ರಸ್ತೆ ದುರಸ್ತಿಗಾಗಿ ರೈತರಿಂದ ಪ್ರತಿಭಟನೆ

| Published : Jun 08 2024, 12:37 AM IST

ರಸ್ತೆ ದುರಸ್ತಿಗಾಗಿ ರೈತರಿಂದ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಚಾಮರಾಜನಗರ ತಾಲೂಕಿನ ಮೂಡ್ಲುಪುರ ಬಳಿ ಚಾ.ನಗರ-ಗುಂಡ್ಲುಪೇಟೆ ಮುಖ್ಯ ರಸ್ತೆಯ ದುರಸ್ತಿಗಾಗಿ ಆಗ್ರಹಿಸಿ, ರಾಜ್ಯ ಕಬ್ಬು ಬೆಳೆಗಾರರ ಸಂಘದ ವತಿಯಿಂದ ಶುಕ್ರವಾರ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಗುಂಡಿ ಬಿದ್ದು ಮಳೆ ಬಂದರೆ ಕೆರೆಯಂತಾಗಿ ವಾಹನ ಸವಾರರಿಗೆ ಬಹಳ ತೊಂದರೆಯಾಗುತ್ತಿದ್ದ ತಾಲೂಕಿನ ಮೂಡ್ಲುಪುರ ಬಳಿಯ ಚಾಮರಾಜನಗರ-ಗುಂಡ್ಲುಪೇಟೆ ಮುಖ್ಯ ರಸ್ತೆಯ ದುರಸ್ತಿಗಾಗಿ ಆಗ್ರಹಿಸಿ, ರಾಜ್ಯ ಕಬ್ಬುಬೆಳೆಗಾರರ ಸಂಘದ ವತಿಯಿಂದ ಶುಕ್ರವಾರ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಲಾಯಿತು.ತಾಲೂಕಿನ ಮೂಡ್ಲುಪುರದ ಚಾಮರಾಜನಗರ-ಗುಂಡ್ಲುಪೇಟೆ ಮುಖ್ಯ ರಸ್ತೆಯ ಬಳಿ ಜಮಾಯಿಸಿದ ಪ್ರತಿಭಟನಾಕಾರರು ರಾಜ್ಯ ಸರ್ಕಾರ, ಜಿಲ್ಲಾಡಳಿತ ಮತ್ತು ಪಿಡಬ್ಲೂಡಿ ಇಲಾಖೆ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗುತ್ತಾ ರಸ್ತೆ ತಡೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯಾಧ್ಯಕ್ಷ ಹಳ್ಳಿಕರೆಹುಂಡಿ ಭಾಗ್ಯರಾಜ್, ಈ ರಸ್ತೆ ಹದಗೆಟ್ಡು ಮೂರು ವರ್ಷವಾಗಿದೆ, ರಸ್ತೆಯ ಉದ್ದಕ್ಕೂ ಭಾರಿ ಗಾತ್ರದ ಹಳ್ಳ ಬಿದ್ದಿದ್ದು, ಮಳೆ ಬಂದರೆ ಕೆರೆಯಂತಾಗುತ್ತದೆ, ವಾಹನ ಸವಾರರು ವಾಹನ ಚಲಾಯಿಸುವುದೇ ಕಷ್ಟವಾಗಿದೆ ಎಷ್ಟೋ ಜನರು ಅದರಲ್ಲೂ ಹೆಚ್ಚು ದ್ವಿಚಕ್ರ ವಾಹನ ಸವಾರರು ಬಿದ್ದು ಕೈ ಕಾಲು, ತಲೆಗೆ ಪೆಟ್ಡು ಮಾಡಿಕೊಂಡಿದ್ದಾರೆ ಎಂದರು.

