ಅಂಜಲಿ ಅಂಬಿಗೇರ ಹತ್ಯೆ ಖಂಡಿಸಿ ವಿವಿಧ ಸಂಘಟನೆಗಳ ಪ್ರತಿಭಟನೆ

| Published : May 21 2024, 12:43 AM IST

ಅಂಜಲಿ ಅಂಬಿಗೇರ ಹತ್ಯೆ ಖಂಡಿಸಿ ವಿವಿಧ ಸಂಘಟನೆಗಳ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಅಂಜಲಿ ಅಂಬಿಗೇರ ಹತ್ಯೆ ಖಂಡಿಸಿ ಪಟ್ಟಣದಲ್ಲಿ ಬೀಳಗಿ ತಾಲೂಕು ಗಂಗಾಮತಸ್ಥರ ಕ್ಷೇಮಾಭಿವೃದ್ಧಿ ಸಂಘ ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಸೋಮವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಬೀಳಗಿಕರ್ನಾಟಕದಲ್ಲಿ ನಾಲ್ಕು ತಿಂಗಳನಲ್ಲಿ 480 ಕೊಲೆಗಳು, 179 ಅತ್ಯಾಚಾರ ಪ್ರಕರಣಗಳು ನಡೆದಿವೆ. ಇಲ್ಲಿರುವ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಇದೊಂದು ನಿಷ್ಮ್ರೀಯ ಸರ್ಕಾರ ಎಂದು ಹಿರಿಯ ಪತ್ರಕರ್ತ, ಸಾಹಿತಿ ವೀರೇಂದ್ರ ಶೀಲವಂತ ಆರೋಪಿಸಿದರು.

ಅಂಜಲಿ ಅಂಬಿಗೇರ ಹತ್ಯೆ ಖಂಡಿಸಿ ಪಟ್ಟಣದಲ್ಲಿ ತಾಲೂಕು ಗಂಗಾಮತಸ್ಥರ ಕ್ಷೇಮಾಭಿವೃದ್ಧಿ ಸಂಘ ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಸೋಮವಾರ ನಡೆದ ಬೃಹತ್ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರು.

ಹತ್ಯೆಯಾದ ಅಂಜಲಿ, ನೇಹಾ, ಸ್ನೇಹಾ ಇವರೆಲ್ಲರಿಗೂ ನ್ಯಾಯ ಸಿಗಬೇಕಾದರೆ ಪ್ರಾಮಾಣಿಕ ತನಿಖೆಯಾಗಬೇಕು ಎಂದು ಆಗ್ರಹಿಸಿದ ಅವರು, ರಾಜ್ಯದಲ್ಲಿ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ, ಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿರುವುದು ಖಂಡನೀಯ ಎಂದರು.

ಬಿಜೆಪಿ ಹಿರಿಯ ನಾಯಕ ವಿ.ಜಿ. ರೇವಡಿಗಾರ ಮಾತನಾಡಿ, ರಾಜ್ಯದಲ್ಲಿ ಮಹಿಳೆಯರಿಗೆ ಸುರಕ್ಷಿತವಾಗಿರಲು ರಕ್ಷಣೆ ಇಲ್ಲದಂತಾಗಿದೆ. ಕರ್ನಾಟಕದಲ್ಲಿ ಒಂದು ವರ್ಷದಲ್ಲಿ 465 ಮಹಿಳೆಯರ ಮೇಲೆ ಅತ್ಯಾಚಾರಗಳು ನಡೆದಿವೆ. ನಾಗರಿಕ ಸಮಾಜ ಎಚ್ಚೆತ್ತುಕೊಳ್ಳಬೇಕಾಗಿದೆ. ಸರ್ಕಾರ ಅತ್ಯಾಚಾರ, ಹತ್ಯೆ ಮಾಡಿದವರನ್ನು ಎನ್‌ಕೌಂಟರ್ ಮಾಡುವಂತಹ ಕಠಿಣ ಕಾನೂನು ಜಾರಿಗೆ ತರಬೇಕು. ಇದರಿಂದ ಮಾತ್ರ ಹತ್ಯೆಗಳನ್ನು ತಡೆಯಲು ಸಾಧ್ಯ ಎಂದು ಹೇಳಿದರು.

