ಈ ಘಟನೆ ಸಂಬಂಧ ಈಗಾಗಲೇ ಓರ್ವ ವೈದ್ಯರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ಅಲ್ಲದೇ ಈ ಘಟನೆಯನ್ನು ತನಿಖೆ ನಡೆಸುವಂತೆ ಬೆಂಗಳೂರು ಅಥವಾ ಮೈಸೂರು ವೈದ್ಯರ ತಂಡವನ್ನು ನೇಮಿಸಲಾಗುವುದು. ತನಿಖೆ ವರದಿ ಬಂದ ಬಳಿಕ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಿ ರೂಪಾ ಅವರ ಸಾವಿಗೆ ನ್ಯಾಯ ಒದಗಿಸಲಾಗುವುದು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ನಗರದಲ್ಲಿರುವ ತಾಯಿ ಮತ್ತು ಮಕ್ಕಳ ಸರ್ಕಾರಿ ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯ ಹಾಗೂ ಕಿರುಕುಳದಿಂದ ರೂಪಾ ಎಂಬ ಗರ್ಭಿಣಿ ಸಾವನ್ನಪ್ಪಿದ್ದು, ಸಾವಿಗೆ ಕಾರಣರಾದವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ, ಆಸ್ಪತ್ರೆ ಮುಂಭಾಗ ವಿವಿಧ ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಯಿತು.

ಆಸ್ಪತ್ರೆ ಮುಂದೆ ಜಮಾಯಿಸಿದ ಪ್ರತಿಭಟನಾಕಾರರು, ಡಾ.ಭಾರತಿ ಮತ್ತು ಡಾ.ಕೌಸಲ್ಯ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗುತ್ತಾ ಸಂಬಂಧಪಟ್ಟವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು, ಸ್ಥಳಕ್ಕೆ ಜಿಲ್ಲಾಧಿಕಾರಿ ಹಾಗೂ ಡೀನ್ ಬರಬೇಕೆಂದು ಆಗ್ರಹಿಸಿದರು.

ಈ ಸಂದರ್ಭಧಲ್ಲಿ ಮಾತನಾಡಿದ ಪ್ರತಿಭಟನಾಕಾರರು, ತಾಲೂಕಿನ ಅರಳೀಪುರ ಗ್ರಾಮದ ಲೀಲಾವತಿ ಪರಶಿವ ಅವರ ಪುತ್ರಿ, ನಂಜರಾಜಪುರ (ಆಗ್ರಹಾರ) ಗ್ರಾಮದ ಸುರೇಶ್‌ ಅವರ ಪತ್ನಿ ರೂಪಾ ಕಳೆದ 9 ತಿಂಗಳಿಂದ ಡಾ. ಭಾರತಿ ಅವರ ಬಳಿ ಚಿಕಿತ್ಸೆ ಪಡೆಯುತ್ತಿದ್ದರು. ಮೇ 3ರಂದು ಹೆರಿಗೆ ಹಿನ್ನೆಲೆಯಲ್ಲಿ ಸರ್ಕಾರಿ ಜಿಲ್ಲಾ ಆಸ್ಪತ್ರೆಗೆ ರೂಪಾ ಅವರನ್ನು ದಾಖಲಿಸಲಾಗಿತ್ತು. ಈ ವೇಳೆ ಡಾ.ಭಾರತಿ ಆಸ್ಪತ್ರೆಗೆ ಬಂದು ನೋಡುತ್ತೇನೆ ಎಂದು ತಿಳಿಸಿದ್ದರೂ, ಮೇ 4 ಮತ್ತು 5ರಂದು ಆಸ್ಪತ್ರೆಗೆ ಭೇಟಿ ನೀಡದೇ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿದರು.

ಹೆರಿಗೆ ಕೊಠಡಿಗೆ ಸೇರಿಸಿದ ವೇಳೆ ಡಾ.ಕೌಸಲ್ಯ ಅವರು ಗರ್ಭಿಣಿ ರೂಪಾ ಕಡೆಯವರಿಂದ ₹5 ಸಾವಿರ ಹಣಕ್ಕೆ ಬೇಡಿಕೆ ಇಟ್ಟಿದ್ದು, ಹಣ ನೀಡದ ಹಿನ್ನೆಲೆಯಲ್ಲಿ ಅಸಭ್ಯವಾಗಿ ವರ್ತಿಸಿ, ಗರ್ಭಿಣಿಗೆ ಮಾನಸಿಕ ಹಾಗೂ ದೈಹಿಕವಾಗಿ ಕಿರುಕುಳ ನೀಡಿದ್ದಲ್ಲದೇ, ಹೆರಿಗೆ ವೇಳೆ ವೈದ್ಯರು ರೂಪಾ ಅವರ ಹೊಟ್ಟೆ ಮೇಲೆ ಬಲವಾಗಿ ಒತ್ತಿದ ತಕ್ಷಣ ಮಗು ಜನಿಸಿದರೂ, ರೂಪಾ ಪ್ರಜ್ಞೆತಪ್ಪಿ ಬಿದ್ದಿದ್ದಾಳೆ ಎಂದು ಆರೋಪಿಸಿದರು.

