ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಭತ್ತ ಖರೀದಿ ಕೇಂದ್ರವನ್ನು ಸಕಾಲಕ್ಕೆ ತೆರೆಯದೆ ವಿಳಂಬ ನೀತಿ ಅನುಸರಿಸುತ್ತಿರುವ ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತದ ಧೋರಣೆಯನ್ನು ಖಂಡಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಸಮಿತಿ ಕಾರ್ಯಕರ್ತರು ನಗರದಲ್ಲಿ ಭತ್ತ ಸುರಿದು ಪ್ರತಿಭಟನೆ ನಡೆಸಿದರು.ನಗರದ ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಬಳಿಯಿಂದ ಮೆರವಣಿಗೆಯಲ್ಲಿ ಸಾಗಿ ಬಂದ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿ ಪ್ರವೇಶ ದ್ವಾರವನ್ನು ಬೇಧಿಸಿ ಒಳನುಗ್ಗಿದರು. ಬಳಿಕ ಪೊಲೀಸರು ಪ್ರತಿಭಟನಾಕಾರರನ್ನು ತಡೆದು ಹೊರಗೆ ಕಳುಹಿಸಿದರು.
ಪ್ರಾಂತ ರೈತ ಸಂಘದ ಜಿಲ್ಲಾ ಸಂಚಾಲಕ ಎನ್.ಎಲ್.ಭರತ್‌ರಾಜ್ ಮಾತನಾಡಿ, ಭತ್ತ ಖರೀದಿ ಕೇಂದ್ರ ವಿಳಂಬದಿಂದಾಗಿ ದಲ್ಲಾಳಿಗಳು ಕ್ವಿಂಟಲ್ ಭತ್ತವನ್ನು ೧೮೦೦ ರು.ನಿಂದ ೨೦೦೦ ರು.ಗೆ ಖರೀದಿ ಮಾಡುತ್ತಿದ್ದಾರೆ. ಕ್ವಿಂಟಲ್ ಭತ್ತಕ್ಕೆ ೨೩೦೦ ರು. ಬೆಂಬಲ ಬೆಲೆ ನಿಗದಿಯಾಗಿದ್ದರೂ ಕನಿಷ್ಠ ಈ ದರದಲ್ಲಾದರೂ ದಲ್ಲಾಳಿಗಳು ಭತ್ತ ಖರೀದಿ ಮಾಡುತ್ತಿಲ್ಲ. ರೈತರ ಅಸಹಾಯಕತೆಯನ್ನು ದುರುಪಯೋಗ ಪಡಿಸಿಕೊಳ್ಳುವವರ ವಿರುದ್ಧ ಕ್ರಮ ಜರುಗಿಸಲು ಜಿಲ್ಲಾಡಳಿತ ವಿಫಲವಾಗಿದೆ ಎಂದು ಆರೋಪಿಸಿದರು.ಕೃಷಿ ಸಚಿವರು ಮಂಡ್ಯ ಜಿಲ್ಲೆಯವರೇ ಆಗಿದ್ದರೂ ರೈತರ ಹಿತರಕ್ಷಣೆ ಮಾಡುವಲ್ಲಿ ವಿಫಲರಾಗಿದ್ದಾರೆ. ಕೇರಳದ ಎಡರಂಗ ಸರ್ಕಾರ ಭತ್ತ ಬೆಳೆಯಲು ರೈತರಿಗೆ ಎಕರೆಗೆ ೧೦ ಸಾವಿರ ರು. ಪ್ರೋತ್ಸಾಹಧನ, ಕ್ವಿಂಟಲ್ ಭತ್ತಕ್ಕೆ ಬೆಂಬಲ ಬೆಲೆಯ ಜೊತೆಗೆ ಹೆಚ್ಚುವರಿಯಾಗಿ ೮೦೦ ರು.ಗಳನ್ನು ನೀಡುವುದರ ಮೂಲಕ ೩೧೦೦ ರು.ನಂತೆ ಖರೀದಿ ಮಾಡುತ್ತಿದೆ. ಈ ರೀತಿಯ ಇಚ್ಛಾಶಕ್ತಿ ನಮ್ಮ ರಾಜ್ಯ ಸರ್ಕಾರಕ್ಕೆ ಇಲ್ಲವೇಕೆ ಎಂದು ಪ್ರಶ್ನಿಸಿದರಲ್ಲದೇ, ಕ್ವಿಂಟಲ್ ಭತ್ತಕ್ಕೆ ೩ ಸಾವಿರ ರು. ಬೆಂಬಲ ಬೆಲೆ ನಿಗದಿಪಡಿಸುವಂತೆ ಆಗ್ರಹಿಸಿದರು.
