ಸಾರಾಂಶ
ಸಾಗಾಣಿಕೆಗೆ ಕಡಿವಾಣ ಹಾಕುವಂತೆ
ಕನ್ನಡಪ್ರಭ ವಾರ್ತೆ ಮದ್ದೂರುಎಪಿಎಂಸಿ ಮಾರುಕಟ್ಟೆ ವ್ಯಾಪ್ತಿ ಬಿಟ್ಟು ಗ್ರಾಮೀಣ ಪ್ರದೇಶಗಳಲ್ಲಿ ಎಳನೀರು ಖರೀದಿ ಮತ್ತು ಸಾಗಾಣಿಕೆಗೆ ಕಡಿವಾಣ ಹಾಕುವಂತೆ ಒತ್ತಾಯಿಸಿ ಎಪಿಎಂಸಿ ವರ್ತಕರು ಮತ್ತು ಹಮಾಲಿಗಳು ಮಾರುಕಟ್ಟೆ ಆಡಳಿತ ಮಂಡಳಿ ಕಚೇರಿಗೆ ಶನಿವಾರ ಮುತ್ತಿಗೆ ಹಾಕಿ ಬೃಹತ್ ಪ್ರತಿಭಟನೆ ನಡೆಸಿದರು.
ವರ್ತಕರು ಮತ್ತು ಹಮಾಲಿಗಳು ಮಾರುಕಟ್ಟೆ ಪ್ರವೇಶ ದ್ವಾರದ ಗೇಟ್ ಗಳಿಗೆ ಬೀಗ ಜಡಿದು ಧರಣಿಗೆ ಇಳಿದ ಕಾರಣ, ಗ್ರಾಮೀಣ ಭಾಗದಿಂದ ಸಾಗಾಣಿಕೆ ಮಾಡಿಕೊಂಡು ಬಂದಿದ್ದ ಎಳನೀರು ತುಂಬಿದ ವಾಹನಗಳನ್ನು ಮಾರುಕಟ್ಟೆ ಪ್ರವೇಶ ದ್ವಾರದಲ್ಲಿ ಅಡ್ಡಾದಿಡ್ಡಿಯಾಗಿ ನಿಲ್ಲಿಸಿ, ಹೆದ್ದಾರಿ ವಾಹನಗಳ ಸಂಚಾರಕ್ಕೆ ಅಡ್ಡಿಪಡಿಸಿದರು.ಇದರಿಂದ ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್ ರಸ್ತೆಯಲ್ಲಿ ಸುಮಾರು 2 ಗಂಟೆಗೂ ಹೆಚ್ಚು ಕಾಲ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ನಂತರ ಸ್ಥಳಕ್ಕೆ ಧಾವಿಸಿದ ಪೊಲೀಸರು ವಾಹನಗಳನ್ನು ತೆರವುಗೊಳಿಸಿ ಸರ್ವೀಸ್ ರಸ್ತೆಯ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಎಪಿಎಂಸಿ ವರ್ತಕರ ಸಂಘದ ಉಪಾಧ್ಯಕ್ಷ ಉಮೇಶ್ ನೇತೃತ್ವದಲ್ಲಿ ಮಾರುಕಟ್ಟೆ ಆಡಳಿತ ಮಂಡಳಿ ಕಚೇರಿಗೆ ರೈತರ ಬೆಂಬಲದೊಂದಿಗೆ ಮುತ್ತಿಗೆ ಹಾಕಿದ ವರ್ತಕರು ಮತ್ತು ಹಮಾಲಿಗಳು ಕಚೇರಿ ಸಿಬ್ಬಂದಿಗೆ ದಿಗ್ಬಂಧನ ವಿಧಿಸಿ ಧರಣಿ ನಡೆಸಿದರು. ಎಪಿಎಂಸಿ ಜಿಲ್ಲಾ ಉಪ ನಿರ್ದೇಶಕಿ ರೇವತಿಬಾಯಿ ಹಾಗೂ ಮಾರುಕಟ್ಟೆ ಕಾರ್ಯದರ್ಶಿ ಲತಾ ಕುಮಾರಿ ವಿರುದ್ಧ ಘೋಷಣೆ ಕೂಗಿ, ಮಾರುಕಟ್ಟೆ ವ್ಯಾಪ್ತಿ ಬಿಟ್ಟು ಗ್ರಾಮೀಣ ಭಾಗದಿಂದ ಎಳನೀರು ಖರೀದಿ ಮಾಡುವುದು ಹಾಗೂ ಸಾಗಾಣಿಕೆ ಮಾಡುವುದಕ್ಕೆ ನಿಷೇಧ ಹೇರುವಂತೆ ಆಗ್ರಹಿಸಿದರು.ಕೆಲವರ್ತಕರು ಹಾಗೂ ದಲ್ಲಾಳಿಗಳು ರೈತರನ್ನು ವಂಚಿಸಿ ಮಾರುಕಟ್ಟೆ ವ್ಯಾಪ್ತಿ ಬಿಟ್ಟು ಹಳ್ಳಿಗಳು ಸೇರಿದಂತೆ ಆಯ್ದ ಸ್ಥಳಗಳಲ್ಲಿ ಅಕ್ರಮವಾಗಿ ಎಳನೀರು ಖರೀದಿ ಮಾಡಿ ಸಾಗಾಣಿಕೆ ಮಾಡುತ್ತಿದ್ದಾರೆ. ಇದರಿಂದ ರೈತರ ಶೋಷಣೆ ಜೊತೆಗೆ ಎಪಿಎಂಸಿ ಮಾರುಕಟ್ಟೆಗೆ ದಿನನಿತ್ಯ ತೆರಿಗೆ ರೂಪದಲ್ಲಿ ಸಂಗ್ರಹ ವಾಗಬೇಕಾಗಿದ್ದ ಲಕ್ಷಾಂತರ ರು. ಹಣ ನಷ್ಟವಾಗುತ್ತಿದೆ. ಅಲ್ಲದೆ ಮಾರುಕಟ್ಟೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವರ್ತಕರು ಮತ್ತು ದಲ್ಲಾಳಿಗಳು ಬೀದಿಗೆ ಬೀಳುವ ಪರಿಸ್ಥಿತಿ ಉಂಟಾಗಿದೆ ಎಂದು ಸಂಘದ ಉಪಾಧ್ಯಕ್ಷ ಉಮೇಶ್ ಆರೋಪಿಸಿದರು.
