ಹಾನಗಲ್ಲ: ನೀರಾವರಿ ಯೋಜನೆಗಳ ನಿರ್ವಹಣೆಯ ವೈಫಲ್ಯ, ರೈತರ ಬೇಡಿಕೆಗಳನ್ನು ನಿರ್ಲಕ್ಷಿಸುತ್ತಿರುವ ಸರ್ಕಾರದ ಕ್ರಮಗಳನ್ನು ಖಂಡಿಸಿ ಜೆಡಿಎಸ್ ಪಕ್ಷದ ಹಾನಗಲ್ಲ ತಾಲೂಕು ಘಟಕ ತಾಲೂಕಿನ ಆಡೂರಿನಲ್ಲಿ ತಾಲೂಕು ಅಧ್ಯಕ್ಷ ರಾಮನಗೌಡ ಪಾಟೀಲ ನೇತೃತ್ವದಲ್ಲಿ ಧರಣಿ ಸತ್ಯಾಗ್ರಹ ನಡೆಸಿದೆ.
ಸೋಮವಾರ ಬೆಳಗ್ಗೆ ೧೦ ಗಂಟೆಯಿಂದಲೇ ಆಡೂರು ಬಸ್‌ನಿಲ್ದಾಣದ ಬಳಿಯ ಹಾನಗಲ್ಲ ಹಾವೇರಿ ರಸ್ತೆಯಲ್ಲಿ ಧರಣಿ ಆರಂಭಿಸಿದ ಜೆಡಿಎಸ್, ರೈತರ ಮನವಿಗಳಿಗೆ ವಿವಿಧ ಇಲಾಖೆಗಳು ಸ್ಪಂದಿಸುತ್ತಿಲ್ಲ. ಬಾಳಂಬೀಡ ಏತ ನೀರಾವರಿ ಸಮರ್ಪಕವಾಗಿ ನೀರೊದಗಿಸುವಲ್ಲಿ ವಿಫಲವಾಗಿದೆ. ಆಡೂರು ಕೆರೆಗೆ ಈ ವರೆಗೂ ಒಂದೂ ಹನಿ ನೀರು ಬಂದಿಲ್ಲ. ಅಧಿಕಾರಿಗಳು ಹಾರಿಕೆ ಉತ್ತರ ಹೇಳಿ ಪಾರಾಗುತ್ತಿದ್ದಾರೆ ಎಂದು ಜೆಡಿಎಸ್ ತಾಲೂಕು ಅಧ್ಯಕ್ಷ ಆರ್.ಬಿ.ಪಾಟೀಲ ದೂರಿದರಲ್ಲದೆ ರೈತರ ಪರವಾಗಿರಬೇಕಾದ ಅಧಿಕಾರಿಗಳು ರೈತರನ್ನೇ ನಿರ್ಲಕ್ಷಿಸುತ್ತಿರುವುದು ದುರಂತ. ಸರ್ಕಾರಿ ಕಚೇರಿಗಳಲ್ಲಿ ರೈತರ ಕೆಲಸಗಳಿಗೆ ರೈತರ ಕೈಕಟ್ಟಿ ನಿಲ್ಲುವ ಸ್ಥಿತಿ ಇದೆ. ಬೆಳೆವಿಮೆ ಬರುತ್ತಿಲ್ಲ. ಹನಿ ನೀರಾವರಿ ಬಿಲ್‌ಗಳು ವರ್ಷಾನುಗಟ್ಟಲೆ ಬಾಕಿ ಇವೆ, ಇದಕ್ಕೆಲ್ಲ ಯಾರು ಹೊಣೆ ಎಂದರು.ಹಾವೇರಿ ಜಿಲ್ಲೆಯನ್ನು ಬರಪೀಡಿತ ಎಂದು ಘೋಷಿಸಬೇಕು. ಹಾನಗಲ್ಲ ತಾಲೂಕು ಈಗಾಗಲೇ ಬೆಳೆ ಹಾನಿಗೆ ಒಳಗಾಗಿ ಆತಂಕದಲ್ಲಿದೆ. ಬಸಾಪುರ ಏತ ನೀರಾವರಿ ಯೋಜನೆಯ ಟಿಸಿಯಲ್ಲಿನ ಇಂಧನ ಹಾಗೂ ತಾಮ್ರದ ತಂತಿ ಕಳ್ಳತನವಾದ ಬಗ್ಗೆ ಕೇವಲ ದೂರು ಕೊಟ್ಟು ನೀರಾವರಿ ಇಲಾಖೆ ಸುಮ್ಮನಾಗಿದೆ. ಆ ಬಗ್ಗೆ ಕಟ್ಟುನಿಟ್ಟಿನ ಕ್ರಮವಿಲ್ಲ. ಆಗಲೇ ತಿಂಗಳುಗಟ್ಟಲೇ ಸಮಯ ಕಳೆದಿದ್ದರೂ ಕೂಡ ಅದನ್ನು ದುರಸ್ತಿಗೊಳಿಸಿ ಬಸಾಪುರ ಏತ ನೀರಾವರಿ ಆರಂಭಿಸುವಲ್ಲಿ ಇಲಾಖೆ ನಿರ್ಲಕ್ಷ ತೋರಿದೆ ಎಂದು ಆಪಾದಿಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಭುವನೇಶ್ವರ ಶಿಡ್ಲಾಪೂರ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿ, ವರದಾ ನದಿ ಹರಿಯುತ್ತಿದ್ದು ಒಂದು ತಿಂಗಳಾಗಿದೆ. ಆದರೆ ಪೈಪ್ ಒಡೆಯುತ್ತಿವೆ ಎಂದು ಹೇಳಿ ಹಲವು ಕೆರೆ ತುಂಬಿಸುವಲ್ಲಿ ನೀರಾವರಿ ಇಲಾಖೆಗಳು ವಿಫಲವಾಗಿವೆ. ಇದು ಇಲಾಖೆಗಳ ದಿವ್ಯ ನಿರ್ಲಕ್ಷ ಎಂದು ತಿಳಿಸಿದ್ದರೂ ಕೂಡ ಜನಪ್ರತಿನಿಧಿಗಳು ಈ ಬಗ್ಗೆ ಅಧಿಕಾರಿಗಳ ಮೇಲೆ ಕ್ರಮ ಜರುಗಿಸುತ್ತಿಲ್ಲ. ಇದು ರೈತರನ್ನು ಒಕ್ಕಲೆಬ್ಬಿಸುವ ತಂತ್ರ ಎಂದೆನಿಸುತ್ತಿದೆ. ಹೆಸ್ಕಾಂ ಇಲಾಖೆಯಂತೂ ಇದೆಯೋ ಇಲ್ಲವೋ ಎಂಬ ಸ್ಥಿತಿ ಇದೆ. ಟಿಸಿ ಸುಟ್ಟರೆ ರೈತರು ಕಣ್ಣೀರು ಹಾಕುವವರೆಗೂ ಟಿಸಿ ಸಿಗಲಾರದ ಸ್ಥಿತಿ ಇದೆ ಎಂದು ಆಪಾದಿಸಿದರು.ಬಿಜೆಪಿ ಮುಖಂಡ ಸಿದ್ದಲಿಂಗಪ್ಪ ಶಂಕ್ರಿಕೊಪ್ಪ ಮಾತನಾಡಿ, ಅಧಿಕಾರಿಗಳಿಗೆ ಜನಪ್ರತಿನಿಧಿಗಳ ಭಯವಿಲ್ಲ. ರೈತರ ಸಮಸ್ಯೆಗಳಿಗೆ ಸ್ಪಂದಿಸುವ ಮನಸ್ಸಿಲ್ಲ. ರೈತರು ಬೆಳೆದರೆ ಮಾತ್ರ ಈ ತಾಲೂಕು ಸಮೃದ್ಧಿಯಿಂದ ಇರಬಲ್ಲದು. ಇಲ್ಲಿ ಕಾರ್ಖಾನೆಗಳಿಲ್ಲ. ಯಾವುದೇ ಉದ್ಯಮಗಳೂ ಇಲ್ಲ. ರೈತರನ್ನೇ ಅವಲಂಬಿಸಿದ ಹಾನಗಲ್ಲ ತಾಲೂಕಿನಲ್ಲಿ ರೈತರಿಗಾಗಿ ಕೆಲಸ ಮಾಡುವ ಅಧಿಕಾರಿಗಳಿಗೆ ಕಾಳಜಿ ಇಲ್ಲ. ಇದನ್ನು ನೋಡಿ ಕೈ ಕಟ್ಟಿ ಕುಳಿತುಕೊಳ್ಳುವುದಿಲ್ಲ. ಶೀಘ್ರ ಇದೆಲ್ಲ ಬದಲಾಗದಿದ್ದರೆ ದೊಡ್ಡ ಮಟ್ಟದ ಹೋರಾಟಕ್ಕೆ ನಾವು ಬದ್ಧ ಎಂದರು.
