ಕನ್ನಡಪ್ರಭ ವಾರ್ತೆ ಮಂಡ್ಯ
ಪ್ರಧಾನಿ ನರೇಂದ್ರ ಮೋದಿ ಹೆಸರಿಗೆ ಕಳಂಕ ತರುವ ಉದ್ದೇಶದಿಂದ ಸಿಜೆಪಿ ಜೊತೆ ಸೇರಿ ಕಾಂಗ್ರೆಸ್ ದೇಶದಲ್ಲಿ ಅರಾಜಕತೆ ಸೃಷ್ಟಿಸುತ್ತಿದೆ ಎಂದು ಆರೋಪಿಸಿ ಬಿಜೆಪಿ ಮುಖಂಡರು- ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಸೇರಿದ ಕಮಲ ಪಡೆಯ ಮುಖಂಡರು- ಕಾರ್ಯಕರ್ತರು ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ರಸ್ತೆ ತಡೆ ನಡೆಸಿ, ಮಾನವಸರಪಳಿ ರಚಿಸಿದರು. ಕಾಂಗ್ರೆಸ್ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಮೊಳಗಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಎನ್.ಎಸ್.ಇಂದ್ರೇಶ್ ಮಾತನಾಡಿ, ನೀಟ್ ಪರೀಕ್ಷೆ ಸೋರಿಕೆಗೆ ಕಾರಣರಾದವರನ್ನು ಈಗಾಗಲೇ ದಸ್ತಗಿರಿ ಮಾಡಲಾಗಿದೆ. ನೀಟ್ ಮರುಪರೀಕ್ಷೆ ನಡೆಸಿ ವಿದ್ಯಾರ್ಥಿಗಳಿಗೆ ಅನ್ಯಾಯವಾಗದಂತೆ ಎಚ್ಚರ ವಹಿಸಿದೆ. ದೇಶದಲ್ಲಿ ಕಾಂಗ್ರೆಸ್ ವಿರೋಧ ಪಕ್ಷವಾಗಿದ್ದುಕೊಂಡು ಸಿಜೆಪಿ ನಡೆಸುತ್ತಿರುವ ಹೋರಾಟದಲ್ಲಿ ಪಾಲ್ಗೊಂಡಿರುವುದು ನಾಚಿಕೆಗೇಡಿನ ವಿಚಾರ ಎಂದು ಟೀಕಿಸಿದರು.ಸಿಜೆಪಿ ಪಕ್ಷದವರನ್ನು ಈಗಾಗಲೇ ಕೇಂದ್ರ ಸರ್ಕಾರ ಮೂರು ಬಾರಿ ಮಾತುಕತೆಗೆ ಆಹ್ವಾನಿಸಿದೆ. ಮುಕ್ತ ಚರ್ಚೆಗೆ ಸದನದಲ್ಲಿ ಅವಕಾಶ ನೀಡಿದೆ. ಮಾತುಕತೆಗೂ ಹೋಗದೆ ಸದನವನ್ನು ಸುಗಮವಾಗಿ ನಡೆಯಲೂ ಬಿಡದೆ ವಿನಾಕಾರಣ ಕಾಂಗ್ರೆಸ್‌ನವರು ವಿದ್ಯಾರ್ಥಿಗಳನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ವಿದ್ಯಾರ್ಥಿಗಳನ್ನು ರಾಜಕೀಯಕ್ಕೆ ಬಳಸಿಕೊಂಡು ಎನ್‌ಡಿಎ ಸರ್ಕಾರದ ವಿರುದ್ಧ ಎತ್ತಿಕಟ್ಟುತ್ತಿದ್ದಾರೆ ಎಂದು ದೂರಿದರು.
ಬಿಜೆಪಿ ರಾಜ್ಯ ಕಾರ್ಯಕಾರಿಣಿ ಮಂಡಳಿ ಸದಸ್ಯ ಡಾ.ಸಿದ್ದರಾಮಯ್ಯ ಮಾತನಾಡಿ, ಸಿಜೆಪಿ ಮತ್ತು ಕಾಂಗ್ರೆಸ್ ಪ್ರಜಾಪ್ರಭುತ್ವ ವಿರೋಧಿ ನೀತಿ ಅನುಸರಿಸುತ್ತಿವೆ. ನೀಟ್ ಅಕ್ರಮದಲ್ಲಿ ತೊಡಗಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಿ ಫಾಸ್ಟ್‌ಟ್ರ್ಯಾಕ್ ಕೋರ್ಟ್‌ಗಳನ್ನು ಸ್ಥಾಪಿಸುವ ಮೂಲಕ ಅವರಿಗೆ ಕಠಿಣ ಶಿಕ್ಷೆ ವಿಧಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಕೇಂದ್ರ ಮಾತುಕತೆಗೆ ಆಹ್ವಾನಿಸಿದ್ದು, ಅದನ್ನು ಒಪ್ಪಿ ಸಲಹೆ- ಸೂಚನೆಗಳಿದ್ದರೆ ನೀಡಲಿ. ಅದನ್ನು ಬಿಟ್ಟು ಸುಖಾಸುಮ್ಮನೆ ಹೋರಾಟ ಮಾಡುತ್ತಾ ಗೊಂದಲ ಸೃಷ್ಟಿಸುವುದು ಸರಿಯಲ್ಲ ಎಂದು ಹೇಳಿದರು.
