ಬಿಡಿಸಿಸಿ ಬ್ಯಾಂಕಿನ ನೌಕರರ ಸಂಘದ ಅಧ್ಯಕ್ಷ ನಿಂಗಪ್ಪ ಕರೆನ್ನವರ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅತ್ತ ಜಿಲ್ಲಾ ಕೇಂದ್ರ ಬ್ಯಾಂಕಿನ ನೌಕರರ ಸಂಘದ ಸದಸ್ಯರು ಶಾಸಕ ಲಕ್ಷ್ಮಣ ಸವದಿ ವಿರುದ್ಧ ಶಿಸ್ತುಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿ ಬ್ಯಾಂಕಿನ ಅಧ್ಯಕ್ಷರಿಗೆ ಮತ್ತು ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರೇ, ಇತ್ತ ಅಥಣಿಯಲ್ಲಿ ಶಾಸಕ ಲಕ್ಷ್ಮಣ ಸವದಿ, ಅವರ ಪುತ್ರ ಚಿದಾನಂದ ಸವದಿ ಬೆಂಬಲಿಗರು ಮತಕ್ಷೇತ್ರದ ಸಾವಿರಾರು ಕಾರ್ಯಕರ್ತರೊಂದಿಗೆ ಬೃಹತ್ ಪ್ರತಿಭಟನೆ ಹಮ್ಮಿಕೊಂಡು ಶಾಸಕ ಲಕ್ಷ್ಮಣ ಸವದಿ ಹಾಗೂ ಚಿದಾನಂದ ಸವದಿ ಸೇರಿದಂತೆ 8 ಜನ ಬೆಂಬಲಿಗರ ಮೇಲೆ ಮೇಲೆ ಅಥಣಿ ಪೊಲೀಸ್ ಠಾಣೆಯಲ್ಲಿ ಭಾನುವಾರ ದಾಖಲಿಸಿರುವ ಸುಳ್ಳು ಪ್ರಕರಣವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಅಥಣಿ

ಬಿಡಿಸಿಸಿ ಬ್ಯಾಂಕಿನ ನೌಕರರ ಸಂಘದ ಅಧ್ಯಕ್ಷ ನಿಂಗಪ್ಪ ಕರೆನ್ನವರ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅತ್ತ ಜಿಲ್ಲಾ ಕೇಂದ್ರ ಬ್ಯಾಂಕಿನ ನೌಕರರ ಸಂಘದ ಸದಸ್ಯರು ಶಾಸಕ ಲಕ್ಷ್ಮಣ ಸವದಿ ವಿರುದ್ಧ ಶಿಸ್ತುಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿ ಬ್ಯಾಂಕಿನ ಅಧ್ಯಕ್ಷರಿಗೆ ಮತ್ತು ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರೇ, ಇತ್ತ ಅಥಣಿಯಲ್ಲಿ ಶಾಸಕ ಲಕ್ಷ್ಮಣ ಸವದಿ, ಅವರ ಪುತ್ರ ಚಿದಾನಂದ ಸವದಿ ಬೆಂಬಲಿಗರು ಮತಕ್ಷೇತ್ರದ ಸಾವಿರಾರು ಕಾರ್ಯಕರ್ತರೊಂದಿಗೆ ಬೃಹತ್ ಪ್ರತಿಭಟನೆ ಹಮ್ಮಿಕೊಂಡು ಶಾಸಕ ಲಕ್ಷ್ಮಣ ಸವದಿ ಹಾಗೂ ಚಿದಾನಂದ ಸವದಿ ಸೇರಿದಂತೆ 8 ಜನ ಬೆಂಬಲಿಗರ ಮೇಲೆ ಮೇಲೆ ಅಥಣಿ ಪೊಲೀಸ್ ಠಾಣೆಯಲ್ಲಿ ಭಾನುವಾರ ದಾಖಲಿಸಿರುವ ಸುಳ್ಳು ಪ್ರಕರಣವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ಕಾಂಗ್ರೆಸ್ ಪಕ್ಷದ ಯುವ ಮುಖಂಡ ಶಿವಾನಂದ ಗುಡ್ಡಾಪುರ ಮಾತನಾಡಿ, ಶನಿವಾರ ನಡೆದ ಘಟನೆಗೆ ಸಂಬಂಧಿಸಿದಂತೆ ಅಥಣಿ ಮತಕ್ಷೇತ್ರದಲ್ಲಿ ಕಾಣದ ಕೈಗಳು ಶಾಸಕ ಲಕ್ಷ್ಮಣ ಸವದಿ, ವಿರುದ್ಧ ರಾಜಕೀಯ ಷಡ್ಯಂತ್ರ ಮಾಡುತ್ತಿವೆ. ಸವದಿ ಕುಟುಂಬದ ವಿರುದ್ಧ ಪೊಲೀಸ್ ಠಾಣೆಯಲ್ಲಿ ಸುಳ್ಳು ಪ್ರಕರಣ ದಾಖಲಿಸುವ ಮೂಲಕ ರಾಜಕೀಯ ಶಕ್ತಿಯಿಂದ ಕುಗ್ಗಿಸುವ ಹುನ್ನಾರ ನಡೆದಿದೆ. ಇಂತಹ ಘಟನೆಗಳನ್ನು ಅಥಣಿ ಕ್ಷೇತ್ರದ ಜನರು ಸಹಿಸುವುದಿಲ್ಲ ಎಂದು ಷಡ್ಯಂತರ ನಡೆಸುವವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಯುವ ಮುಖಂಡ ಹಾಗೂ ಉದ್ಯಮಿ ಶಿವಕುಮಾರ ಸವದಿ ಮಾತನಾಡಿ, ಇದು ಶಾಸಕ ಲಕ್ಷ್ಮಣ ಸವದಿ ಮತ್ತು ಚಿದಾನಂದ ಸವದಿ ರಾಜಕೀಯ ವರ್ಚಸ್ಸನ್ನು ಕುಗ್ಗಿಸಲು ವಿರೋಧಿಗಳು ಹೂಡಿರುವ ವ್ಯವಸ್ಥಿತ ಷಡ್ಯಂತ್ರವಾಗಿದೆ. ಅಥಣಿ ತಾಲೂಕಿನ ಅಭಿವೃದ್ಧಿ ಕಾರ್ಯಗಳನ್ನು ಸಹಿಸದ ವಿರೋಧಿಗಳು ಸುಳ್ಳು ಆರೋಪ ಹೊರಿಸುತ್ತಿರುವುದು ಸರಿಯಲ್ಲ. ಕ್ಷೇತ್ರದಲ್ಲಿ ಶಾಸಕರ ವಿರುದ್ಧ ಹಿಂದೆ ಅನೇಕ ಬಾರಿ ಸುಳ್ಳು ಆರೋಪಗಳನ್ನು ಮಾಡಿದ್ದಾಗ ಕ್ಷೇತ್ರದ ಜನರು ಅಂತವರಿಗೆ ತಕ್ಕ ಉತ್ತರ ನೀಡಿದ್ದಾರೆ. ಶಿವಯೋಗಿಗಳ ನಾಡಿನಲ್ಲಿ ದಬ್ಬಾಳಿಕೆ, ಷಡ್ಯಂತ್ರಗಳಿಗೆ ಅವಕಾಶ ಇಲ್ಲ. ರಾಜ್ಯ ಸರ್ಕಾರ ಮತ್ತು ಪೊಲೀಸ್ ಅಧಿಕಾರಿಗಳು ಯಾವುದೇ ಒತ್ತಡಕ್ಕೆ ಮಣಿಯದೇ ಪ್ರಕರಣದ ಸತ್ಯಾಸತ್ಯತೆ ತನಿಖೆ ಮಾಡಬೇಕು. ರಾಜಕೀಯ ದ್ವೇಷಕ್ಕಾಗಿ ಅಮಾಯಕರನ್ನು ಬಳಸಿಕೊಂಡು ಸವದಿ ಅವರ ಹೆಸರಿಗೆ ಕಪ್ಪುಚುಕ್ಕೆ ತರುವ ಪ್ರಯತ್ನವನ್ನು ನಾವು ಸಹಿಸುವುದಿಲ್ಲ. ಅಥಣಿ ಪೊಲೀಸ್ ಠಾಣೆಯಲ್ಲಿ ಸುಳ್ಳು ಪ್ರಕರಣ ದಾಖಲಿಸಲಾಗಿದ್ದು, ಈ ಪ್ರಕರಣವನ್ನು ತನಿಖೆ ಮಾಡಿ ಹಿಂಪಡೆಯಬೇಕು, ರಾಜಕೀಯ ಷಡ್ಯಂತರ ನಡೆಸುವವರ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.ಬಿಡಿಸಿಸಿ ಯುನಿಯನ್ ಅಧ್ಯಕ್ಷ ನಿಂಗಪ್ಪ ಕರೆಣ್ಣವರ ಸುಳ್ಳು ಹಲ್ಲೆ ಆರೋಪ ಖಂಡಿಸಿ ಅಥಣಿ ಮತಕ್ಷೇತ್ರದ ಸಾವಿರಾರು ಬೆಂಬಲಿಗರು ಶಾಸಕರ ನಿವಾಸದಿಂದ ಪಟ್ಟಣದ ಅಂಬೇಡ್ಕರ್‌ ವೃತ್ತದ ಮೂಲಕ ಶಿವಯೋಗಿ ವೃತ್ತದಲ್ಲಿ ಭಾರಿ ಪ್ರತಿಭಟನೆ ನಡೆಸಿ ರಾಜಕೀಯ ಷಡ್ಯಂತರ ಮಾಡುತ್ತಿರುವವರ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಡಿವೈಎಸ್ಪಿ ಪ್ರಶಾಂತ ಮುನ್ನೋಳ್ಳಿ ಅವರಿಗೆ ಮನವಿ ಸಲ್ಲಿಸಿ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಸಿದರು.ಈ ಪ್ರತಿಭಟನೆಯಲ್ಲಿ ಮುಖಂಡರಾದ ದತ್ತಾ ವಾಸ್ಟರ, ರಾಜು ಗುಡೋಡಗಿ, ಸಂತೋಷ ಸಾವಡಕರ, ಶಿವಾನಂದ ದಿವಾನಮಳ, ಸಿ ಎಸ್ ನೇಮಗೌಡ, ಡಾ. ಎo. ಜಿ ಹಂಜಿ , ಸುರೇಶ ಮಾಯಣ್ಣವರ, ಶ್ರೀಶೈಲ ಶೆಲ್ಲಪ್ಪಗೋಳ, ಪರಪ್ಪ ಸವದಿ, ಅಮೋಘ ಖೋಬ್ರಿ, ಎಸ್ ಆರ್ ಗೂಳಪ್ಪನವರ, ಮಲ್ಲೇಶ ಸವದಿ, ಡಿ ಬಿ ಠಕ್ಕಣ್ಣವರ. ಸುಶೀಲಕುಮಾರ ಪತ್ತಾರ,ಮಲ್ಲು ಕೂಳ್ಳೊಳ್ಳಿ, ಮುತ್ತು ಮೋಕಾಶಿ, ಸಿದ್ರಾಯ ಯಲ್ಲಡಗಿ, ರಾಜೂ ನಾಡಗೌಡ, ಕಲ್ಲಪ್ಪ ವನಜೋಳ, ನೂರಅಹಮ್ಮದ್‌ ಡೊಂಗರಗಾಂವ, ಪ್ರಸನ್ನ ಸಗರಿ, ಮಹಾಂತೇಶ ಬಾಡಗಿ, ಮಂಜು ಹೋಳಿಕಟ್ಟಿ, ಬಿಪೀನ್ ತೇಜವಾಣಿ, ವಿಶ್ವನಾಥ ತೆಲಸಂಗ, ಆರ್.