ಸಾರಾಂಶ
ದೇಶದಲ್ಲಿ ೨೨ ಅಂಗೀಕೃತ ಭಾಷೆಗಳಲ್ಲಿ ಒಂದು ಭಾಷೆಯಾಗಿರುವ ಹಿಂದಿಯನ್ನು ರಾಷ್ಟ್ರಾದ್ಯಂತ ಹೇರಿಕೆ ಮಾಡುವುದಕ್ಕೆಂದೇ ಹಿಂದಿ ದಿವಸ್ ಆಚರಣೆ ಮಾಡಲಾಗುತ್ತಿದೆ. ಎಲ್ಲಾ ಜನರ ತೆರಿಗೆ ಹಣವನ್ನು ಒಂದು ಭಾಷೆ ಬೆಳೆವಣಿಗೆಗೆ ಬಳಸಿ ಅನ್ಯಾಯ ಮಾಡುತ್ತಿದ್ದಾರೆ. ಎಲ್ಲಾ ಭಾಷೆಗಳ ಬೆಳವಣಿಗೆ ಕೇಂದ್ರದ ಉದ್ದೇಶವಾಗಿಲ್ಲ.
ಕನ್ನಡಪ್ರಭ ವಾರ್ತೆ ಮಂಡ್ಯ
ಭಾಷಾ ವೈವಿಧ್ಯತೆಯನ್ನು ಹೊಂದಿರುವ ಭಾರತದೊಳಗಿರುವ ಪ್ರಾದೇಶಿಕ ಭಾಷೆಗಳನ್ನು ನಾಶ ಮಾಡುವ ಉದ್ದೇಶದಿಂದ ಹಿಂದಿಯನ್ನು ಬಲವಂತವಾಗಿ ಹೇರಲಾಗುತ್ತಿದೆ ಎಂದು ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ಜಿಲ್ಲಾ ಸಮಿತಿ ಪದಾಧಿಕಾರಿಗಳು ಶನಿವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.ಇಲ್ಲಿನ ಪ್ರಧಾನ ಅಂಚೆಕಚೇರಿ ಬಳಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಸಮಿತಿ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು. ಹಿಂದಿ ದಿವಸ್ ಆಚರಣೆಗೆ ವಿರುದ್ಧವಾಗಿ ’ಕರಾಳ ದಿನ’ ಆಚರಿಸಿದರು.
ಕರವೇ ತಾಲೂಕು ಅಧ್ಯಕ್ಷ ಡಿ.ಅಶೋಕ್ ಮಾತನಾಡಿ, ದೇಶದಲ್ಲಿ ೨೨ ಅಂಗೀಕೃತ ಭಾಷೆಗಳಲ್ಲಿ ಒಂದು ಭಾಷೆಯಾಗಿರುವ ಹಿಂದಿಯನ್ನು ರಾಷ್ಟ್ರಾದ್ಯಂತ ಹೇರಿಕೆ ಮಾಡುವುದಕ್ಕೆಂದೇ ಹಿಂದಿ ದಿವಸ್ ಆಚರಣೆ ಮಾಡಲಾಗುತ್ತಿದೆ. ಎಲ್ಲಾ ಜನರ ತೆರಿಗೆ ಹಣವನ್ನು ಒಂದು ಭಾಷೆ ಬೆಳೆವಣಿಗೆಗೆ ಬಳಸಿ ಅನ್ಯಾಯ ಮಾಡುತ್ತಿದ್ದಾರೆ. ಎಲ್ಲಾ ಭಾಷೆಗಳ ಬೆಳವಣಿಗೆ ಕೇಂದ್ರದ ಉದ್ದೇಶವಾಗಿಲ್ಲ ಎಂದು ಟೀಕಿಸಿದರು.ಕರವೇ ಮಾಜಿ ಅಧ್ಯಕ್ಷ ಕೆ.ಟಿ.ಶಂಕರೇಗೌಡ, ಉತ್ತರ ಭಾರತದ ಕೆಲವೇ ರಾಜ್ಯಗಳಲ್ಲಿ ಮಾತನಾಡುವ ಹಿಂದಿ ಭಾಷೆಯನ್ನು ಬಲವಂತವಾಗಿ ನಮ್ಮ ಮೇಲೆ ಹೇರಿಕೆ ಮಾಡುವ ಮೂಲಕ ದಬ್ಬಾಳಿಕೆ ಮಾಡುವುದನ್ನು ನಾವೇಕೆ ಸಹಿಸಿಕೊಳ್ಳಬೇಕು? ಕೇವಲ ೬೫೦ ವರ್ಷಗಳ ಹಿಂದೆ ಹುಟ್ಟಿಕೊಂಡ ಹಿಂದಿ ಭಾಷೆಯನ್ನು ಇಷ್ಟೊಂದು ವೈಭವೀಕರಿಸುವುದು ಏಕೆ? ೨೦೦೦ ವರ್ಷಗಳ ಇತಿಹಾಸವಿರುವ ಕನ್ನಡವನ್ನು ಯಾಕೆ ವೈಭವೀಕರಿಸಬಾರದು ಎಂದು ಕಿಡಿಕಾರಿದರು.
ಪ್ರತಿಭಟನೆಯಲ್ಲಿ ಮಹಿಳಾ ಘಟಕ ಮಾಜಿ ಅಧ್ಯಕ್ಷೆ ಭಾರತಿ, ಪುಟ್ಟಮಲ್ಲಯ್ಯ, ಎಂ.ಪಿ.ಸ್ವಾಮಿ, ದೇವರಾಜು, ಕೇಶವ್, ರಾಮಚಂದ್ರೇಗೌಡ, ಆನಂದ್, ಕಾಂತರಾಜ್, ಸುನೀಲ್, ಚಂದ್ರ, ನಟರಾಜ್, ವರದೇಗೌಡ, ಅನಿಲ್, ಗೋಪಿಗೌಡ, ಶಿವಣ್ಣ ಮತ್ತಿತರರಿದ್ದರು.