ಸಾರಾಂಶ
ಪ್ರತಿದಿನ ಪಟ್ಟಣದ ಅಂಚೆ ಇಲಾಖೆಯಿಂದ ಒಂದರಿಂದ ಎರಡು ಲಕ್ಷ ರು.ಗಳನ್ನು ಮಾತ್ರ ಪಿಂಚಣಿದಾರರಿಗೆ ವಿತರಣೆ ಮಾಡಲು ಕಳುಹಿಸುತ್ತಾರೆ, ಆದರೆ ಸಿಂಗಾಪುರ ಅಂಚೆ ವ್ಯಾಪಿಗೆ ೧೬ಕ್ಕೂ ಹೆಚ್ಚು ಹಳ್ಳಿಗಳು ಒಳಪಡುತ್ತದೆ. ಐದಾರು ಕಿ.ಮೀ. ದೂರದ ಈಡಿಗನಹೊಸೂರು, ಮಾರನಾಯಕನಹಳ್ಳಿ ಗುಂಜೇವು, ಅಡಿಕೆಕೆರೆಹೊಸೂರು, ಹಾಗೂ ಇತರೆ ಗ್ರಾಮದ ವೃದ್ಧರು ಪಿಂಚಣಿ ಪಡೆಯಲು ನಡೆದುಕೊಂಡು ಬರುವಷ್ಟರಲ್ಲಿ ಹಣ ಬಟವಾಡೆ ಮಾಡಿ ಆಗಿರುತ್ತದೆ. ಇದರಿಂದ ಇಳಿ ವಯಸ್ಸಿನಲ್ಲಿ ನಡೆದು ನಡೆದು ಸಾಕಾಗಿ ಹೋಗಿದೆ ಎಂದು ವೃದ್ಧರು ಬೇಸರದಿಂದ ನುಡಿದರು.
ಕನ್ನಡಪ್ರಭ ವಾರ್ತೆ ಹೊಳೆನರಸೀಪುರ ಪಟ್ಟಣದ ಅಂಚೆ ಕಚೇರಿ ಆವರಣದಲ್ಲಿ ತಾಲೂಕಿನ ಸಿಂಗಾಪುರ ಅಂಚೆ ವ್ಯಾಪ್ತಿಯ ೧೪ಕ್ಕೂ ಹೆಚ್ಚು ಗ್ರಾಮಗಳ ವೃದ್ಧರು, ಅಂಗವಿಕಲರು, ಪಿಂಚಣಿದಾರರು ಹಾಗೂ ಇತರರು ಪಿಂಚಣಿ ಹಣ ವಿತರಣೆಯಲ್ಲಿ ವಿಳಂಬ ನೀತಿ ಅನುಸರಿಸುತ್ತಿದ್ದು, ಹಣ ಪಡೆಯಲು ಹೋದರೆ ಹಣ ಇಲ್ಲವೆಂದು ವಾಪಸ್ ಕಳುಹಿಸುತ್ತಾರೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದರು.
ತಾಲೂಕಿನ ಸಿಂಗಾಪುರ ಅಂಚೆ ವ್ಯಾಪ್ತಿಗೆ ಸಿಂಗಾಪುರ, ಈಡಿಗನ ಹೊಸೂರು, ಗುಂಜೇವು, ಮಾರನಾಯಕನಹಳ್ಳಿ, ಸೋಮನಹಳ್ಳಿ, ಜಕ್ಕವಳ್ಳಿ, ಜಕ್ಕವಳ್ಳಿಕೊಪ್ಪಲು, ಅಡಿಕೆಕೆರೆ ಹೊಸೂರು, ಉಲಿವಾಲ, ಉಲಿವಾಲಕೊಪ್ಪಲು, ಒಳಂಬಿಗೆ, ಮೂಳೆಕಾಳೇನಹಳ್ಳಿ, ಹಂಗರಹೊಸೂರು ಲಕ್ಷ್ಮೀಪುರ, ಹಾಗೂ ಇತರೆ ಕುಗ್ರಾಮಗಳು ಒಳಪಡುತ್ತದೆ. ಪ್ರತಿದಿನ ಪಟ್ಟಣದ ಅಂಚೆ ಇಲಾಖೆಯಿಂದ ಒಂದರಿಂದ ಎರಡು ಲಕ್ಷ ರು.ಗಳನ್ನು ಮಾತ್ರ ಪಿಂಚಣಿದಾರರಿಗೆ ವಿತರಣೆ ಮಾಡಲು ಕಳುಹಿಸುತ್ತಾರೆ, ಆದರೆ ಸಿಂಗಾಪುರ ಅಂಚೆ ವ್ಯಾಪಿಗೆ ೧೬ಕ್ಕೂ ಹೆಚ್ಚು ಹಳ್ಳಿಗಳು ಒಳಪಡುತ್ತದೆ. ಐದಾರು ಕಿ.