ಸಾರಾಂಶ
ಗದಗ: ಗದಗ-ಬೆಗೇರಿ ನಗರಸಭೆಯ ಮಾಲೀಕತ್ವದ ಸಾವಿರಾರು ಕೋಟಿ ಮೌಲ್ಯದ 54 ವಕಾರ ಸಾಲು (ಖಾಲಿ ಜಾಗೆ) ಆಸ್ತಿಯನ್ನು ಕಾನೂನು ಬಾಹಿರವಾಗಿ ಒಪ್ಪಂದ ಮಾಡಿಕೊಂಡು ಸುಳ್ಳು ಠರಾವು ಸೃಷ್ಠಿ ಮಾಡಿರುವ ನಗರಸಭೆಯ ಮಾಜಿ ಅಧ್ಯಕ್ಷರು, ಸದಸ್ಯರು ಸೇರಿದಂತೆ ಎಲ್ಲ ತಪ್ಪಿತಸ್ಥರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಜಯ ಕರ್ನಾಟಕ ಸಂಘಟನೆಯ ಪದಾಧಿಕಾರಿಗಳು ಶುಕ್ರವಾರ ಕಾನೂನು ಸಚಿವ ಎಚ್.ಕೆ. ಪಾಟೀಲ ಹಾಗೂ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಅವಳಿ ನಗರದ ಹೃದಯ ಭಾಗದಲ್ಲಿರುವ ನಗರಸಭೆ ಮಾಲಿಕತ್ವದ 54 ವಕಾರ ಸಾಲುಗಳನ್ನು ದೀರ್ಘ ಅವಧಿಯವರೆಗೆ ನಗರಸಭೆಯ ಅಧ್ಯಕ್ಷರು, ಸದಸ್ಯರು ಹಾಗೂ ಖಾಸಗಿ ವ್ಯಕ್ತಿಗಳು ಸುಳ್ಳು ಠರಾವು ಸೃಷ್ಠಿಸಿ ಒಪ್ಪಂದ ಮಾಡಿಕೊಂಡಿರುವ ಪ್ರಕರಣ ಸಹಜವಾಗಿ ದೊಡ್ಡ ಆಶ್ಚರ್ಯಕ್ಕೆ ಕಾರಣವಾಗಿದೆ. 2023ರ ಅಕ್ಟೋಬರ್ 25 ರಿಂದ 2024 ರ ಜು. 22ರ ನಡುವಿನ ಅವಧಿಯಲ್ಲಿ ನಗರಸಭೆಯ ಮಾಲೀಕತ್ವದ ಸಾವಿರಾರು ಕೋಟಿ ಮೌಲ್ಯದ ವಕಾರ ಲೀಜ್ ಆಧಾರದಲ್ಲಿ ನೀಡಿರುವುದು ದೊಡ್ಡ ಅಪರಾಧವಾಗಿದೆ.2024 ರ ಫೆ.9 ರಂದು ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ಠರಾವು ಪಾಸಾಗಿದೆ ಎಂದು ನಕಲಿ ಠರಾವು ಸೃಷ್ಟಿಸಿ 2024 ರ ಜು.22 ರಂದು ವಕಾರ ಸಾಲಿನ ಎಲ್ಲ ಅನುಭೋದಾರರಿಗೆ ಕಬ್ಜಾ ನೀಡಲಾಗಿದೆ ಎಂದು ನಕಲಿ ಪತ್ರ ಸೃಷ್ಟಿಸಿ ವಿವಿಧೆಡೆ ಅಧಿಕಾರಿಗಳ ನಕಲಿ ಸಹಿ ಮಾಡಿದ್ದು ನಗರಸಭೆಗೆ ಹಾಗೂ ಸರ್ಕಾರಕ್ಕೆ ಮೋಸ ಮಾಡಿದ್ದಾರೆ.
ಕಳೆದ 30 ತಿಂಗಳಲ್ಲಿ ಅವಳಿ ನಗರದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಆಗುತ್ತಿಲ್ಲ, ಕಾರಣ ಕೇಳಿದರೆ ನಗರಸಭೆಗೆ ಆದಾಯ ಕಡಿಮೆ ಇದೆ ಎಂದು ಹೇಳುತ್ತಾರೆ. ಬಹುಕೋಟಿ ಮೌಲ್ಯದ ವಕಾರಗಳಲ್ಲಿ ಹಲವಾರು ಮಳಿಗೆ, ಆಸ್ಪತ್ರೆ, ಮಾರುಕಟ್ಟೆಗಳನ್ನು ಸೃಷ್ಟಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಟ್ಟರೆ ಅದರಿಂದ ಲಕ್ಷಾಂತರ ಆದಾಯ ನಗರಸಭೆಗೆ ಹರಿದು ಬರುತ್ತದೆ. ಆ ರೀತಿಯ ಕೆಲಸ ಕಾರ್ಯ ಮಾಡುವುದನ್ನು ಬಿಟ್ಟು ಸರ್ಕಾರದ ಆಸ್ತಿಯನ್ನು ಬೇರೆಯವರಿಗೆ ಲೀಜ್ ನೀಡಿದ್ದು ಅಕ್ಷ್ಯಮ್ಯ ಅಪರಾಧವಾಗಿದೆ. ಈ ರೀತಿಯ ಸುಳ್ಳು ಠರಾವು ಸೃಷ್ಟಿಸಿದ್ದು ನೋಡಿದ್ದರೆ, ಇಷ್ಟು ದಿನಗಳ ಕಾಲ ಮಾಡಿರುವ ಎಲ್ಲ ಠರಾವು ಬಹಿರಂಗ ಮಾಡಬೇಕು ಮತ್ತೆ ಈಗಾಗಲೇ ಈ ಸುಳ್ಳು ಠರಾವನ್ನು ಕೋರ್ಟಿಗೆ ಸಲ್ಲಿಸಿದ್ದ ಕಾರಣ ನ್ಯಾಯಾಧೀಶರಿಂದ ಸಮಗ್ರ ತನಿಖೆ ಮಾಡಿಸಬೇಕು ಅವಳಿ ನಗರದ ಜನರಿಗೆ ನ್ಯಾಯ ಕೊಡಿಸಬೇಕು ಸರ್ಕಾರಕ್ಕೆ ಮೋಸವಾಗುವುದನ್ನ ತಡೆಗಟ್ಟಬೇಕೆಂದು ಆಗ್ರಹಿಸಿದ್ದಾರೆ.ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಕಾಂತ ಚವ್ಹಾಣ, ಭಾಷಾಸಾಬ್ ಮಲ್ಲಸಮುದ್ರ, ರಫೀಕ ತೋರಗಲ್ಲ, ರಮೇಶ ರಾಠೋಡ, ನಾಗರಾಜ ಕ್ಷತ್ರೀಯ, ಚಂದ್ರು ಖಾನಾಪೂರ, ಇಮಾಮ ಮಜ್ಜೂರ, ಮಂಜು ಕುರಬರ, ಹನಮಂತಗೌಡ ಪಾಟೀಲ, ದಾದು ಮುಂಡರಗಿ, ಸಾದಿಕ್ ನರಗುಂದ, ಮೇಘರಾಜ ಮೇಲ್ಮನಿ, ಹನಮಂತ ಹುಲಿಕಟ್ಟಿ, ರಫೀಕ ಟಪಾಲವಾಲೆ, ಕಾರ್ತಿಕ, ಕುಮಾರ ತಳವಾರ, ಸುನೀಲ ಪೂಜಾರ, ಅಕ್ಬರ, ಹಾಗೂ ಇತರರು ಉಪಸ್ಥಿತರಿದ್ದರು.