ಸುರಪುರ: ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಹದ್ದಿನಾಳ ಗ್ರಾಮದ ಮಾದಿಗ ಸಮುದಾಯದ ಯುವಕ ಭೂಮಾನಂದನನ್ನು ಕೊಲೆ ಮಾಡಿದ ಆರೋಪಿಗಳನ್ನು ಕೂಡಲೇ ಬಂಧಿಸಿ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿ ಮಾದಿಗ ದಂಡೋರ (ಎಂಆರ್‌ಪಿಎಸ್) ಮಾದಿಗ ಮೀಸಲಾತಿ ಸಮಿತಿ ತಾಲೂಕು ಘಟಕದಿಂದ ಗುರುವಾರ ನಗರದ ತಹಸೀಲ್ದಾರ್ ಕಚೇರಿಯ ಎದುರು ಪ್ರತಿಭಟನೆ ನಡೆಸಲಾಯಿತು.ಸಮಿತಿಯ ಮುಖಂಡರು ಮಾತನಾಡಿ, ಕೊಲೆಗೆ ಕಾರಣರಾದವರಿಗೆ ಗಲ್ಲು ಶಿಕ್ಷೆ ಜತೆಗೆ ಮೃತರ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ನೀಡಬೇಕು. ಕುಟುಂಬದ ಒಬ್ಬರಿಗೆ ಸರ್ಕಾರಿ ನೌಕರಿ ನೀಡಬೇಕು. ತಪ್ಪಿದಲ್ಲಿ ರಾಜ್ಯಾದ್ಯಂತ ಮಾದಿಗ ಸಮುದಾಯದ ವತಿಯಿಂದ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.ಗ್ರೇಡ್ -2 ತಹಸೀಲ್ದಾರ್ ಮಲ್ಲಯ್ಯ ದಂಡು ಮೂಲಕ ಮುಖ್ಯಮಂತ್ರಿ, ಗೃಹ ಸಚಿವರಿಗೆ ಮನವಿ ಸಲ್ಲಿಸಲಾಯಿತು. ಪ್ರಮುಖರಾದ ಬಸವರಾಜ ಹಾದಿಮನಿ, ಭೀಮರಾಯ ದೇವತ್ಕಲ್, ಬಲಭೀಮಣ್ಣ ದೊಡ್ಡಮನಿ, ಲಕ್ಷ್ಮಣ ಆಲ್ಬಾಳ, ಈಶ್ವರ ಸತ್ಯಂಪೇಟ್, ಮಲ್ಲು ವಾಗಣಗೇರಾ, ರವಿ ವಾಗಣಗೇರಾ, ಅಂಬ್ರೇಶ ವಾಗಣಗೇರಾ, ಸೋಮು ಕಟ್ಟಿಮನಿ, ಬಸವರಾಜ ಡಿ.ಸಿ, ಅಯ್ಯಣ್ಣ ಬಿಲ್ಲವ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
----ಫೋಟೋ:ಸುರಪುರ ತಹಸೀಲ್ದಾರ್ ಕಚೇರಿಯ ಮುಂದೆ ಗುರವಾರ ಭೂಮಾನಂದ ಅವರ ಹತ್ಯೆ ಖಂಡಿಸಿ ಮಾದಿಗ ದಂಡೋರ ಸಮಿತಿಯ ಮುಖಂಡರು ಪ್ರತಿಭಟನೆ ನಡೆಸಿ ಕಾನೂನು ಕ್ರಮಕೈಗೊಳ್ಳಲು ಮನವಿ ನೀಡಿದರು.