ಸಾರಾಂಶ
ರಾಮನಗರ: ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೆಎಸ್ಆರ್‌ಟಿಸಿ ನೌಕರರು ನಗರದ ಕೆಎಸ್ ಆರ್‌ಟಿಸಿ ಬಸ್ ನಿಲ್ದಾಣದ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ರಾಮನಗರ ವಿಭಾಗದ ಆಶ್ರಯದಲ್ಲಿ ನಿಗಮದ ವಿಭಾಗಿಯ ಕಚೇರಿಯ ಎದುರು ಪ್ರತಿಭಟನೆ ನಡೆಸಿ ನೌಕರರು ಮನವಿ ಸಲ್ಲಿಸಿದರು.2020 ರಿಂದ 2023ರ ವರೆಗಿನ ಶೇ.15ರಷ್ಟು ವೇತನ ಹೆಚ್ಚಳದ ಬಾಕಿ ಹಣ ಸಾರಿಗೆ ನೌಕರರಿಗೆ ಪಾವತಿ ಮಾಡಬೇಕಾಗಿದೆ. ಸರ್ಕಾರ ಹಾಗೂ ಸಾರಿಗೆ ನಿಗಮಗಳ ಆಡಳಿತ ವರ್ಗಕ್ಕೆ ಮನವಿ ಮಾಡಿದರು ಇದುವರೆಗೆ ಕ್ರಮ ಕೈಗೊಂಡಿಲ್ಲ. 2024 ಜನವರಿ ಆರಂಭದ ದಿನದಿಂದ ಮುಂದಿನ ನಾಲ್ಕು ವರ್ಷಗಳ ಅವಧಿಗೆ ಹೊಸ ವೇತನ ಪರಿಷ್ಕರಣೆ ವಿಳಂಬ ಮಾಡದೆ ಮಾಡಬೇಕಾಗಿದೆ.
ಸಾರಿಗೆ ನೌಕರರನ್ನು ದಿಕ್ಕು ತಪ್ಪಿಸಿ ಇನ್ನಿಲ್ಲದ ಸಂಕಷ್ಟಗಳಿಗೆ ಗುರಿ ಮಾಡಿದ ಶಕ್ತಿಗಳು ಮತ್ತೆ ತಮ್ಮ ಹಳೆಯ ಚಾಳಿಯನ್ನು ಆರಂಭ ಮಾಡಿದ್ದು ಇದರ ಬಗ್ಗೆ ಕ್ರಮ ವಹಿಸಬೇಕಾಗಿದೆ. ಅದೇ ರೀತಿ ಕೇಂದ್ರ ಸರ್ಕಾರ ಹಿಟ್ ಅಂಡ್ ರನ್ ಮೊಕದ್ದಮ್ಮೆ ಯಲ್ಲಿ ಚಾಲಕರಿಗೆ ಕಠಿಣ ಶಿಕ್ಷೆ ವಿಧಿಸುವ ಕಾನೂನು ರೂಪಿಸಿರುವುದು ಚಾಲಕ ವರ್ಗಕ್ಕೆ ಮಾರಕವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.2020 ಜನವರಿಯಿಂದ ಬಾಕಿ ಇರುವ 38 ತಿಂಗಳ ವೇತನ ಪಾವತಿಸಬೇಕು. 2020ರಿಂದ 2023ರ ವರೆಗೆ ನಿವೃತ್ತರಾದ ನೌಕರರಿಗೆ ವೇತನ ಪರಿಷ್ಕರಣೆ ಅಳವಡಿಸಿ ನಿವೃತ್ತಿ ಸೌಲಭ್ಯಗಳ ಬಾಕಿ ಹಣ ನೀಡಬೇಕು. ನೌಕರರ ವೇತನ ಪರಿಷ್ಕರಣೆಗೆ ಮುಂದಾಗಬೇಕು. ಶಕ್ತಿ ಯೋಜನೆಯ ಸಂಪೂರ್ಣ ಅನುದಾನ ಕೂಡಲೇ ಸಾರಿಗೆ ನಿಗಮಗಳಿಗೆ ಪಾವತಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಪ್ರಧಾನ ಕಾರ್ಯದರ್ಶಿ ಭರಮಪ್ಪ ಜಗ್ಗಲ್, ಮುಖಂಡರಾದ ಶ್ರೀಧರ್, ಜಗದೀಶ್, ದೇವರಾಜು, ನಿರಂಜನ್, ವಾಲಿಕಾರ್, ಮಂಜುನಾಥ್, ಬೋರಮ್ಮನವರ್ ಮತ್ತಿತರರು ಭಾಗವಹಿಸಿದ್ದರು.22ಕೆಆರ್ ಎಂಎನ್ 6.ಜೆಪಿಜಿರಾಮನಗರ ಸಾರಿಗೆ ನಿಗಮದ ವಿಭಾಗಿಯ ಕಚೇರಿಯ ಎದುರು ನೌಕರರು ಪ್ರತಿಭಟನೆ ನಡೆಸಿದರು.