮೆನು ಪ್ರಕಾರ ಗುಣಮಟ್ಟದ ಆಹಾರ ನೀಡಬೇಕು. ಶುಚಿ ಕಿಟ್, ಕಾಟ್, ಬೆಡ್ ವ್ಯವಸ್ಥೆ ಕಲ್ಪಿಸಬೇಕು. ಮೆನು ಚಾರ್ಟ್ ಬದಲಾವಣೆ ಮಾಡಬೇಕು. ಶೌಚಾಲಯ ಸರಿಪಡಿಸಿ ಸ್ವಚ್ಛತೆ ಕಾಪಾಡಬೇಕು. ಕುಡಿಯುವ ನೀರಿನ ಸಮಸ್ಯೆ ಸರಿಪಡಿಸಬೇಕು. ಗ್ರಂಥಾಲಯ ನಿರ್ವಹಣೆ ಮಾಡಬೇಕು ಎಂದು ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ಮಾರುತಿ ರೆಡ್ಡಿ, ಮನೋಜ ಪಂಚಗಟ್ಟಿಮಠ, ಯಶವಂತ ಪಿ.ಕೆ, ದರ್ಶನ ಎಂ., ರಮೇಶ ಎಲ್, ರೇವಣಸಿದ್ದು ಕೆ.ಆರ್, ಚೇತನ ಕೆ, ಶಿವಕುಮಾರ್, ಸಾಗರ ಎಸ್, ದರ್ಶನ ಪಿ.ಎಚ್, ಅಭಿಷೇಕ.ಎನ್, ಶ್ರೀಧರ ಯು., ಸೇರಿದಂತೆ ಅನೇಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.