ಸಾರಾಂಶ
ಕನ್ನಡಪ್ರಭ ವಾರ್ತೆ ಮಳವಳ್ಳಿ
ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಸಮರ್ಪಕ ಕೆಲಸ, ಆನ್‌ಲೈನ್ ಹಾಜರಾತಿ ವಾಪಸ್ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಬೇಕೆಂದು ಒತ್ತಾಯಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಸದಸ್ಯರು ಹಾಗೂ ಕೂಲಿಕಾರರು ಪಟ್ಟಣದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.ಪಟ್ಟಣದ ತಾಲೂಕು ಪಂಚಾಯ್ತಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ವೇಳೆ ಪ್ರಾಂತ ಕೃಷಿ ಕೂಲಿಕಾರರ ಸಂಘದ ರಾಜ್ಯಾಧ್ಯಕ್ಷ ಎಂ.ಪುಟ್ಟುಮಾದು ಮಾತನಾಡಿ, ಡಿ.ಹಲಸಹಳ್ಳಿ ಮತ್ತು ನಾಗೇಗೌಡನದೊಡ್ಡಿ ಗ್ರಾಪಂನಲ್ಲಿ ಎಂಎನ್‌ಎಆರ್ ತೆಗೆದು ಕೆಲಸ ನೀಡದೇ ತಮಗೆ ಇಷ್ಟಬಂದವರಿಗೆ ಕೆಲಸ ನೀಡಿದ್ದಾರೆ ಎಂದು ದೂರಿದರು.
ಎಂಜಿನಿಯರ್ ಒಬ್ಬರು ಹಣ ನೀಡದಿದ್ದರೇ ಎಂಎನ್‌ಆರ್ ತೆಗೆಯುವುದಿಲ್ಲ ಎಂದು ಹೇಳುತ್ತಾರೆ. ಕೆಲವೊಂದು ಗ್ರಾಪಂಗಳಲ್ಲಿ ಕಡಿಮೆ ಕೂಲಿ ಹಾಕಿದ್ದಾರೆ. ಕೂಲಿಕಾರರ ಮೇಲೆ ನಿರ್ಲಕ್ಷ್ಯ ತೋರುವ ಪಿಡಿಓ ಹಾಗೂ ಎಂಜಿನಿಯರ್‌ಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.ವಾರದಲ್ಲಿ ಯಾವುದಾದರೂ ಒಂದು ದಿನ ರಜೆ ತೆಗೆದುಕೊಳ್ಳಬೇಕೆಂದು ಕಾಯ್ದೆ ನಿಯಮವಿದ್ದರೂ ಎಲ್ಲಾ ರಜಾ ದಿನಗಳಲ್ಲಿಯೂ ಕೆಲಸ ಕೊಡುವುದಿಲ್ಲ. ಗ್ರಾಮ ಕಾಯಕ ಮಿತ್ರರನ್ನು ಉದ್ಯೋಗ ಖಾತ್ರಿ ಕೆಲಸಕ್ಕೆ ಸಮರ್ಪಕವಾಗಿ ಬಳಸದೇ ಪಂಚಾಯ್ತಿ ಇತರೆ ಕೆಲಸಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಜೊತೆಗೆ 25 ದಿನದ ಕೆಲಸವನ್ನು ನೀಡದೆ ಕೂಲಿಕಾರರಿಗೆ ಸತಾಯಿಸುತ್ತಿರುವುದನ್ನು ಖಂಡಿಸಿದರು.
ಕೂಡಲೇ ಸಮರ್ಪಕ ಕೂಲಿ ನೀಡಬೇಕು, ಕೂಲಿಕಾರರಿಗೆ ಕಿರುಕುಳ ನಿಲ್ಲಬೇಕು, ನಾಮಫಲಕ ಹತ್ತಿರ ಹೋಗಿ ಫೋಟೋ ತೆಗೆಸಬೇಕೆಂಬ ಅವೈಜ್ಞಾನಿಕ ನೀತಿ ರದ್ದುಪಡಿಸಬೇಕು ಎಂದು ಆಗ್ರಹಿಸಿದರು.ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಮತ್ತು ಕಾರ್ಯದರ್ಶಿಗಳು ಸರ್ಕಾರದ ಸುತ್ತೋಲೆ ಅದೇಶದಂತೆ ಪಂಚಾಯ್ತಿ ಕೇಂದ್ರ ಸ್ಥಾನದಲ್ಲಿಯೇ ವಾಸ ಮಾಡಬೇಕು. ಎಬಿಪಿ ಮತ್ತು ಎನ್‌ಎಂಎಂಎಸ್, ಎಪಿಪಿ ನೀತಿಯನ್ನು ಕೈಬಿಟ್ಟು 600 ರು ಕೂಲಿ, 200 ದಿನಗಳ ಕೆಲಸ ಮತ್ತು ಸಲಕರಣೆಗಳನ್ನು ಸರಬರಾಜು ಮಾಡಿ ಕೆಲಸ ನೀಡಬೇಕೆಂದು ಆಗ್ರಹಿಸಿದರು.
ತಾಪಂ ಇಒ ಮಮತ ಮನವಿ ಸ್ವೀಕರಿಸಿ ಮಾತನಾಡಿ, ಸಮಸ್ಯೆಯಾಗಿರುವ ಗ್ರಾಪಂ ಪಿಡಿಒಗಳೊಂದಿಗೆ ಸಭೆ ನಡೆಸಿ ಕೂಲಿಕಾರರ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.ಪ್ರತಿಭಟನೆಯಲ್ಲಿ ಪ್ರಾಂತ ಕೃಷಿ ಕೂಲಿಕಾರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಹನುಮೇಶ್, ತಾಲೂಕು ಅಧ್ಯಕ್ಷ ಶಿವಮಲ್ಲಯ್ಯ, ಕಾರ್ಯದರ್ಶಿ ಸರೋಜಮ್ಮ, ವಲಯ ಸಮಿತಿ ಅಧ್ಯಕ್ಷ ಬಸವರಾಜು, ತಳಗವಾದಿ ವಲಯ ಸಮಿತಿ ಅಧ್ಯಕ್ಷ ರಾಮಣ್ಣ, ವಲಯ ಸಮಿತಿ ಕಾರ್ಯದರ್ಶಿ ಟಿ.ಎಚ್ ಆನಂದ್, ಕಪನಿಗೌಡ, ಲಕ್ಷ್ಮಿ, ಶಿವಕುಮಾರ್ ಸೇರಿದಂತೆ ನೂರಾರು ಕೂಲಿಕಾರರು ಇದ್ದರು.