ಆರ್. ತೆಲಸಂಗ, ಭೀಮು ಡಂಗಿ ಸೇರಿದಂತೆ ಅನೇಕ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.ಬೆಂಬಲಿಗರಿಗೆ ಅಭಿನಂದಿಸಿದ ಶಾಸಕ ಲಕ್ಷ್ಮಣ ಸವದಿ

ಅಥಣಿ: ಪಟ್ಟಣದ ಶಿವಯೋಗಿ ವೃತ್ತದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ತಮ್ಮ ಬೆಂಬಲಿಗರನ್ನು ಉದ್ದೇಶಿಸಿ ಫೋನ್ ಕರೆ ಮೂಲಕ ಮಾತನಾಡಿದ ಶಾಸಕ ಲಕ್ಷ್ಮಣ ಸವದಿ ಸ್ವಯಂ ಪ್ರೇರಿತವಾಗಿ ತಾವೆಲ್ಲರೂ ನನ್ನ ವಿರುದ್ಧ ವಿರೋಧಿಗಳು ನಡೆಸುತ್ತಿರುವ ರಾಜಕೀಯ ಷಡ್ಯಂತ್ರವನ್ನು ಖಂಡಿಸಿ ಶಾಂತಿಯುತ ಪ್ರತಿಭಟನೆ ನಡೆಸುವ ಮೂಲಕ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಕ್ಕಾಗಿ ಅಭಿನಂದಿಸುತ್ತೇನೆ. ನಿಮ್ಮ ಪ್ರೀತಿ ವಿಶ್ವಾಸ ಬೆಂಬಲಕ್ಕೆ ಯಾವತ್ತೂ ನಾನು ಚಿರಋಣಿಯಾಗಿದ್ದೇನೆ ಎಂದು ಭಾವುಕರಾಗಿ ಬೆಂಬಲಿಗರಿಗೆ ಅಭಿನಂದಿಸಿದರು.

ಮಹೇಶ ಕುಮಟಳ್ಳಿಗೆ ಮಾತನಾಡುವ ನೈತಿಕತೆ ಇಲ್ಲ: ಚಿದಾನಂದ ಸವದಿ

ಅಥಣಿ: ಮಾಜಿ ಶಾಸಕ ಮಹೇಶ ಕುಮಟಳ್ಳಿ ಮಾತನಾಡಿರುವ ಹೇಳಿಕೆಯಲ್ಲಿ ಯಾವುದೇ ಹುರಳಿಲ್ಲ, ಕೊರೋನಾ ಸಂದರ್ಭದಲ್ಲಿ ಮನೆ ಬಿಟ್ಟು ಹೊರಗೆ ಬಾರದ ಮಹೇಶ ಕುಮಟಳ್ಳಿ ಈಗ ನಿಂಗಪ್ಪ ಕರೆಣ್ಣವರ ಬೆಂಬಲಕ್ಕೆ ನಿಲ್ಲುವ ಮೂಲಕ ರಾಜಕೀಯ ಲಾಭ ಪಡೆಯಲು ಇಲ್ಲಸಲ್ಲದ ಆರೋಪಗಳನ್ನು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಯುವ ಮುಖಂಡ ಚಿದಾನಂದ ಸವದಿ ಅರ್ಪಿಸಿದರು.