ಬಳಿಕ ಐಸಿಯುಗೆ ದಾಖಲಿಸಿ ಚಿಕಿತ್ಸೆ ನೀಡುತ್ತಿರುವಂತೆ ತೋರಿಸಲಾಗಿದ್ದು, ಸಂಜೆ ವೇಳೆಗೆ ಮೈಸೂರಿನ ಕಾವೇರಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಅಲ್ಲಿನ ವೈದ್ಯರು ರೂಪಾ ನಾಲ್ಕು ಗಂಟೆಗಳ ಹಿಂದೆಯೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆಂದು ಆರೋಪಿಸಿದರು.

ರೂಪಾ ಸಾವಿಗೆ ಕಾರಣರಾದ ಡಾ.ಭಾರತಿ, ಡಾ.ಕೌಸಲ್ಯ ಹಾಗೂ ಸಂಬಂಧಪಟ್ಟ ವೈದ್ಯರ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಂಡು ನ್ಯಾಯ ಒದಗಿಸಬೇಕು. ಸ್ಥಳಕ್ಕೆ ಸಿಮ್ಸ್ ಡೀನ್, ಡಿಎಚ್ ಒ, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆಗಮಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹ ಮಾಡಿದರು.

ಸ್ಥಳಕ್ಕೆ ಸಿಮ್ಸ್ ಡೀನ್‌ ಡಾ.ಮಂಜುನಾಥ್ ಆಗಮಿಸಿ ಪ್ರತಿಭಟನಾಕಾರರ ಮನವಿಯನ್ನು ಸ್ವೀಕರಿಸಿ ಪ್ರತಿಕ್ರಿಯೆ ನೀಡಿ, ಈ ಘಟನೆ ಸಂಬಂಧ ಈಗಾಗಲೇ ಓರ್ವ ವೈದ್ಯರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ಅಲ್ಲದೇ ಈ ಘಟನೆಯನ್ನು ತನಿಖೆ ನಡೆಸುವಂತೆ ಬೆಂಗಳೂರು ಅಥವಾ ಮೈಸೂರು ವೈದ್ಯರ ತಂಡವನ್ನು ನೇಮಿಸಲಾಗುವುದು. ತನಿಖೆ ವರದಿ ಬಂದ ಬಳಿಕ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಿ ರೂಪಾ ಅವರ ಸಾವಿಗೆ ನ್ಯಾಯ ಒದಗಿಸಲಾಗುವುದು ಎಂದು ಭರವಸೆ ನೀಡಿದರು.

ಪ್ರತಿಭಟನೆಯಲ್ಲಿ ಬಿಎಸ್‌ಪಿ ಹ.ರ. ಮಹೇಶ್, ನಾಗಯ್ಯ, ಬಸವಣ್ಣ ಬ್ಯಾಡಮೂಡ್ಲು, ಎಸ್‌ಡಿಪಿಐ ಪಕ್ಷದ ಅಬ್ರಾರ್‌ ಅಹಮ್ಮದ್, ಸೈಯದ್‌ಆರೀಫ್, ಕಲೀಲ್ವುಲ್ಲಾ, ಎಂ.ಮಹೇಶ್, ರೈತ ಸಂಘದ ಹೆಬ್ಬಸೂರು ಬಸವಣ್ಣ, ವಿವಿಧ ಸಂಘಟನೆಗಳ ಮುಖಂಡರಾದ ವಾಸು ಹೊಂಡರಬಾಳು, ಬಾಬು ರಾಮಸಮುದ್ರ, ಬೆಳ್ಳಿಯಪ್ಪ, ಮಹದೇವಸ್ವಾಮಿ, ಶಿವಶಂಕರ್ ಚೆಟ್ಟು, ಮೃತಳ ತಾಯಿ ಲೀಲಾವತಿ, ಪತಿ ಸುರೇಶ್ ಸೇರಿದಂತೆ ಇತರರು ಭಾಗವಹಿಸಿದ್ದರು.