ಬೆಂಬಲ ಬೆಲೆ ಹೆಚ್ಚಿಸಲು ಆಗ್ರಹಿಸಿ ನರೇಗಲ್ಲದಲ್ಲಿ ರೈತರಿಂದ ಪ್ರತಿಭಟನೆ

| Published : Jan 28 2025, 12:47 AM IST

ಸಾರಾಂಶ

ರಾಜ್ಯ ಸರ್ಕಾರ ಉತ್ತರ ಕರ್ನಾಟಕದ ರೈತರನ್ನು ಕಡೆಗಣಿಸುತ್ತಿದೆ. ತೊಗರಿ ಬೆಳೆಗಾರರಿಗೆ ಸವಲತ್ತುಗಳನ್ನು ನೀಡಿದಂತೆ ಕಡಲೆ ಬೆಳೆಗೂ ಸೂಕ್ತ ಬೆಂಬಲ ಬೆಲೆ ನಿಗದಿ ಮಾಡಬೇಕು. ಪ್ರೋತ್ಸಾಹಧನ ನೀಡಬೇಕು ಎಂದು ಆಗ್ರಹಿಸಿ ನರೇಗಲ್ಲ ಪಟ್ಟಣದ ದುರ್ಗಾ ಸರ್ಕಲ್‌ನಲ್ಲಿ ರೈತರು ಪ್ರತಿಭಟನೆ ನಡೆಸಿದರು.

ನರೇಗಲ್ಲ: ಉತ್ತರ ಕರ್ನಾಟಕದ ವಾಣಿಜ್ಯ ಬೆಳೆಯಾದ ಕಡಲೆಗೆ ಸೂಕ್ತ ಬೆಂಬಲ ಬೆಲೆ ನಿಗದಿ ಮಾಡಬೇಕು ಎಂದು ಆಗ್ರಹಿಸಿ ಪಟ್ಟಣದ ದುರ್ಗಾ ಸರ್ಕಲ್‌ನಲ್ಲಿ ರೈತರು ಪ್ರತಿಭಟನೆ ನಡೆಸಿದರು.ರಾಜ್ಯ ಸರ್ಕಾರ ಉತ್ತರ ಕರ್ನಾಟಕದ ರೈತರನ್ನು ಕಡೆಗಣಿಸುತ್ತಿದೆ. ತೊಗರಿ ಬೆಳೆಗಾರರಿಗೆ ಸವಲತ್ತುಗಳನ್ನು ನೀಡಿದಂತೆ ಕಡಲೆ ಬೆಳೆಗೂ ಸೂಕ್ತ ಬೆಂಬಲ ಬೆಲೆ ನಿಗದಿ ಮಾಡಬೇಕು. ಪ್ರೋತ್ಸಾಹಧನ ನೀಡಬೇಕು. ಜತೆಗೆ ತೊಗರೆ ಬೆಳೆಗಾರರಿಗೆ ನೀಡಿದಂತೆ ಕಡಲೆ ಬೆಳೆಗಾರರಿಗೆ ಪ್ರತ್ಯೇಕ ಕುಂದುಕೊರತೆ ಆಲಿಸುವ ಮತ್ತು ಪರಿಹರಿಸುವ ಸಮಿತಿ ರಚಿಸುವ ಮೂಲಕ ಉತ್ತರ ಕರ್ನಾಟಕದ ಕಡಲೆ ಬೆಳೆಗಾರರಿಗೆ ಸರ್ಕಾರ ಸಹಕರಿಸಬೇಕಿದೆ. ಇಲ್ಲವಾದಲ್ಲಿ ಮುಂಬರುವ ದಿನಮಾನಗಳಲ್ಲಿ ಈ ಭಾಗದ ರೈತರು ಉಗ್ರ ಹೋರಾಟ ಮಾಡಲಿದ್ದಾರೆ ಎಂದು ಎಚ್ಚರಿಸಿದರು.