ಪ್ರತಿಭಟನೆಯಲ್ಲಿ ಮೂಕಪ್ಪ ಪಡೆಪ್ಪನವರ, ಮುತ್ತಪ್ಪ ಪವಾಡಿ, ಬಸವರಾಜ ಮಲ್ಲಾಡದ, ಶೇಖರಯ್ಯ ಹಿರೇಮಠ, ಎಸ್.ವಿ. ಸಂಗೂರಮಠ, ಚಂದ್ರು ಗೌರಕ್ಕನವರ, ಸೋಮನಗೌಡ ಗೋರೆಗೌಡ್ರ, ಫಯಾಜ ಮಣೆಗಾರ, ಮಂಜುನಾಥ ಕುಂಚಿಗೇರಿ, ಯಲ್ಲಪ್ಪ ಮನಗೌಡ್ರ, ಚಂದ್ರಣ್ಣ ನಿಕ್ಕಮ್, ಫಕ್ಕೀರಗೌಡ ಪಾಟೀಲ, ಜಗದೀಶ ಎಲಿಗಾರ, ಈರಪ್ಪ ಕೋಡಿಹಳ್ಳಿ, ಚಂದ್ರು ಕುರಿಮನಿ, ಮೋಹನ್ ಕೋಟಿ, ಬಸವರಾಜ ಕೋಟಿ ಸೇರಿದಂತೆ ನೂರಾರು ರೈತರು ಧರಣಿಯಲ್ಲಿ ಪಾಲ್ಗೊಂಡಿದ್ದರು.
ರಸ್ತೆ ತಡೆ ನಡೆಯಲಿಲ್ಲ: ರೈತರು ರಸ್ತೆ ತಡೆ ಮಾಡಲು ಯತ್ನಿಸಿದಾಗ ಪೊಲೀಸ್ ಅಧಿಕಾರಿಗಳು ರಸ್ತೆ ತಡೆಗೆ ಅವಕಾಶ ನೀಡಲಿಲ್ಲ. ರೈತರು ಪೊಲೀಸ್ ನಡುವೆ ವಾಗ್ವಾದ ನಡೆದರೂ ಕೂಡ ಪೊಲೀಸ್ ಅಧಿಕಾರಿಗಳು ರಸ್ತೆ ತಡೆಗೆ ಅವಕಾಶ ನೀಡದೆ, ಸಂಚಾರಕ್ಕೆ ತೊಂದರೆಯಾಗದಂತೆ ಶಾಂತವಾಗಿ ಪ್ರತಿಭಟನೆ ನಡೆಸುವಂತೆ ತಿಳಿಸಿದರು. ಪ್ರತಿಭಟನಾ ಸ್ಥಳಕ್ಕೆ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಸಿ.ಟಿ. ಸುರೇಶ, ತೋಟಗಾರಿಕೆ ಸಹಾಯಕ ನಿರ್ದೇಶಕ ಜಿ.ಆರ್.ವೀರಭದ್ರಸ್ವಾಮಿ, ಬೃಹತ್ ನೀರಾವರಿ ಇಲಾಖೆಯ ಕಾರ್ಯಪಾಲಕ ಅಧಿಕಾರಿ ಎನ್.ಗಿರೀಶ ಪ್ರತಿಭಟನಾ ಸ್ಥಳದಲ್ಲಿದ್ದು ರೈತರ ಪ್ರಶ್ನೆಗಳಿಗೆ ಉತ್ತರಿಸಿದರು.