ಹಾಲಿನ ದರ ಇಳಿಕೆ ಖಂಡಿಸಿ ಹಾಲು ಉತ್ಪಾದಕರಿಂದ ಪ್ರತಿಭಟನೆ

| Published : Sep 24 2024, 01:52 AM IST

ಹಾಲಿನ ದರ ಇಳಿಕೆ ಖಂಡಿಸಿ ಹಾಲು ಉತ್ಪಾದಕರಿಂದ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಹಾಲು ಉತ್ಪಾದಕರ ಹಿತ ಕಾಯುವ ಬದಲು ಮತ್ತಷ್ಟು ಸಮಸ್ಯೆಗೆ ದೂಡುವ ಕೆಲಸವನ್ನು ಒಕ್ಕೂಟ ಮಾಡುತ್ತಿದೆ.

ಬಳ್ಳಾರಿ: ಹಾಲಿನ ದರ ಇಳಿಕೆ ಖಂಡಿಸಿ ಇಲ್ಲಿನ ರಾಯಚೂರು, ಬಳ್ಳಾರಿ, ಕೊಪ್ಪಳ ಹಾಗೂ ವಿಜಯನಗರ ಹಾಲು ಉತ್ಪಾದಕರ ಒಕ್ಕೂಟ ಮುಂಭಾಗ ಹಾಲು ಉತ್ಪಾದಕರು ಸೋಮವಾರ ಪ್ರತಿಭಟನೆ ನಡೆಸಿದರು.

ಹಾಲು ಉತ್ಪಾದಕರ ಹಿತ ಕಾಯುವ ಬದಲು ಮತ್ತಷ್ಟು ಸಮಸ್ಯೆಗೆ ದೂಡುವ ಕೆಲಸವನ್ನು ಒಕ್ಕೂಟ ಮಾಡುತ್ತಿದೆ. ಪಶು ಆಹಾರದ ದರ ಏರಿಕೆಯಾಗಿದ್ದು, ಹಾಲು ಉತ್ಪಾದನೆಯೇ ದೊಡ್ಡ ಸವಾಲಾಗಿ ಪರಿಣಮಿಸಿದೆ. ಹಸುಗಳಿಗೆ ಮೇವು ಸಿಗದೆ ಒದ್ದಾಡುವಂತಾಗಿದೆ. ಸಮತೋಲಿತ ಪಶುಆಹಾರ ಬಳಿಕೆ ಅನಿವಾರ್ಯವಾಗಿದ್ದು ಉತ್ಪಾದಕರು ಸಂಕಷ್ಟ ಎದುರಿಸುತ್ತಿದ್ದಾರೆ. ಹೀಗಿರುವಾಗ ಒಕ್ಕೂಟವು ₹1.50 ಹಾಲು ದರ ಇಳಿಕೆ ಮಾಡಿರುವುದು ಎಷ್ಟು ಸರಿ? ಎಂದು ಪ್ರತಿಭಟನಾನಿರತ ಹಾಲು ಉತ್ಪಾದಕರು ಪ್ರಶ್ನಿಸಿದರು.

ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ ಹಾಲು ಉತ್ಪಾದಕರು ಹಾಗೂ ಸ್ಥಳೀಯ ವಿವಿಧ ಸಂಘಟನೆಗಳ ಮುಖಂಡರು ಸುಮಾರು ಎರಡು ತಾಸಿಗೂ ಹೆಚ್ಚು ಹೊತ್ತು ಒಕ್ಕೂಟದ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ, ಹಾಲು ದರ ಇಳಿಕೆಯ ಕ್ರಮದ ವಿರುದ್ಧ ಘೋಷಣೆಗಳನ್ನು ಕೂಗಿದರಲ್ಲದೆ, ಕೂಡಲೇ ಎಂದಿನಂತೆ ಹಾಲಿನ ದರ ನಿಗದಿಗೊಳಿಸಿ ಉತ್ಪಾದಕರ ನೆರವಿಗೆ ಬರಬೇಕು ಎಂದು ಆಗ್ರಹಿಸಿದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ ಅವರು ಹಾಲು ಉತ್ಪಾದಕರ ಜೊತೆ ಚರ್ಚಿಸಿದರಲ್ಲದೆ, ಹಾಲು ಉತ್ಪಾದಕರ ಹಿತ ಕಾಯುವುದು ನಮ್ಮ ಜವಾಬ್ದಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಮುಂದಿನ ತಿಂಗಳಿನಿಂದ ಹಾಲಿನ ದರವನ್ನು ₹1.50 ಹೆಚ್ಚಿಸಲಾಗುವುದು ಎಂದು ಭರವಸೆ ನೀಡಿದರು.

ವಿ.ಎಸ್. ಶಿವಶಂಕರ್, ಎಂ.ಸತ್ಯನಾರಾಯಣ, ಧನುಂಜಯ್, ಜಗನ್, ಎರಿಸ್ವಾಮಿ, ಚಂದ್ರಶೇಖರ್, ಜಿ.ಸತ್ಯನಾರಾಯಣ, ನಾಗಮಣಿ, ಸಂಗನಕಲ್ಲು ವಿಜಯಕುಮಾರ್, ಸತ್ಯಪ್ಪ, ತಿಮ್ಮಪ್ಪ ಜೋಳದರಾಶಿ, ಭರ್ಮಾರೆಡ್ಡಿ ಸೇರಿದಂತೆ ಜಿಲ್ಲೆಯ ಹಾಲು ಉತ್ಪಾದಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಹಾಲಿನ ದರ ಇಳಿಕೆ ಖಂಡಿಸಿ ಬಳ್ಳಾರಿಯ ರಾಬಕೊವಿ ಹಾಲು ಒಕ್ಕೂಟ ಮುಂಭಾಗ ಜರುಗಿದ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ ಅವರು ಹಾಲುದರ ಏರಿಕೆಯ ಭರವಸೆ ನೀಡಿದರು.