ರಾಜ್ಯ ಸರ್ಕಾರ ಎಂಎಸ್‌ಪಿಯಲ್ಲಿ ತೊಗರಿಗೆ ₹7,550 ಬೆಂಬಲ ಬೆಲೆ ಘೋಷಣೆ ಮಾಡಿದರೆ ಉತ್ತರ ಕರ್ನಾಟಕದ ವಾಣಿಜ್ಯ ಬೆಳೆಯಾದ ಕಡಲೆಗೆ ₹5650 ಮಾತ್ರ ಘೋಷಣೆ ಮಾಡಿದೆ. ತೊಗರಿ ಬೆಳೆಗಾರರಿಗೆ ವರ್ಷದಿಂದ ವರ್ಷಕ್ಕೆ ಬೆಂಬಲ ಬೆಲೆ ಹೆಚ್ಚಿಸುತ್ತಾ ಬಂದಿದೆ. ಆದರೆ ಕಡಲೆ ಬೆಳೆಗಾರರನ್ನು ಮಾತ್ರ ಕಡೆಗಣಿಸಿದೆ. ತೊಗರಿ ಬೆಳೆಗಾರರಿಗೆ ಬೆಂಬಲ ಬೆಲೆಯೊಂದಿಗೆ ₹450 ಪ್ರೋತ್ಸಾಹಧನ ಸೇರಿಸಿ ಒಟ್ಟು ₹8000 ಘೋಷಣೆ ಮಾಡಲಾಗಿದೆ. ಕಡಲೆ ಬೆಳೆಯುವ ಬೆಳೆಗಾರ ಮಾತ್ರ ಸರ್ಕಾರದ ಕಣ್ಣಿಗೆ ಕಾಣುತ್ತಿಲ್ಲ. ತಕ್ಷಣಕ್ಕೆ ರಾಜ್ಯ ಸರ್ಕಾರ ಈ ಭಾಗದ ವಾಣಿಜ್ಯ ಬೆಳೆಯಾದ ಕಡಲೆಗೂ ಸೂಕ್ತ ಸ್ಥಾನಮಾನ ನೀಡಬೇಕು ಎಂದು ಆಗ್ರಹಿಸಿದರು.

ಕೆಪಿಟಿಸಿಎಲ್ ಹೈ ಟೆನ್ಷನ್ ವಿದ್ಯುತ್ ಪ್ರಸರಣಕ್ಕೆ ಯೋಜನೆ ರೂಪಿಸುತ್ತಿದ್ದಾರೆ. ಅದಕ್ಕೆ ರೈತರ ವಿರೋಧವಿದೆ. ಈ ಯೋಜನೆಯನ್ನು ಕೈಬಿಡಬೇಕು. ಒಂದು ವೇಳೆ ವಿನಂತಿಗೆ ಸ್ಪಂದಿಸದೇ ಇದ್ದರೆ ಮುಂಬರುವ ದಿನಮಾನಗಳಲ್ಲಿ ಈ ಭಾಗದ ರೈತರ ನೇತೃತ್ವದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಮುಖಂಡ ಬಿ.ಕೆ. ಪೊಲೀಸ್‌ಪಾಟೀಲ ಮಾತನಾಡಿ, ರೈತರು ಬೆಳೆದ ಬೆಳೆಗೆ ಸರಿಯಾದ ಬೆಲೆ ದೊರಕುತ್ತಿಲ್ಲ. ರೈತನ ಪೈರು ಕೈಗೆ ಬಂದಾಗ ಮತ್ತೆ ಬೆಲೆ ಕಡಿಮೆ ಮಾಡುವ ವ್ಯವಸ್ಥೆ ಮಾಡುತ್ತಿದ್ದಾರೆ. ಅವರು ಬೆಂಬಲ ಬೆಲೆ ಇಳಿಸಿದ್ದೇ ಆದಲ್ಲಿ ಉಗ್ರ ಹೋರಾಟಕ್ಕೆ ಅಣಿಯಾಗಬೇಕಾಗುತ್ತದೆ. ಈ ಭಾಗದಲ್ಲಿ ಫ್ಯಾನ್ ಕಂಪನಿಗಳು ಪ್ರಾರಂಭವಾದಾಗಿನಿಂದ ಅದರ ಗಾಳಿಯ ವೇಗಕ್ಕೆ ಭೂಮಿ ತನ್ನ ತೇವಾಂಶವನ್ನು ಕಳೆದುಕೊಂಡು 4 ತಿಂಗಳಿಗೆ ಬರುವ ಬೆಳೆ ಎರಡೂವರೆ ತಿಂಗಳಿಗೆ ಬರುತ್ತಿದೆ. ರೈತ ಏನೆಲ್ಲ ಯೋಜನೆಗಳನ್ನು ಅಳವಡಿಸಿಕೊಂಡರೂ ಹೆಚ್ಚಿನ ಫಸಲನ್ನು ಬೆಳೆಯಲಾಗುತ್ತಿಲ್ಲ. ಆ ಕಾರಣಕ್ಕೆ ರೈತನಿಗೆ ಸಹಕಾರಿಯಾಗಲು ಆ ಫ್ಯಾನ್‌ಗಳನ್ನು ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿದರು.

ರೈತ ಚಂದ್ರು ಹೊನವಾಡ ಮಾತನಾಡಿ, ಕಡಲೆ ಬೆಳೆಗಾರರ ಕುರಿತು ಸರ್ಕಾರಕ್ಕೆ ಹಾಗೂ ಸಂಬಂಧಿಸಿದ ಸಚಿವರಿಗೆ ಕಿಂಚಿತ್ತು ಕಾಳಜಿ ಇಲ್ಲ. ಅದರಿಂದ ನೊಂದು ಹೋರಾಟಕ್ಕೆ ಅಣಿಯಾಗಿದ್ದೇವೆ. ಮುಂಬರುವ ದಿನಮಾನಗಳಲ್ಲಿ ₹1500 ಹೆಚ್ಚಿನ ಬೆಂಬಲ ಬೆಲೆ ಘೋಷಿಸಬೇಕು. ಗದಗದಲ್ಲಿ ಕಡಲೆ ಬೆಳೆಗಾರರ ಕುಂದುಕೊರತೆ ಆಲಿಸಲು ಒಂದು ಮಂಡಳಿ ರಚಿಸಬೇಕು ಎಂದರು.

ತಹಸೀಲ್ದಾರ್‌ ಕಿರಣಕುಮಾರ ಕುಲಕರ್ಣಿ ಹಾಗೂ ಉಪ ತಹಸೀಲ್ದಾರ್‌ ಯಶವಂತ ಚುಳಕಿ ಮೂಲಕ ಗದಗ ಜಿಲ್ಲಾಧಿಕಾರಿ, ಕೆಪಿಟಿಸಿಎಲ್ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಲಾಯಿತು.

ರೈತ ಮುಖಂಡರಾದ ಚನ್ನಬಸಪ್ಪ ಕುಷ್ಟಗಿ, ಕಲ್ಲಪ್ಪ ಗಂಗರಗೊಂಡ, ರವೀಂದ್ರ ಪಾಟೀಲ, ಸಿದ್ದಪ್ಪ ಇಟ್ಟಣ್ಣವರ, ಪರಸಪ್ಪ ಮಡಿವಾಳರ, ವೀರಬಸಪ್ಪ ಲಕ್ಕನಗೌಡ್ರ, ಶೇಖಪ್ಪ ಕಳಕೊಣ್ಣವರ, ಶಿವನಗೌಡ ಕಡದಳ್ಳಿ, ಬಸನಗೌಡ ಪಾಯಪ್ಪಗೌಡ್ರ, ಮಲ್ಲಿಕಾರ್ಜುನಪ್ಪ ಮಳ್ಳಿ, ವೀರಪ್ಪ ಕಂಬಾರ, ಬಸನಗೌಡ ಲಕ್ಕನಗೌಡ್ರ, ಬಸವರಾಜ ಕಳಕೊಣ್ಣವರ, ಬಸಪ್ಪ ಜೋಗಿ, ಶೇಕಪ್ಪ ಕಳಕೊಣ್ಣವರ, ಶಿವಪುತ್ರಪ್ಪ ಸಂಗನಾಳ, ಕಳಕಪ್ಪ ಹುಯಿಲಗೋಳ, ಅಶೋಕ ಗೆದಗೇರಿ ಶರಣಪ್ಪ ಹಕ್ಕಿ ಇದ್ದರು.