ಸಾರಾಂಶ
ಸರ್ಕಾರದ ಧೋರಣೆ ತೀವ್ರವಾಗಿ ಬೇಸರ ಮೂಡಿಸಿದೆ. ಈಗಾಗಲೇ ಅನೇಕ ಬಾರಿ ಹೋರಾಟ ಕೈಗೊಳ್ಳಲಾಗಿದ್ದು, ಅನಿರ್ದಿಷ್ಟ ಧರಣಿಯ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಬಳ್ಳಾರಿ: ಸೇವೆ ಕಾಯಂಗೊಳಿಸಬೇಕು ಎಂದು ಆಗ್ರಹಿಸಿ ನಗರದ ಸರಳಾದೇವಿ ಸರ್ಕಾರಿ ಪ್ರಥಮದರ್ಜೆ ಕಾಲೇಜು ಮುಂಭಾಗ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿರುವ ಅತಿಥಿ ಉಪನ್ಯಾಸಕರು, ತರಕಾರಿ ಮಾರಾಟ ಮಾಡುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದರು.
ನೆರೆ ರಾಜ್ಯಗಳಲ್ಲಿ ಅತಿಥಿ ಉಪನ್ಯಾಸಕರ ಸೇವೆಯನ್ನು ಕಾಯಂಗೊಳಿಸಲಾಗಿದೆ. ಆದರೆ, ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತೋರುತ್ತಿದೆ. ಈ ಹಿಂದಿನ ಸರ್ಕಾರದಲ್ಲಿ ಪ್ರತಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ಅವರು ಅತಿಥಿ ಉಪನ್ಯಾಸಕರ ಸೇವೆಯನ್ನು ಕಾಯಂ ಮಾಡುವ ಮೂಲಕ ಉದ್ಯೋಗ ಭದ್ರತೆ ನೀಡಬೇಕು ಎಂದು ಆಗ್ರಹಿಸಿದ್ದರು. ಆದರೆ, ಈಗ ಅವರೇ ರಾಜ್ಯದ ಮುಖ್ಯಮಂತ್ರಿಯಾಗಿದ್ದು, ಉಪನ್ಯಾಸಕರ ಸೇವೆಯ ಬಗ್ಗೆ ಪೂರಕ ನಿಲುವು ತೆಗೆದುಕೊಳ್ಳುತ್ತಿಲ್ಲ. ಸರ್ಕಾರದ ಧೋರಣೆ ತೀವ್ರವಾಗಿ ಬೇಸರ ಮೂಡಿಸಿದೆ. ಈಗಾಗಲೇ ಅನೇಕ ಬಾರಿ ಹೋರಾಟ ಕೈಗೊಳ್ಳಲಾಗಿದ್ದು, ಅನಿರ್ದಿಷ್ಟ ಧರಣಿಯ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳ ಉಪನ್ಯಾಸಕರ ಪರಿಸ್ಥಿತಿ ತಿಳಿಸಲು ತರಕಾರಿಯನ್ನು ಮಾರಾಟ ಮಾಡುವ ಮೂಲಕ ವಿನೂತನ ಹೋರಾಟ ಕೈಗೊಳ್ಳಲಾಗಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು.ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಡಾ. ಟಿ. ದುರುಗಪ್ಪ, ಅತಿಥಿ ಉಪನ್ಯಾಸಕರಿಗೆ ಪ್ರತಿ ತಿಂಗಳು ವೇತನ ನೀಡಬೇಕು. ಯುಜಿಸಿ ನಿಯಮಾವಳಿಯಂತೆಯೇ ವೇತನ ನೀಡಬೇಕು ಎಂದು ಆಗ್ರಹಿಸಿದರು.
ಪ್ರಧಾನ ಕಾರ್ಯದರ್ಶಿ ಕೆ. ಬಸಪ್ಪ, ಸಿದ್ಧೇಶ್, ರುದ್ರಮುನಿ, ದಸ್ತಗಿರಿ, ಜಗದೀಶ್, ರಫೀಕ್, ಶುಭಾ, ಜ್ಯೋತಿ, ರುದ್ರಮ್ಮ ಸೇರಿದಂತೆ ಸಂಘದ ಸದಸ್ಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.