ಪಟ್ಟಣದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಅಥಣಿ ಜನ ಶಾಂತಿ ಪ್ರಿಯರು, ಶಿವಯೋಗಿಗಳ ಮತ್ತು ಸಿದ್ದೇಶ್ವರ ದೇವರ ಪುಣ್ಯಭೂಮಿಯಲ್ಲಿ ಅಧರ್ಮದಿಂದ ದಬ್ಬಾಳಿಕೆ ಮಾಡುವವರ ಆಟ ನಡೆಯಲ್ಲ. ನಿಮ್ಮ ಜನಪರ ಕಾಳಜಿಯನ್ನು ಹಿಂದಿನ ಚುನಾವಣೆಯಲ್ಲಿ ಕ್ಷೇತ್ರದ ಮತದಾರರು ನಿರ್ಧರಿಸಿದ್ದಾರೆ. ಮತಕ್ಷೇತ್ರದಲ್ಲಿ ಯಾರು ದಬ್ಬಾಳಿಕೆ, ಗುಂಡಾಗಿರಿ ಮಾಡುತ್ತಿದ್ದಾರೆ ಎಂಬುವುದನ್ನು ತಾವು ಆತ್ಮವಲೋಕನೆ ಮಾಡಿಕೊಳ್ಳಬೇಕು. ಅಥಣಿ ಇತಿಹಾಸದಲ್ಲಿ ಲಕ್ಷ್ಮಣ ಐಗಳಿ ಎಂಬ ಅಬಕಾರಿ ಇಲಾಖೆಯ ಅಧಿಕಾರಿಯ ಕೊಲೆ ಹೇಗಾಯಿತು? ಎಂಬುವುದನ್ನು ತಾಕತ್ತಿದ್ದರೇ 24 ತಾಸುಗಳಲ್ಲಿ ಜನರಿಗೆ ತಿಳಿಸಬೇಕು. ಈ ಬಗ್ಗೆ ಗೊತ್ತಿಲ್ಲದಿದ್ದರೇ ನಿಮ್ಮ ರಾಜಕೀಯ ಗುರುಗಳನ್ನು ಕೇಳಿ ತಿಳಿದುಕೊಳ್ಳಿ, ನಿಮಗೆ ಮಾತನಾಡುವ ನೈತಿಕ ಹಕ್ಕಿಲ್ಲ ಎಂದು ಕುಮಟಳ್ಳಿ ವಿರುದ್ಧ ಹರಿಹಾಯ್ದರು. ಈ ವೇಳೆ ರಾಜಕೀಯ ಷಡ್ಯಂತರದ ವಿರುದ್ಧ ಪ್ರತಿಭಟಿಸಿ ಬೆಂಬಲ ಸೂಚಿಸಿದ ಮುಖಂಡರಿಗೆ ಮತ್ತು ಕಾರ್ಯಕರ್ತರಿಗೆ ಅಭಿನಂದಿಸಿದರು.ಶಾಸಕ ಲಕ್ಷ್ಮಣ ಸವದಿ, ಪುತ್ರ ಚಿದಾನಂದ ಸವದಿ ಸೇರಿ 8 ಜನರ ಮೇಲೆ ಪ್ರಕರಣ ದಾಖಲು

ಅಥಣಿ: ಬಿಡಿಸಿಸಿ ಬ್ಯಾಂಕ್ ನೌಕರರ ಯೂನಿಯನ್ ಅಧ್ಯಕ್ಷ ನಿಂಗಪ್ಪ ಕರೆಣ್ಣವರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಲಕ್ಷ್ಮಣ ಸವದಿ, ಪುತ್ರ ಚಿದಾನಂದ ಸವದಿ ಸೇರಿ 8 ಜನ ಅಪರಿಚಿತರ ಮೇಲೆ ಭಾನುವಾರ ಸಂಜೆ ಪ್ರಕರಣ ದಾಖಲಾಗಿದೆ. ಶನಿವಾರ ನಡೆದ ಘಟನೆಗೆ ಸಂಬಂಧಿಸಿದಂತೆ ಬೆಳಗಾವಿ ಖಾಸಗಿ ಆಸ್ಪತ್ರೆಯಲ್ಲಿ ಅಥಣಿ ಪೊಲೀಸರಿಗೆ ದೂರು ಕೊಟ್ಟ ನಿಂಗಪ್ಪ ಕರೆಣ್ಣವರ ದೂರಿನಲ್ಲಿ ಬ್ಯಾಂಕಿನ ನೌಕರರ ಸಂಘದ ಸಮಸ್ಯೆ ಕುರಿತು ಚರ್ಚಿಸಲು ನಮ್ಮನ್ನು ತಮ್ಮ ಮನೆಗೆ ಕರೆಸಿ ಅವಾಚ್ಯ ಶಬ್ಧಗಳಿಂದ ನಿಂದಿಸಿ ಶಾಸಕ ಲಕ್ಷ್ಮಣ ಸವದಿ ಕಪಾಳಕ್ಕೆ ಹೊಡೆದಿದ್ದಾರೆ. ಅವರ ಪುತ್ರ ಚಿದಾನಂದ ಸವದಿ ಬಲವಾಗಿ ಸೊಂಟಕ್ಕೆ ಒದ್ದಿದ್ದಾನೆ. ಆಗ ನೆಲಕ್ಕೆ ಬಿದ್ದ ನನ್ನ ಮೇಲೆ 7 ರಿಂದ 8 ಜನರು ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಸಿದ್ದಾರೆ. ಅಕ್ರಮ ಕೂಟ ಸೇರಿ ಹಲ್ಲೆ, ಮಾರಣಾಂತಿಕ ಹಲ್ಲೆ, ಜೀವ ಬೆದರಿಕೆ, ಅವಾಚ್ಯ ಶಬ್ಧಗಳಿಂದ ನಿಂದನೆ ಮಾಡಿದ್ದಾರೆಂದು ಕೇಸ್ ದಾಖಲು ಬಿಎನ್‌ಎಸ್ ಕಾಯ್ದೆ ಪ್ರಕಾರ 189(2), 191(2), 115(2), 351(2), 352(2)1 90 ಕಲಂ‌ ಅಡಿ ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಬ್ಯಾಂಕ್‌ನಲ್ಲಿ ಸಿಬ್ಬಂದಿ ಇಲ್ಲದೇ ಜನ ಪರದಾಟ

ಅಥಣಿ: ಬಿಡಿಸಿಸಿ ಬ್ಯಾಂಕ್ ನೌಕರರು ತಮ್ಮ ಕರ್ತವ್ಯಕ್ಕೆ ಹಾಜರಾಗಲಿ ತಮ್ಮ ಯೂನಿಯನ್ ಅಧ್ಯಕ್ಷರಿಗೆ ಆಗಿರುವ ಅನ್ಯಾಯವನ್ನು ಖಂಡಿಸಿ ಬೆಳಗಾವಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಆದ್ದರಿಂದ ಅಥಣಿ ಪಟ್ಟಣ ಸೇರಿದಂತೆ ವಿವಿಧ ಗ್ರಾಮಗಳ ಬಿಡಿಸಿಸಿ ಬ್ಯಾಂಕ್ ಗಳಲ್ಲಿ ಸಿಬ್ಬಂದಿಯರಿಲ್ಲೆದೇ ಸಾರ್ವಜನಿಕರು ಸಕಾಲಕ್ಕೆ ಸೇವೆಗಳು ದೊರಕದೆ ಪರದಾಡುವಂತಾಯಿತು. ಬ್ಯಾಂಕಿನಲ್ಲಿ ಇರುವ ಇಬ್ಬರು ಅಥವಾ ಮೂರು ಸಿಬ್ಬಂದಿಯರೇ ಎಲ್ಲ ಕಾರ್ಯವನ್ನು ನಿರ್ವಹಿಸಿದ ದೃಶ್ಯ ಕಂಡು ಬಂದವು.