ಸಾರಾಂಶ
ಕೆಆರ್‌ಎಸ್ ಹಾಗೂ ನಾರ್ತ್ ಬ್ಯಾಂಕ್, ಕಟ್ಟೇರಿ ಸೇರಿದಂತೆ ಇತರೆ ಗ್ರಾಮಗಳಿತೆ ತೆರಳುವ ಸ್ಥಳೀಯರಿಂದ ಟೋಲ್ ಸಂಗ್ರಹಿಸಲಾಗುತ್ತಿದೆ. ಇದರಿಂದ ನಿತ್ಯ ಸಂಚರಿಸುವ ಸ್ಥಳಿಯರಿಗೆ ತೊಂದರೆಯಾಗುತ್ತಿದೆ. ಹಾಗಾಗಿ ಟೋಲ್ ಸಂಗ್ರಹಿಸುವ ಟೋಲ್ ಬೂತನ್ನು ಸ್ಥಳಾಂತರಿಸಬೇಕು.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ವಿಶ್ವವಿಖ್ಯಾತ ಕೆಆರ್‌ಎಸ್ ಅಣೆಕಟ್ಟೆ ಬಳಿ ಸ್ಥಳೀಯರಿಂದ ಟೋಲ್ ಸಂಗ್ರಹ ಹಾಗೂ ಪ್ರವೇಶ ದರ ಹೆಚ್ಚಳ ಖಂಡಿಸಿ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣಯ್ಯ ನೇತೃತ್ವದಲ್ಲಿ ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.ಅಣೆಕಟ್ಟೆ ಪ್ರವೇಶದ್ವಾರ ಮುಂಭಾಗ ಶಾಸಕ ದರ್ಶನ್ ಪುಟ್ಟಣಯ್ಯ, ರೈತ ಮುಖಂಡರು ಹಾಗೂ ಸ್ಥಳೀಯರೊಂದಿಗೆ ಪ್ರತಿಭಟನಾ ಧರಣಿ ನಡೆಸಿ ಪ್ರವಾಸಿಗರಿಗೆ ಮೂಲ ಸೌಕರ್ಯ, ಸಿಸಿ ಟಿವಿ, ಭದ್ರತಾ ಸಿಬ್ಬಂದಿಯನ್ನು ಒದಗಿಸುವವರೆವಿಗೂ ಹಳೇ ದರವನ್ನು ಪಡೆಯುವಂತೆ ಒತ್ತಾಯಿಸಿದರು.
ಕೆಆರ್‌ಎಸ್ ಹಾಗೂ ನಾರ್ತ್ ಬ್ಯಾಂಕ್, ಕಟ್ಟೇರಿ ಸೇರಿದಂತೆ ಇತರೆ ಗ್ರಾಮಗಳಿತೆ ತೆರಳುವ ಸ್ಥಳೀಯರಿಂದ ಟೋಲ್ ಸಂಗ್ರಹಿಸಲಾಗುತ್ತಿದೆ. ಇದರಿಂದ ನಿತ್ಯ ಸಂಚರಿಸುವ ಸ್ಥಳಿಯರಿಗೆ ತೊಂದರೆಯಾಗುತ್ತಿದೆ. ಹಾಗಾಗಿ ಟೋಲ್ ಸಂಗ್ರಹಿಸುವ ಟೋಲ್ ಬೂತನ್ನು ಸ್ಥಳಾಂತರಿಸಬೇಕು. ಕೇವಲ ಅಣೆಕಟ್ಟೆ ಹಾಗೂ ಬೃಂದಾವನ ವೀಕ್ಷಣೆಗೆ ಆಗಮಿಸುವ ಪ್ರವಾಸಿಗರಿಂದ ಮಾತ್ರ ಟೋಲ್ ಸಂಗ್ರಹಿ ಸ್ಥಳಿಯರಿಂದ ಯಾವುದೇ ಟೋಲ್ ಪಡೆಯದಂತೆ ಆಗ್ರಹಿಸಿದರು.ಅಲ್ಲದೇ, ಬೃಂದಾವನ, ವಿದ್ಯುತ್ ಅಲಂಕಾರ ಹಾಗೂ ಕಾರಂಜಿ ವೀಕ್ಷಣೆಗೆ ದೇಶ, ವಿದೇಶಗಳಿಂದ ಆಗಮಿಸುವ ಪ್ರವಾಸಿಗರಿಗೆ ಕುಡಿಯುವ ನೀರು, ಶೌಚಾಲಯ, ಸಿಸಿ ಟಿವಿ ಕಲ್ಗಾವಳು, ಭದ್ರತಾ ಸಿಬ್ಬಂದಿ ಸೇರಿದಂತೆ ಯಾವುದೇ ಮೂಲ ಸೌಕರ್ಯಗಳನ್ನು ಒದಗಿಸದೆ ಏಕಾಏಕಿ ದರ ಹೇರಿಕೆ ಮಾಡಲಾಗಿದೆ. ಹಾಗಾಗಿ ಪ್ರವಾಸಿಗರಿಗೆ ಅಗತ್ಯ ಸೌಕರ್ಯ ನೀಡುವವರೆವಿಗೂ ಈ ಹಿಂದಿನ ದರವನ್ನೇ ಮುಂದುವರೆಸಬೇಕು ಹೇಳಿದರು.
ಈ ವೇಳೆ ರೈತ ಸಂಘದ ಜಿಲ್ಲಾಧ್ಯಕ್ಷ ಕೆಂಪೂಗೌಡ, ಕೆಆರ್‌ಎಸ್ ಗ್ರಾಪಂ ಸದಸ್ಯರಾದ ಮಂಜುನಾಥ್, ನಾಗೇಂದ್ರ ಸೇರಿದಂತೆ ಇತರರು ಜೊತೆಯಲ್ಲಿದ್ದರು.