ಕುಡಿವ ನೀರಿಗಾಗಿ ವಿದ್ಯಾರ್ಥಿಗಳಿಂದ ಪ್ರತಿಭಟನೆ

| Published : Jul 17 2024, 12:49 AM IST

ಸಾರಾಂಶ

ಎರಡ್ಮೂರು ದಿನಗಳಲ್ಲಿ ಶಾಲೆಗೆ ನೇರವಾಗಿ ಇನ್ನೊಂದು ಹೊಸ ಪೈಪಲೈನ್ ಮಾಡಿಸಿ ಶಾಲೆಯ ಮಕ್ಕಳಿಗೆ ನೀರಿನ ಸಮಸ್ಯೆ ಆಗದಂತೆ ವ್ಯವಸ್ಥೆ ಮಾಡಲಾಗುತ್ತದೆ

ಕನ್ನಡಪ್ರಭ ವಾರ್ತೆ ಚವಡಾಪುರ

ಅಫಜಲ್ಪುರ ತಾಲೂಕಿನ ಬಡದಾಳ ಗ್ರಾಮದ ಹೊಸ ಬಡಾವಣೆಯಲ್ಲಿನ ಕಿರಿಯ ಪ್ರಾಥಮಿಕ ಶಾಲೆಗೆ ಕುಡಿಯುವ ನೀರಿನ ಸಮಸ್ಯೆ ಆಗುತ್ತಿದೆ ಎಂದು ಶಾಲೆಯ ವಿದ್ಯಾರ್ಥಿಗಳು ಹಾಗೂ ಪಾಲಕರು ಗ್ರಾಮ ಪಂಚಾಯಿತಿಗೆ ತೆರಳಿ ಪ್ರತಿಭಟನೆ ನಡೆಸಿದ್ದಾರೆ.

ಶಾಲೆಯ ಎದುರಿಗೆ ಇರುವ ನೀರಿನ ಟ್ಯಾಂಕ್‍ನಲ್ಲಿ ಅನೇಕ ದಿನಗಳಿಂದ ನೀರು ಸಂಗ್ರಹವಾಗುತ್ತಿಲ್ಲ. ಹೀಗಾಗಿ ಶಾಲೆಯಲ್ಲಿ ಬಿಸಿಯೂಟ ತಯಾರಿಸುವುದು ಕಷ್ಟವಾಗುತ್ತದೆ. ಬಿಸಿಯೂಟ ಮಾಡಿದ ಬಳಿಕ ಮಕ್ಕಳಿಗೆ ನೀರು ಕುಡಿಯಲು ಮನೆಗಳಿಗೆ ಬರುವಂತಾಗಿದೆ ಎಂದು ಪಾಲಕರು ಆರೋಪಿಸಿದ್ದಾರೆ. ಘಟನೆ ಸಂಬಂಧ ಪಿಡಿಒ ಪ್ರಶಾಂತ ನಂದಿ ಮಾತನಾಡಿ ಕಿರಿಯ ಪ್ರಾಥಮಿಕ ಶಾಲೆಗೆ ನಾನೇ ಎರಡು ಬಾರಿ ಖುದ್ದಾಗಿ ಹೋಗಿ ಪರಿಶೀಲನೆ ಮಾಡಿದ್ದೇನೆ. ಶಾಲೆಯ ಎದುರಿನ ನೀರಿನ ಟ್ಯಾಂಕ್‍ನಲ್ಲಿ ನೀರು ಸಂಗ್ರಹವಾಗದೇ ಇರುವುದಕ್ಕೆ ಕಾರಣಗಳು ತಿಳಿದು ಅದನ್ನು ಸರಿಪಡಿಸಲಾಗಿದೆ. ಆದರೂ ಕೂಡ ಎರಡ್ಮೂರು ದಿನಗಳಲ್ಲಿ ಶಾಲೆಗೆ ನೇರವಾಗಿ ಇನ್ನೊಂದು ಹೊಸ ಪೈಪಲೈನ್ ಮಾಡಿಸಿ ಶಾಲೆಯ ಮಕ್ಕಳಿಗೆ ನೀರಿನ ಸಮಸ್ಯೆ ಆಗದಂತೆ ವ್ಯವಸ್ಥೆ ಮಾಡಲಾಗುತ್ತದೆ. ಯಾವ ಮಕ್ಕಳು ನೀರಿಲ್ಲ, ಸೌಲಭ್ಯವಿಲ್ಲ ಎಂದು ಶಿಕ್ಷಣದಿಂದ ವಂಚಿತರಾಗಬಾರದೆಂದು ತಿಳಿಸಿದ್ದಾರೆ.