ವಕೀಲ ಎಂ.ಆರ್. ಕೋಲಕಾರ ಮಾತನಾಡಿ, ಅಪರಾಧ ಕೃತ್ಯಗಳಲ್ಲಿ ತೊಡಗಿ ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿರುವವರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಂಡು ಶಿಕ್ಷೆಗೆ ಗುರಿಪಡಿಸಬೇಕು. ಹತ್ಯೆಯಾದ ಕುಟುಂಬದವರಿಗೆ ನ್ಯಾಯ ಕೊಡಿಸುವುದರ ಜೊತೆಗೆ ಸೂಕ್ತ ಪರಿಹಾರ ನೀಡಬೇಕು. ಹತ್ಯೆ ಮತ್ತು ದೌರ್ಜನ್ಯಕ್ಕೆ ಒಳಗಾದ ಕುಟುಂಬದ ಒಬ್ಬ ಸದಸ್ಯರಿಗೆ ಸರ್ಕಾರಿ ನೌಕರಿ ನೀಡಿ ಕುಟುಂಬ ನಿರ್ವಹಣೆಗೆ ಅನುಕೂಲ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ನಗರದ ಪ್ರಮುಖ ರಸ್ತೆಯಲ್ಲಿ ಪ್ರತಿಭಟನೆ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಬಸ್‌ ನಿಲ್ದಾಣ ಎದುರು ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು. ತಾಲೂಕು ಗಂಗಾಮತಸ್ಥರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾಜೇಂದ್ರ ಬಾರಕೇರ್, ಉಪಾಧ್ಯಕ್ಷ ರಾಮಣ್ಣ ವಾಲಿಕಾರ, ಕಾರ್ಯದರ್ಶಿ ಪ್ರಕಾಶ ಸುಣಗಾರ, ಬಸವರಾಜ ಉಮಚಗಿಮಠ, ಪರಸಪ್ಪ ವಾಲಿಕಾರ, ಸಿದ್ದಪ್ಪ ಬಳಗಾನೂರ, ಪರಶುರಾಮ ಮಂಟೂರ, ಸಿದ್ದು ಗಿರಗಾಂವಿ, ಲಕ್ಷ್ಮಣ ಢವಳೇಶ್ವರ, ಶಿವಗಿರಿ ದಳವಾಯಿ, ರವಿ ಮಂಟೂರ, ರವಿ ಗೋಕಾವಿ, ದುರ್ಗಪ್ಪ ವಾಲಿಕಾರ, ಶಿವಾನಂದ ಗುಳಬಾಳ, ಶಿವನಗೌಡ ಪಾಟೀಲ, ಪ್ರಕಾಶ ಅಂಕಲಗಿ, ಬಸವರಾಜ ಕೋಲಕಾರ್ ಇತರರು ಇದ್ದರು.ಅಂಜಲಿ ಅಂಬಿಗೇರ ಹತ್ಯೆ ಖಂಡನೀಯ. ರಾಜ್ಯದ ಗೃಹ ಇಲಾಖೆ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲವಾಗಿದೆ. ಅಂಜಲಿ ಸೇರದಂತೆ ಅನೇಕ ಯುವತಿಯರ ಹತ್ಯೆಯಾಗಿದೆ. ಅವರೆಲ್ಲರಿಗೂ ನ್ಯಾಯ ಸಿಗಬೇಕು. ಮುಂದೆ ಇಂತಹ ಪ್ರಕರಣಗಳು ನಡೆಯದಂತೆ ಸರ್ಕಾರ ಎಚ್ಚೆತ್ತುಕೊಳ್ಳಬೇಕು.

- ಎಚ್.ಆರ್. ನಿರಾಣಿ ವಿಧಾನ ಪರಿಷತ್ ಸದಸ್ಯರು