ಸಾರಾಂಶ
ಹಾವೇರಿ: ನಗರದ ಎಲ್‌ಐಸಿ ಹಿಂಭಾಗದ ವಿದ್ಯಾನಗರದ ಪಶ್ಚಿಮ ಬಡಾವಣೆಗೆ ರಸ್ತೆ, ಚರಂಡಿ, ಬೀದಿ ದೀಪ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡಲು ಒತ್ತಾಯಿಸಿ ಸ್ಥಳೀಯ ನಿವಾಸಿಗಳು ಶುಕ್ರವಾರ ನಗರಸಭೆ ಎದುರು ಪ್ರತಿಭಟನೆ ನಡೆಸಿದರು. ವಿದ್ಯಾನಗರ ಪಶ್ಚಿಮ ಬಡಾವಣೆಯ ೫ನೇ ಕ್ರಾಸ್ ಅಯ್ಯಪ್ಪಸ್ವಾಮಿ ದೇವಸ್ಥಾನದ ಸುತ್ತಮುತ್ತ ಸೇರಿದಂತೆ ಬಡಾವಣೆಯಲ್ಲಿ ಸ್ವಲ್ಪ ಮಳೆ ಬಂದರೂ ರಸ್ತೆಗಳೆಲ್ಲಾ ಕೆಸರು ಗದ್ದೆಯಂತಾಗುತ್ತವೆ. ಮೂಲಭೂತ ಸೌಕರ್ಯಗಳಾದ ರಸ್ತೆ, ಚರಂಡಿ, ಬೀದಿ ದೀಪ ಇಲ್ಲದೇ ಇಲ್ಲಿನ ನಿವಾಸಿಗಳು ನಿತ್ಯ ಸಮಸ್ಯೆಗಳ ಮಧ್ಯೆಯೇ ಜೀವನ ನಡೆಸುತ್ತಿದ್ದಾರೆ. ಈ ಬಗ್ಗೆ ಹಲವಾರು ಬಾರಿ ನಗರಸಭೆ ಪೌರಾಯುಕ್ತರಿಗೆ ಮನವಿ ಸಲ್ಲಿಸಿದರೂ ಸಹಿತ ನಗರಸಭೆ ಅಧಿಕಾರಿಗಳು ನಮಗೆ ಸಂಬಂಧವೇ ಇಲ್ಲದಂತಿದೆ ವರ್ತಿಸುತ್ತಿದ್ದಾರೆ ಎಂದು ದೂರಿದರು.ಕೆಸರುಗದ್ದೆಗಳಾಗಿರುವ ರಸ್ತೆಯಲ್ಲಿ ಬಡವಾಣೆಯ ನಿವಾಸಿಗಳು ಸಂಚರಿಸಲು ನಿತ್ಯ ಹರಸಾಹಸ ಪಡುವಂತಾಗಿದೆ. ಈ ರಸ್ತೆಗಳು ಹಾಳಾಗಿ ವರ್ಷಗಳೇ ಕಳೆದರೂ ನಗರಸಭೆ ಮಾತ್ರ ದುರಸ್ತಿ ಪಡಿಸುವ ಗೋಚಿಗೆ ಹೋಗಿಲ್ಲ, ಕೆಲ ವರ್ಷಗಳಿಂದ ಹಾಕಿದ್ದ ಡಾಂಬರು ಕಿತ್ತು ಹೋಗಿದೆ. ರಸ್ತೆಗಳಲ್ಲಿ ದೊಡ್ಡ, ದೊಡ್ಡ ಗುಂಡಿಗಳೇ ಬಿದ್ದಿವೆ. ಮಳೆ ಬಂದರೆ ಆ ಗುಂಡಿಗಳ ಆಳವೇ ಗೊತ್ತಾಗಲ್ಲ, ಹೀಗಾಗಿ ಗುಂಡಿಗಳಲ್ಲಿ ಬೈಕ್ ಸ್ಕಿಡ್‌ಗಾಗಿ ಅನೇಕರು ಬಿದ್ದಿದ್ದಾರೆ. ಈ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗಲೂ ಅನೇಕ ಹಿರಿಯರು ಕಾಲು ಜಾರಿ ಬಿದ್ದು ಗಾಯಗೊಂಡಿದ್ದಾರೆ. ಹೀಗಾಗಿ ಕೂಡಲೇ ರಸ್ತೆ ದುರಸ್ತಿ ಪಡಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಚರಂಡಿಗಳು ಸಹ ಸಮರ್ಪಕವಾಗಿ ನಿರ್ಮಾಣ ಮಾಡಿಲ್ಲ. ಹೀಗಾಗಿ ಕೊಳಚೆ ನೀರು ಸರಾಗವಾಗಿ ಹರಿದು ಹೋಗದೇ ದುರ್ನಾತ ಬೀರುತ್ತ ರೋಗ ರುಜಿನಗಳು ಉಲ್ಬಣಗೊಳ್ಳಲು ದಾರಿ ಮಾಡಿಕೊಳ್ಳುತ್ತಿವೆ. ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳಲ್ಲಿ ಮಳೆ ನೀರು ಸಂಗ್ರಹವಾಗುತ್ತಿದೆ. ಕಾಲುವೆಗಳು ಸಹ ಮುಚ್ಚಿಕೊಂಡಿವೆ. ಗುಂಡಿಗಳಲ್ಲಿನ ನೀರು ಚರಂಡಿಗೂ ಹರಿದು ಹೋಗುತ್ತಿಲ್ಲ, ಗುಂಡಿಗಳಲ್ಲಿ ಅನೇಕ ದಿನಗಳಿಂದ ನೀರು ಸಂಗ್ರಹವಾಗುತ್ತಿದ್ದು, ಸೊಳ್ಳೆಗಳು ಉತ್ಪತ್ತಿಯಾಗಿ ಕಡೆದರೆ ಡೆಂಘೀ ಜ್ವರ ಬರುವ ಭೀತಿಯನ್ನು ಇಲ್ಲಿನ ನಿವಾಸಿಗಳು ಎದುರಿಸುವಂತಾಗಿದೆ.ಶಾಸಕ ರುದ್ರಪ್ಪ ಲಮಾಣಿ ಅವರ ಮೂಲಕ ನಗರಸಭೆಗೆ ಅಧಿಕಾರಿಗಳಿಗೆ ಹಾಗೂ ವಾರ್ಡಿನ ಸದಸ್ಯರಿಗೆ ಎಷ್ಟು ಬಾರಿ ರಸ್ತೆ ದುರಸ್ತಿ ಪಡಿಸುವಂತೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ, ರಸ್ತೆಯಲ್ಲಿನ ಗುಂಡಿಗಳಲ್ಲಿ ನೀರು ನಿಲ್ಲುತ್ತಿದ್ದು, ಮಳೆಗಾಲದಲ್ಲಿ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ಯಾವುದೇ ಗ್ರಾಮೀಣ ರಸ್ತೆಗಳು ಈಗ ಹೀಗೆ ಇರಲು ಸಾಧ್ಯವಿಲ್ಲ, ಬಹುತೇಕ ಗ್ರಾಮೀಣ ರಸ್ತೆಗಳು ಸುಧಾರಣೆ ಕಂಡಿವೆ. ನಾವು ನಗರ ಪ್ರದೇಶದಲ್ಲಿ ಇಂಥ ರಸ್ತೆಯಲ್ಲಿ ಸಂಚರಿಸುತ್ತಿದ್ದೇವೆ. ಪ್ರತಿವರ್ಷ ಇಲ್ಲಿನ ನಿವಾಸಿಗಳು ನಗರಸಭೆಗೆ ತೆರಿಗೆ ತುಂಬಿದರೂ ಬಡಾವಣೆಗೆ ಮೂಲಭೂತ ಸೌಕರ್ಯ ಕಲ್ಪಿಸುವಲ್ಲಿ ನಿರ್ಲಕ್ಷ್ಯ ತೋರುತ್ತಿದೆ. ಕೂಡಲೇ ವಿದ್ಯಾನಗರದ ಪಶ್ಚಿಮ ಬಡಾವಣೆಗೆ ರಸ್ತ್ತೆ, ಚರಂಡಿ, ಬೀದಿ ದೀಪ ಸೇರಿದಂತೆ ಮೂಲಸೌಕರ್ಯಗಳನ್ನು ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿ ನಗರಸಭೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಈ ವೇಳೆ ಬಡಾವಣೆಯ ನಿವಾಸಿಗಳಾದ ವಿಶ್ವನಾಥ ಬೋಂಡಾಡಿ, ಮಂಜುನಾಥ ಭಜಂತ್ರಿ, ಅಶೋಕ ವಗ್ಗಣ್ಣನವರ, ಕಿರಣ ಹಾವನೂರ, ರಘುವೀರ ಚೌಹ್ವಾಣ, ಬಿ.ಎಂ. ಬಾದಾಮಿ, ದತ್ತಾತ್ರೇಯ ಕೂಡಲ, ಮಣಿಕಂಠ ಹಡಗಲಿ, ಪ್ರವೀಣ ರೆಡ್ಡಿ, ಶರಣಬಸಪ್ಪ ಪಾಟೀಲ, ಶೋಭಾ ಗಂಜಿಗಟ್ಟಿ, ಸೀಮಾ ನವಲೆ ಸೇರಿದಂತೆ ಇತರರು ಇದ್ದರು.