ಸಹ ಸಂಚಾಲಕ ಎಂ.ಇ.ಮಹದೇವು ಮಾತನಾಡಿ, ಜಿಲ್ಲೆಯ ರೈತರು ಕಬ್ಬನ್ನು ಬಿಟ್ಟರೆ ಎರಡನೇ ಸ್ಥಾನದಲ್ಲಿ ಭತ್ತ ಬೆಳೆಯುತ್ತಾರೆ. ಜಿಲ್ಲೆಯಲ್ಲಿ ಸುಮಾರು ೧.೫೦ ಲಕ್ಷ ಎಕರೆಯಲ್ಲಿ ಭತ್ತ ಬೆಳೆಯುತ್ತಾರೆ. ಈ ಪ್ರದೇಶದಿಂದ ಸುಮಾರು ೫೦ ಲಕ್ಷ ಕ್ವಿಂಟಲ್ ಭತ್ತ ಸಂಗ್ರಹವಾಗುತ್ತದೆ. ಆದರೆ, ಸಹಜವಾಗಿ ಜುಲೈ-ಆಗಸ್ಟ್‌ನಲ್ಲಿ ನಾಟಿ ಮಾಡಿ ನವೆಂಬರ್-ಡಿಸಸೆಂಬರ್‌ನಲ್ಲಿ ಭತ್ತ ಕಟಾವು ಮಾಡುವರು. ಈ ಸಮಯದಲ್ಲಿ ಸರ್ಕಾರ ನವೆಂಬರ್ ತಿಂಗಳಲ್ಲೇ ಭತ್ತ ಖರೀದಿ ಕೇಂದ್ರ ತೆರೆದು ರೈತರಿಂದ ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ ಮಾಡಬೇಕಿತ್ತು. ಆದರೆ, ಜನವರಿ ಮೊದಲವಾರ ಕಳೆದರೂ ಭತ್ತ ಖರೀದಿ ಕೇಂದ್ರ ತೆರೆಯದಿರುವುದರಿಂದ ರೈತರು ಭತ್ತ ಬೆಳೆಯಲು ಮಾಡಿದ್ದ ಸಾಲಕ್ಕಾಗಿ ಕಟಾವು ಮತ್ತು ಇನ್ನಿತರ ವೆಚ್ಚಕ್ಕಾಗಿ ಭತ್ತವನ್ನು ಶೇಖರಿಸಿಟ್ಟುಕೊಳ್ಳಲು ಸ್ಥಳದ ಅಭಾವದಿಂದಾಗಿ ಮಾರಾಟ ಮಾಡಲು ತರಾತುರಿಯಲ್ಲಿದ್ದಾರೆ. ಈ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳದ ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರ ಸಕಾಲದಲ್ಲಿ ಬೆಂಬಲ ಬೆಲೆಯಡಿ ಭತ್ತ ಖರೀದಿ ಮಾಡದೆ ರೈತರನ್ನು ವಂಚಿಸುತ್ತಿದ್ದಾರೆ ಎಂದು ಆರೋಪಿಸಿದರು.ಪ್ರತಿಭಟನೆಯಲ್ಲಿ ಎನ್.ಲಿಂಗರಾಜಮೂರ್ತಿ, ರಾಮಣ್ಣ, ಎ.ಎಲ್.ಶಿವಕುಮಾರ್, ಸತೀಶ್, ಚಿಕ್ಕಸ್ವಾಮಿ, ಕುಳ್ಳೇಗೌಡ, ಭಾಗ್ಯಮ್ಮ, ಶ್ರೀನಿವಾಸ್, ಎಸ್.ಗುರುಸ್ವಾಮಿ, ಮರಿಲಿಂಗೇಗೌಡ, ರಾಜು ಇತರರಿದ್ದರು.