ಮೀ. ದೂರದ ಈಡಿಗನಹೊಸೂರು, ಮಾರನಾಯಕನಹಳ್ಳಿ ಗುಂಜೇವು, ಅಡಿಕೆಕೆರೆಹೊಸೂರು, ಹಾಗೂ ಇತರೆ ಗ್ರಾಮದ ವೃದ್ಧರು ಪಿಂಚಣಿ ಪಡೆಯಲು ನಡೆದುಕೊಂಡು ಬರುವಷ್ಟರಲ್ಲಿ ಹಣ ಬಟವಾಡೆ ಮಾಡಿ ಆಗಿರುತ್ತದೆ. ಇದರಿಂದ ಇಳಿ ವಯಸ್ಸಿನಲ್ಲಿ ನಡೆದು ನಡೆದು ಸಾಕಾಗಿ ಹೋಗಿದೆ ಎಂದು ವೃದ್ಧರು ಬೇಸರದಿಂದ ನುಡಿದರು. ಸಿಂಗಾಪುರ ಗ್ರಾಮದ ರಘು ಎಂಬುವರು ಮಾತನಾಡಿ, ಗ್ರಾಮಗಳಿಗೆ ಅಂಚೆ ಪಾಲಕರ ಮೂಲಕ ಪಿಂಚಣಿ ಹಣ ವಿತರಣೆ ಮಾಡುತ್ತಿದ್ದ ಸಂದರ್ಭದಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ, ಕೆಲ ತಿಂಗಳ ಹಿಂದೆ ಅಂಚೆ ಇಲಾಖೆ ಬ್ಯಾಂಕಿಂಗ್ ವ್ಯವಸ್ಥೆ ಪ್ರಾರಂಭಿಸಿದ ನಂತರ ಸಿಂಗಾಪುರದಲ್ಲಿ ಒಂದು ಅಂಚೆ ಕಚೇರಿ ತೆರೆದು ಅಲ್ಲಿ ಹಣ ವಿತರಣೆ ಮಾಡುತ್ತಾರೆ. ಪಿಂಚಣಿದಾರರು ಸಿಂಗಾಪುರಕ್ಕೆ ಅಗತ್ಯ ಬಸ್ ವ್ಯವಸ್ಥೆ ಇಲ್ಲದ ಕಾರಣ ದೂರದ ಗ್ರಾಮಗಳಿಂದ ನಡೆದು ಬರುತ್ತಾರೆ, ತಿಂಡಿ ತಿನ್ನದೇ ನಡೆದು ಬರುವ ಗ್ರಾಮಸ್ಥರು ಹಣವಿಲ್ಲ ಎಂದಾಗ ಅವರ ಗೋಳನ್ನು ಕಂಡಾಗ ಬಹಳ ಹಿಂಸೆಯಾಗುತ್ತಿತ್ತು. ಆದ್ದರಿಂದ ನಾವುಗಳು ಗ್ರಾಮೀಣ ಪ್ರದೇಶದ ಪಿಂಚಣಿದಾರರನ್ನು ಕರೆತಂದು ಅನಿವಾರ್ಯವಾಗಿ ಪ್ರತಿಭಟನೆ ಮಾಡುತ್ತಿದ್ದೇವೆ ಎಂದರು.ಹೊಳೆನರಸೀಪುರ ಅಂಚೆ ಇಲಾಖೆಯ ಅಂಚೆ ಉಪ ನಿರೀಕ್ಷಕ ಮಹೇಶ್ ಮಾತನಾಡಿ, ನಮ್ಮ ಕಚೇರಿ ವ್ಯಾಪ್ತಿಯಲ್ಲಿ ೧೮ ಕಚೇರಿಗಳು ಇದ್ದು, ಸಿಂಗಾಪುರ ಕಚೇರಿ ವ್ಯಾಪ್ತಿಯಲ್ಲಿ ಹೆಚ್ಚು ಹಳ್ಳಿಗಳು ಬರುವುದರಿಂದ ಇಂದಿನಿಂದ ಪ್ರತಿನಿತ್ಯ ಅಂಚೆ ಇಲಾಖೆಗೆ ಮೂರು ಲಕ್ಷ ರು. ಕಳುಹಿಸಿಕೊಡುತ್ತೇನೆ, ಮುಂದಿನ ದಿನಗಳಲ್ಲಿ ಸಮಸ್ಯೆ ಇರುವುದಿಲ್ಲವೆಂದು ಭರವಸೆ ನೀಡಿದ ನಂತರ ಪ್ರತಿಭಟನೆ ನಿರತರು ಗ್ರಾಮಗಳಿಗೆ ತೆರಳಿದರು.
ಸಿಂಗಾಪುರ ಗ್ರಾಮದ ರಘು ಹಾಗೂ ಸಂಪತ್ ಎಂಬುವರು ವೃದ್ಧರು ಸಮಸ್ಯೆ ಕಂಡು ಶಾಶ್ವತ ಪರಿಹಾರದ ದೂರದೃಷ್ಠಿಯಿಂದ ಬಾಡಿಗೆ ವಾಹನದಲ್ಲಿ ಪಿಂಚಣಿ ಪಡೆಯಲು ಕಾದು ಕುಳಿತ್ತಿದ್ದ ವೃದ್ಧರನ್ನು ಪಟ್ಟಣದ ಅಂಚೆ ಕಚೇರಿಗೆ ಕರೆ ತಂದಿದ್ದರು. ಪ್ರತಿಭಟನೆಯಲ್ಲಿ ಮಾರನಾಯಕನಹಳ್ಳಿಯ ಪುಟ್ಟಮ್ಮ, ಚಂದ್ರಮ್ಮ, ಜಯಮ್ಮ, ಉಲಿವಾಲದ ಮಂಜುಮ್ಮ, ಸಾವಿತ್ರಮ್ಮ, ಈಡಿಗನಹೊಸೂರಿನ ಸಣ್ಣಮ್ಮ, ಗೌರಮ್ಮ, ಗುಂಜೇವು ಲಕ್ಷ್ಮಮ್ಮ, ರತ್ನಮ್ಮ, ಮೂಳೆಕಾಳೇನಹಳ್ಳಿಯ ಚನ್ನಬಸಪ್ಪ, ಸಿಂಗಾಪುರದ ಪರಮೇಶ, ರಾಮಯ್ಯ, ಇತರರು ಇದ್ದರು.