ಉಗ್ರ ಸಂಘಟನೆಯವರು ಪರೋಕ್ಷವಾಗಿ ಹೋರಾಟಕ್ಕೆ ಬೆಂಬಲ ನೀಡುತ್ತಿರುವುದು ಅಪಾಯಕಾರಿ ಬೆಳವಣಿಗೆ. ಇದು ವಿದ್ಯಾರ್ಥಿಗಳ ಪರವಾದ ಹೋರಾಟದಂತೆ ಕಂಡುಬರುತ್ತಿಲ್ಲ. ಮೋದಿ ಸರ್ಕಾರದ ವಿರುದ್ಧ ಹೋರಾಟದ ಹಿಂದೆ ನಿಂತು ಒಳಸಂಚು ನಡೆಸುತ್ತಿರುವುದು ಕಂಡುಬರುತ್ತಿದೆ. ರಾಜಕೀಯ ಲಾಭಕ್ಕಾಗಿ ವಿದ್ಯಾರ್ಥಿಗಳನ್ನು ಬಳಸಿಕೊಳ್ಳುತ್ತಿರುವುದು ಸರಿಯಲ್ಲ ಎಂದರು.
ಶ್ರೀರಂಗಪಟ್ಟಣ ಕ್ಷೇತ್ರದ ಮುಖಂಡ ಎಸ್.ಸಚ್ಚಿದಾನಂದ ಮಾತನಾಡಿ, ರಾಜಕೀಯ ಲಾಭಗಳಿಗಾಗಿ ಸಿಜೆಪಿ ಮತ್ತು ಕಾಂಗ್ರೆಸ್ ಹೋರಾಟ ನಡೆಸುತ್ತಿವೆಯೇ ವಿನಃ ವಿದ್ಯಾರ್ಥಿಗಳ ಭವಿಷ್ಯಕ್ಕಲ್ಲ. ಕೇಂದ್ರ ಸರ್ಕಾರ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಪೂರಕ ಕ್ರಮಗಳನ್ನು ಕೈಗೊಂಡಿದ್ದರೂ ಮೋದಿ ಅವರನ್ನು ಟೀಕಿಸುವುದಕ್ಕಷ್ಟೇ ಹೋರಾಟ ಸೀಮಿತವಾಗಿದೆ. ಕಾಂಗ್ರೆಸ್ ಸೇರಿದಂತೆ ಇಂಡಿಯಾ ಕೂಟ ಹೋರಾಟಕ್ಕೆ ಸೇರ್ಪಡೆಗೊಂಡ ಬಳಿಕ ಹೋರಾಟ ದಿಕ್ಕು ತಪ್ಪುತ್ತಿದ್ದು, ವಿದ್ಯಾರ್ಥಿಗಳು ಎಚ್ಚರದಿಂದ ಇರುವಂತೆ ತಿಳಿಸಿದರು.ಪ್ರತಿಭಟನೆಯಲ್ಲಿ ಮುಖಂಡರಾದ ರಾಜ್ಯ ಕಾರ್ಯದರ್ಶಿ ಲಕ್ಷ್ಮೀ ಅಶ್ವಿನ್‌ಗೌಡ, ಎಸ್.ಪಿ.ಸ್ವಾಮಿ, ಶ್ರೀಧರ್, ಅಶೋಕ್ ಜಯರಾಂ, ವಿದ್ಯಾನಾಗೇಂದ್ರ, ಶಿವಕುಮಾರ ಕೆಂಪಯ್ಯ, ಎಂ.ಕೆ.ನಾಗಾನಂದ್, ಬಿ.ಸಿದ್ದರಾಜು ಸೇರಿದಂತೆ ಹಲವಾರು ಮಂದಿ ಪಾಲ್ಗೊಂಡಿದ್ದರು.