ಸರ್ಕಾರದ ಆದೇಶದಂತೆ ಈ ಹಿಂದೆ ಮಾರುಕಟ್ಟೆ ಬಿಟ್ಟು ಗ್ರಾಮೀಣ ಪ್ರದೇಶಗಳಲ್ಲಿ ಎಳನೀರು ಖರೀದಿ ಮಾಡುವುದು ಮತ್ತು ಸಾಗಾಣಿಕೆ ಮಾಡುವುದಕ್ಕೆ ನಿಷೇಧ ಹೇರಲಾಗಿತ್ತು. ಆನಂತರ ಎಪಿಎಂಸಿ ಮಾರುಕಟ್ಟೆ ಅಧಿಕಾರಿಗಳು ದಾಳಿ ನಡೆಸಿ ಅಕ್ರಮವಾಗಿ ಎಳನೀರು ಖರೀದಿ ಮಾಡುತ್ತಿದ್ದ ವರ್ತಕರಿಗೆ ದಂಡ ವಿಧಿಸಿದ್ದರು. ಈಗ ಮತ್ತೆ ಇಂಥ ಚಟುವಟಿಕೆಗಳು ನಡೆಯುತ್ತಿದ್ದರೂ ಸಹ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೆ ಬೇಜವಾಬ್ದಾರಿ ಪ್ರದರ್ಶನ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಎಪಿಎಂಸಿ ಮಾರುಕಟ್ಟೆ ಉಪನಿರ್ದೇಶಕರು ಹಾಗೂ ಸ್ಥಳೀಯ ಮಾರುಕಟ್ಟೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಮಾರುಕಟ್ಟೆ ವ್ಯಾಪ್ತಿ ಬಿಟ್ಟು ಹೊರಭಾಗದಲ್ಲಿ ಎಳನೀರು ಖರೀದಿ ಮತ್ತು ಸಾಗಾಣಿಕೆಗೆ ನಿಷೇಧ ಹೇರುವ ಮೂಲಕ ಸಮಸ್ಯೆಗೆ ಪರಿಹಾರ ರೂಪಿಸುವವರೆಗೆ ಪ್ರತಿಭಟನೆ ಹಿಂದಕ್ಕೆ ಪಡೆಯುವುದಿಲ್ಲ ಎಂದು ಪಟ್ಟು ಹಿಡಿದು ಧರಣಿ ಮುಂದುವರಿಸಿದರು.ನಂತರ ಸ್ಥಳಕ್ಕೆ ಧಾವಿಸಿದ ಉಪ ನಿರ್ದೇಶಕಿ ರೇವತಿಬಾಯಿ ಪ್ರತಿಭಟನಾ ನಿರತ ವರ್ತಕರ ಸಂಘದ ಮುಖಂಡರೊಂದಿಗೆ ಮಾತುಕತೆ ನಡೆಸಿದರು. ನಾಳೆಯಿಂದ ಮಾರುಕಟ್ಟೆ ವ್ಯಾಪ್ತಿಯ ಹೊರಗೆ ಎಳನೀರು ಖರೀದಿ ಮಾಡುವ, ಸಾಗಾಣಿಕೆ ಮಾಡುವ ವರ್ತಕರ ವಿರುದ್ಧ ಎಪಿಎಂಸಿ ಕಾಯ್ದೆ ಪ್ರಕಾರ ಕಾನೂನು ಕ್ರಮ ಜರುಗಿಸುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆ ಅಂತ್ಯಗೊಂಡಿತು.
ಪ್ರತಿಭಟನೆಯಲ್ಲಿ ವರ್ತಕರ ಸಂಘದ ಕಾರ್ಯದರ್ಶಿ ರಾಜು, ನಿರ್ದೇಶಕರಾದ ಚನ್ನಸಂದ್ರ ಯೋಗೇಶ್, ಶಿವಣ್ಣ, ಸಂತೋಷ್, ಸಂದೀಪ್, ಶಿವರಾಜು, ಕುಮಾರ, ಶ್ರೀಧರ, ಕೃಷ್ಣ, ಲೋಕೇಶ್, ರಮೇಶ್, ಎಂಪಿೀರಯ್ಯ, ಸಾಕಿಬ್ ಹುಲ್ಲು ಬೇಗ್, ಶಿವ, ಬೆಟ್ಟೇಗೌಡ, ರಾಜು ಸೇರಿ ಮಾರುಕಟ್ಟೆ ಹಮಾಲಿಗಳು ಭಾಗವಹಿಸಿದ್ದರು.