ಈ ಬಗ್ಗೆ ಅನೇಕ ಬಾರಿ ಸಂಬಂಧಪಟ್ಟವರಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಜನಪ್ರತಿನಿಧಿಗಳು, ಅಧಿಕಾರಿಗಳ ನಿರ್ಲಕ್ಷ್ಯದೋರಣೆಯಿಂದಾಗಿ ಜನರು ತೊಂದರೆ ಅನುಭವಿಸುವಂತಾಗಿದೆ. ರಾಜ್ಯ ಸರ್ಕಾರ ರಾಜ್ಯದ ರಸ್ತೆಗಳಲ್ಲಿ ಯಾವುದೇ ಗುಂಡಿ ಬೀಳದಂತೆ ನೋಡಿಕೊಳ್ಳಬೇಕು ಎಂದು ಆದೇಶಿಸಿದೆ. ಇಲ್ಲಿ ನೋಡಿದರೆ ಮೂರು ವರ್ಷದಿಂದ ರಸ್ತೆ ಹಳ್ಳಕೊಳ್ಳ ಗಳಿಂದ ಕೂಡಿದೆ. ರಾತ್ರಿ ಸಮಯಲ್ಲಿ ಹಳ್ಳ ಯಾವುದು, ರಸ್ತೆ ಯಾವುದು ಎಂಬುದು ತಿಳಿಯುವುದೇ ಇಲ್ಲ ಎಂದರು. ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳು ಬರುತ್ತಾರೆ ಎಂದರೆ ರಾತ್ರೋರಾತ್ರಿ ರಸ್ತೆಗಳನ್ನು ದುರಸ್ತಿ ಪಡಿಸುವ ಕಾರ್ಯಕ್ಕೆ ಮುಂದಾಗುವ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಮೂರು ವರ್ಷದಿಂದ ರಸ್ತೆಯು ಕಣ್ಣಿಗೆ ಬಿದ್ದಿಲ್ಲವೇ ಎಂದರು. ತಕ್ಷಣ ಸಂಬಂಧಪಟ್ಟವರು ಬರಬೇಕು ಇಂದಿನಿಂದಲೇ ಈ ರಸ್ತೆಯ ಹಳ್ಳಕೊಳ್ಳ ಮುಚ್ಚುವ ಕಾಮಗಾರಿ ಪ್ರಾರಂಭವಾಗಬೇಕು ಅಲ್ಲಿಯವರೆಗೂ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತೇವೆ ಎಂದು ರಸ್ತೆಯ ಮಧ್ಯೆಯೇ ಪ್ರತಿಭಟನಾಕಾರರು ನಿಂತರು.

ಗುಂಡಿ ಮುಚ್ಚಲು ಕ್ರಮ: ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪಿಡಬ್ಲ್ಯೂಡಿ ಎಇಇ ರಮೇಶ್ ಅವರನ್ನು ಪ್ರತಿಭಟಕಾರರು ತರಾಟೆಗೆ ತೆಗೆದುಕೊಂಡರು. ರಸ್ತೆ ಗುಂಡಿ ಮುಚ್ಚಿ ಜನರಿಗೆ ಅನುಕೂಲ ಮಾಡಲು ಯಾವುದೇ ನೀತಿ ಸಂಹಿತೆ ಅಡ್ಡಿ ಬರುವುದಿಲ್ಲ, ನಿಮ್ಮ ನಿಲ್ಷಕ್ಷ್ಯತನದಿಂದ ಜನರು ತೊಂದರೆ ಅನುಭವಿಸುವಂತಾಗಿದೆ. ನಮಗೆ ನಿಮ್ಮ ಯಾವುದೇ ಕಾರಣ ಬೇಡ ತಕ್ಷಣ ದುರಸ್ತಿಗೆ ಕ್ರಮ ತೆಗೆದಕೊಳ್ಳಿ ಇಲ್ಲವಾದಲ್ಲಿ ನಮ್ಮ ಅನಿರ್ದಿಷ್ಟಾವಧಿ ಧರಣಿ ಮುಂದುವರಿಯುತ್ತದೆ ಎಂದು ಎಚ್ಚರಿಸಿದರು.

ಎಇಇ ರಮೇಶ್, ಈಗಾಗಲೇ ಈ ರಸ್ತೆ ದುರಸ್ಥಿಗೆ ಕ್ರಿಯಾಯೋಜನೆ ತಯಾರಾಗಿದೆ. ತಕ್ಷಣ ಕಾಮಗಾರಿ ಪ್ರಾರಂಭವಾಗುತ್ತದೆ, ಈಗ ತಕ್ಷಣಕ್ಕೆ ಗುಂಡಿ ಮುಚ್ಚುವ ಕಾರ್ಯಕ್ಕೆ ಮುಂದಾಗುತ್ತೇವೆ ಎಂದು ಭರವಸೆ ನೀಡಿದ ನಂತರ ಪ್ರತಿಭಟನೆಯನ್ನು ಕೈಬಿಡಲಾಯಿತು. ಜಿಲ್ಲಾಧ್ಯಕ್ಷ ಹಾಲಿನ ನಾಗರಾಜ್, ರಾಜ್ಯ ಉಪಾಧ್ಯಕ್ಷ ಕೆರೆಹುಂಡಿ ರಾಜಣ್ಣ, ಮೈಸೂರು ಜಿಲ್ಲಾಧ್ಯಕ್ಷ ಹಾಡ್ಯ ರವಿ, ಚಾಮರಾಜನಗರ ತಾಲೂಕು ಅಧ್ಯಕ್ಷ ಅರಳಿ ಕಟ್ಟೆ, ಕುಮಾರ್ ಪ್ರಭುಸ್ವಾಮಿ, ಊಡಿಗಾಲ ಗ್ರಾಮ ಘಟಕದ ಅಧ್ಯಕ್ಷ ಮಂಜುನಾಥ್ ಮಹದೇವಸ್ವಾಮಿ, ಚೇರ್ಮನ್ ಗುರುಮಲ್ಲಪ್ಪ, ಮೋಹನ್ ಚಂದ್ರು ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಲಿಯೂರು ಮಹೇಂದ್ರ, ಸತೀಶ , ಶ್ರೀಕಂಠ ಇತರರು ಭಾಗವಹಿಸಿದ್ದರು.